ಬಾಂಗ್ಲಾ ನಿವಾಸಿಗಳ ನೆಪದಲ್ಲಿ ಜೋಪಡಿ ತೆರವು: ಸೂಕ್ತ ಪುನರ್ ವಸತಿ ಯೋಜನೆ ರೂಪಿಸಲು ಹೈಕೋರ್ಟ್ ಸೂಚನೆ

Update: 2020-09-24 16:43 GMT

ಬೆಂಗಳೂರು, ಸೆ.24: ಮಾರತಹಳ್ಳಿ ಬಳಿ ವಾಸಿಸುತ್ತಿದ್ದ ವಲಸೆ ಕಾರ್ಮಿಕರ ಜೋಪಡಿ ತೆರವಿನಿಂದ ನಿರಾಶ್ರಿತರಾಗಿರುವವರಿಗೆ ಪುನರ್ ವಸತಿ ಕಲ್ಪಿಸುವ ಸಂಬಂಧ ರಾಜ್ಯ ಸರಕಾರ ಸಿದ್ಧಪಡಿಸಿದ್ದ ಯೋಜನೆ ತಿರಸ್ಕರಿಸಿರುವ ಹೈಕೋರ್ಟ್, ಉತ್ತಮ ಯೋಜನೆ ರೂಪಿಸುವಂತೆ ತಾಕೀತು ಮಾಡಿದೆ.

ಈ ಕುರಿತು ಪೀಪಲ್ಸ್ ಫಾರ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಂಘಟನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಪುನರ್ವಸತಿ ಯೋಜನೆ ಸಂಬಂಧ ಸಿದ್ಧಪಡಿಸಿದ್ದ ವರದಿಯನ್ನು ಸರಕಾರದ ಪರ ವಕೀಲರು ಪೀಠಕ್ಕೆ ಸಲ್ಲಿಸಿದರು.

ವರದಿ ಪರಿಶೀಲಿಸಿದ ಪೀಠ, ಆನೇಕಲ್ ಬಳಿ ಪುನರ್ವಸತಿ ಕಲ್ಪಿಸುವುದಾಗಿ ವರದಿ ನೀಡಿದ್ದೀರಿ. ಅದೂ ಒಂದು ವರ್ಷದ ಮಟ್ಟಿಗೆ ಮಾತ್ರ. 10x10 ಅಳತೆಯ ತಾತ್ಕಾಲಿಕ ಶೆಡ್ ನೀಡುವುದಾಗಿ ಹೇಳಿದ್ದೀರಿ. ಇದರಿಂದ ಕಾರ್ಮಿಕರಿಗೆ ಯಾವ ರೀತಿ ಉಪಯೋಗವಾಗಲಿದೆ ಎಂದು ಪ್ರಶ್ನಿಸಿತು. ಜತೆಗೆ, ಸೂರು ಕಳೆದುಕೊಂಡಿರುವ ಕಾರ್ಮಿಕರಿಗೆ ಸೂಕ್ತ ಪುನರ್ವಸತಿ ಕಲ್ಪಿಸಲು ಉತ್ತಮ ಯೋಜನೆ ರೂಪಿಸಿಕೊಂಡು ಬನ್ನಿ ಎಂದು ತಾಕೀತು ಮಾಡಿ, ವಿಚಾರಣೆಯನ್ನು ಅ.9ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರಾದ ಕ್ಲಿಫ್ಚನ್ ರೋಜಾರಿಯೊ ಅವರು ವಾದಿಸಿ, ಕಾರ್ಮಿಕರು ವಾಸವಿದ್ದ ಜಾಗದಲ್ಲಿಯೇ ಅವರಿಗೆ ಪುನರ್ ವಸತಿ ಕಲ್ಪಿಸಬೇಕು. ಆದರೆ ಸರಕಾರ ಆನೇಕಲ್ ಬಳಿಯ ಜಿಗಣಿ ಸಮೀಪ ಪುನರ್ವಸತಿ ಕಲ್ಪಿಸುವುದಾಗಿ ಹೇಳಿದೆ. ಕಾರ್ಮಿಕರು ಕೆಲಸಕ್ಕೆ ಹೋಗುವ ಜಾಗದಲ್ಲಿ ಸೂರು ಕೊಡುವ ಬದಲಿಗೆ ಮತ್ತೆಲ್ಲೋ ದೂರದಲ್ಲಿ ಕೊಟ್ಟರೆ ಅವರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಜತೆಗೆ 1 ವರ್ಷ ಮಾತ್ರ ಅಲ್ಲಿರಬಹುದು ಎಂದು ಹೇಳಿದ್ದಾರೆ. ಇದು ನ್ಯಾಯಸಮ್ಮತವಲ್ಲ ಎಂದು ಆಕ್ಷೇಪಿಸಿದರು.

ಸರಕಾರದ ವರದಿ ಸಲ್ಲಿಕೆ: ಕಳೆದ ವರ್ಷ ಅಕ್ರಮವಾಗಿ ತೆರವುಗೊಂಡ ಜೋಪಡಿ ನಿವಾಸಿಗಳಿಗೆ ಹೈಕೋರ್ಟ್ ಆದೇಶದ ಮೇರೆಗೆ ಪುನರ್ವಸತಿ ಕಲ್ಪಿಸಲು ಸರಕಾರ ಮುಂದಾಗಿದೆ. ಅದರಂತೆ ಆನೇಕಲ್ ತಾಲೂಕಿನ ಜಿಗಣಿ ಹೋಬಳಿಯ ಗುಡ್ಡೇನಹಳ್ಳಿ ಸಮೀಪದ ಸರ್ವೇ ನಂಬರ್ 23ರಲ್ಲಿ 2 ಎಕರೆ ಜಾಗ ಗುರುತಿಸಿದ್ದು, ಆ ಜಾಗದಲ್ಲಿ 10x10 ಅಳತೆಯ ನಿವೇಶನದಲ್ಲಿ 245 ತಾತ್ಕಾಲಿಕ ಶೆಡ್‍ಗಳನ್ನು ತಲಾ 29 ಸಾವಿರ ವೆಚ್ಚದಲ್ಲಿ ನಿರ್ಮಿಸಿಕೊಡಲಾಗುತ್ತದೆ. ಇನ್ನು ತೆರವು ಸಂದರ್ಭದಲ್ಲಿ ಆಗಿರುವ ನಷ್ಟಕ್ಕೆ ಪ್ರತಿ ಕುಟುಂಬಕ್ಕೆ 14,100 ರೂಪಾಯಿ ಪರಿಹಾರ ಕೊಡಲಾಗುವುದು. ಇನ್ನು ಸರಕಾರ ನೀಡುವ ಶೆಡ್‍ಗಳು ಒಂದು ವರ್ಷದ ಮಟ್ಟಿಗೆ ತಾತ್ಕಾಲಿಕವಾಗಿದ್ದು, ವರ್ಷದ ಬಳಿಕ ಕಾರ್ಮಿಕರೇ ಸೂಕ್ತ ನೆಲೆ ಕಂಡುಕೊಳ್ಳಬೇಕು ಎಂದು ಸರಕಾರ ತನ್ನ ವರದಿಯಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News