ಸುಗ್ರೀವಾಜ್ಞೆ ವಿರುದ್ಧ ಮುಂದುವರಿದ ರೈತರ ಹೋರಾಟ: ಶುಕ್ರವಾರ ರಾಷ್ಟ್ರೀಯ, ರಾಜ್ಯ ಹೆದ್ದಾರಿ ತಡೆಗೆ ಕರೆ

Update: 2020-09-24 16:39 GMT

ಬೆಂಗಳೂರು, ಸೆ.24: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ಹೊರಟಿರುವ ಭೂ ಸುಧಾರಣಾ ಕಾಯ್ದೆ ಸೇರಿದಂತೆ ಇನ್ನಿತರೆ ಸುಗ್ರೀವಾಜ್ಞೆಗಳ ವಿರುದ್ಧ ರೈತರ ಸರಣಿ ಹೋರಾಟ ಮುಂದುವರಿದಿದ್ದು, ನಾಳೆ (ಸೆ.25) ರಾಜ್ಯ ವ್ಯಾಪಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ರಸ್ತೆಗಳನ್ನು ತಡೆ ಮಾಡುವ ಮೂಲಕ ಪ್ರತಿಭಟನೆಗೆ ರೈತ ಸಂಘಟನೆಗಳು ಕರೆ ನೀಡಿವೆ.

ಗುರುವಾರ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಹಾಗೂ ರಾಜ್ಯ ಕಿಸಾನ್ ಮಹಾನ್ ಸಂಘ ಅಧ್ಯಕ್ಷ ಕುರುಬೂರು ಶಾಂತಕುಮಾರ್, ರೈತರಿಗೆ ಮಾರಕವಾಗುವ ರೈತ ಪರ ಕಾಯ್ದೆಗಳಿಗೆ ತಿದ್ದುಪಡಿ ಮಾಡಿರುವ ರಾಜ್ಯ ಹಾಗೂ ಕೇಂದ್ರ ಸರಕಾರದ ಗಮನ ಸೆಳೆಯಲು ರೈತ ಸಂಘಟನೆಗಳು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಬಂದ್ ನಡೆಸಲಿದ್ದಾರೆ ಎಂದು ತಿಳಿಸಿದರು.

ರೈತ, ಕಾರ್ಮಿಕ, ದಲಿತ ಹಾಗೂ ಅಸಂಘಟಿತ ಕಾರ್ಮಿಕರು ಒಳಗೊಂಡಂತೆ ಒಟ್ಟು 40ಕ್ಕೂ ಹೆಚ್ಚು ಸಂಘಟನೆಗಳು ಒಳಗೊಂಡಿರುವ ಐಕ್ಯ ಹೋರಾಟ ಸಮಿತಿಯು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಇದಕ್ಕೂ ಮುನ್ನ ವಾಹನಗಳನ್ನು ತಡೆಯುವ ಮೂಲಕ ರಸ್ತೆ ತಡೆ ಮಾಡಿ ಜೈಲ್ ಭರೋ ಚಳವಳಿ ನಡೆಸಲಿದ್ದೇವೆ ಎಂದು ಮಾಹಿತಿ ನೀಡಿದರು.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬರುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ರಸ್ತೆ ತಡೆ ಮಾಡುವ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಕಾಯ್ದೆಗಳನ್ನು ವಾಪಸ್ ಪಡೆಯಲು ಸರಕಾರಕ್ಕೆ ಒತ್ತಡ ಹೇರುತ್ತೇವೆ ಎಂದು ಅವರು ತಿಳಿಸಿದರು.

ಎಲ್ಲೆಲ್ಲಿ ರಸ್ತೆ ತಡೆ?: ತುಮಕೂರು, ಬಳ್ಳಾರಿ, ಹಳೇ ಮದ್ರಾಸ್ ರಸ್ತೆ ಹಾಗೂ ಹೊಸೂರು ಮುಖ್ಯ ರಸ್ತೆಗಳಲ್ಲಿ ಸೇರಿದಂತೆ ಬೆಂಗಳೂರಿನ ಅನೇಕ ಕಡೆಗಳಲ್ಲಿ ತಡೆ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ನಾರಾಯಣಸ್ವಾಮಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಸರಕಾರ ಏಕೆ ಮಾತನಾಡುತ್ತಿಲ್ಲ?

ಭೂ ಸುಧಾರಣಾ ಕಾಯ್ದೆ ಸೇರಿದಂತೆ ಇನ್ನಿತರೆ ಕಾಯ್ದೆಗಳ ಕುರಿತು ವಿವಾದ ಇದೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರೊಂದಿಗೆ ಏಕೆ ಚರ್ಚೆ ನಡೆಸುತ್ತಿಲ್ಲ ಹಾಗೂ ಸೂಕ್ತ ಮಾಹಿತಿ ನೀಡುತ್ತಿಲ್ಲ.

-ಕುರುಬೂರು ಶಾಂತಕುಮಾರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News