ಪಿಎಚ್‍ಡಿ ಕೌನ್ಸೆಲಿಂಗ್ ನಡೆಸಲು ವಿವಿ ವಿಫಲ: ಅಭ್ಯರ್ಥಿಗಳಿಂದ ಆಕ್ಷೇಪ

Update: 2020-09-24 17:09 GMT

ಬೆಂಗಳೂರು, ಸೆ.24: ಬೆಂಗಳೂರು ಕೇಂದ್ರ (ನಗರ) ವಿಶ್ವವಿದ್ಯಾಲಯ ಪಿಎಚ್‍ಡಿಗೆ ಅರ್ಜಿ ಆಹ್ವಾನಿಸಿ ಒಂದೂವರೆ ವರ್ಷ ಕಳೆದರೂ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ನಡೆಸುವಲ್ಲಿ ವಿಫಲವಾಗಿದೆ.

ವಿವಿಯು 2019ರ ಮಾರ್ಚ್‍ನಲ್ಲಿಯೇ 18 ವಿಷಯಗಳಲ್ಲಿ ಪಿಎಚ್.ಡಿಗೆ ಅರ್ಜಿ ಆಹ್ವಾನಿಸಿತ್ತು. ಫೆಬ್ರವರಿಯಲ್ಲಿ ಅರ್ಜಿ ಸಲ್ಲಿಕೆ ಅಂತ್ಯ ಮಾಡಿ ಮ್ಯಾನೇಜ್‍ಮೆಂಟ್ ಮತ್ತು ವಾಣಿಜ್ಯ ಹೊರತಾಗಿ ಉಳಿದ ಎಲ್ಲ ವಿಷಯಗಳಿಗೆ ಕೌನ್ಸೆಲಿಂಗ್ ಮಾಡಿ ಅಭ್ಯರ್ಥಿಗಳ ನೋಂದಣಿ ಮಾಡಿಕೊಂಡಿದೆ. ಆದರೆ, ಈ ಎರಡು ವಿಭಾಗದ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ನಡೆಯದಿರುವುದರಿಂದ ಅಭ್ಯರ್ಥಿಗಳು ವಿವಿಯ ಅಧಿಸೂಚನೆಗಾಗಿ ಕಾಯುತ್ತಿದ್ದಾರೆ. ವಿವಿಯು ಪ್ರತಿ ಬಾರಿ ಒಂದಲ್ಲೊಂದು ನೆಪ ಇಟ್ಟುಕೊಂಡು ಪ್ರಕ್ರಿಯೆ ಮುಂದೂಡುತ್ತಲೇ ಬರುತ್ತಿದೆ.

ಕೊರೋನ ನೆಪ: ಮಾರ್ಚ್‍ನಲ್ಲಿ ಲಾಕ್‍ಡೌನ್ ಜಾರಿಯಾದ ನಂತರ ಕೊರೋನ ನೆಪ ಹೇಳುತ್ತಿತ್ತು. ಇದೀಗ ಆನ್‍ಲೈನ್ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಆಫ್‍ಲೈನ್‍ನಲ್ಲೇ ಪರೀಕ್ಷೆಗಳು ನಡೆಸಲು ಸರಕಾರ ಮುಂದಾಗಿದ್ದರೂ ಪಿಎಚ್.ಡಿ ಕೌನ್ಸೆಲಿಂಗ್ ಮಾಡುವುದಕ್ಕೆ ಮಾತ್ರ ವಿವಿ ಆಲೋಚನೆ ಮಾಡದಿರುವುದು ಸಾವಿರಾರು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು ಕೇಂದ್ರ ವಿವಿ ಪಿಎಚ್‍ಡಿ ಅರ್ಜಿ ಆಹ್ವಾನಿಸುವುದಕ್ಕೆ ರಾಜ್ಯಪಾಲರ ಅನುಮತಿಯನ್ನೇ ಪಡೆದಿರಲಿಲ್ಲ. ಈ ವಿಚಾರದ ಬಗ್ಗೆ ಮಾಧ್ಯಮಗಳು ಬೆಳಕಿಗೆ ತಂದ ನಂತರ ಅನುಮತಿ ಪಡೆಯಿತು. ತಾಂತ್ರಿಕ ಕಾರಣ ಹೇಳಿಕೊಂಡು ಹಲವು ಬಾರಿ ಕೌನ್ಸೆಲಿಂಗ್ ಮುಂದೂಡಿತ್ತು.

ಅಧಿಕಾರಿಗಳ ಕಿತ್ತಾಟ: ಬೆಂ.ಕೇಂದ್ರ ವಿವಿಯಲ್ಲಿ ಅಧಿಕಾರಿಗಳು ಮತ್ತು ಕುಲಪತಿ ನಡುವೆ ಸಮನ್ವಯತೆ ಕೊರತೆ ಇದೆ. ಕುಲಪತಿ ಹೇಳಿದ್ದನ್ನು ಅಧಿಕಾರಿಗಳು ಮತ್ತು ಅಧಿಕಾರಿಗಳ ಸಲಹೆಗಳನ್ನು ಕುಲಪತಿ ಸ್ವೀಕರಿಸದೆ ಇರುವುದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ವಿವಿಯ ವ್ಯಾಪ್ತಿಯಲ್ಲೇ ಇರದ ಪ್ರಾಧ್ಯಾಪಕರೊಬ್ಬರನ್ನು ಪಿಎಚ್.ಡಿ ಮಾರ್ಗದರ್ಶಕರಾಗಿ ಮಾಡುವಂತೆ ಕುಲಪತಿಗಳು ಸೂಚನೆ ನೀಡಿದ್ದರು. ಇದು ಕಾನೂನಿನ ವಿರುದ್ಧ ಎಂದು ಅಧಿಕಾರಿಗಳು ತಿಳಿಸಿದ್ದರು. ಇದರಿಂದಾಗಿ ಕುಲಪತಿ ಕೌನ್ಸೆಲಿಂಗ್ ಮಾಡಲು ಅಡ್ಡಿ ಪಡಿಸುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.

ಕೊರೋನ ಹಿನ್ನೆಲೆಯಲ್ಲಿ ಕೌನ್ಸೆಲಿಂಗ್ ಸ್ಥಗಿತ ಮಾಡಲಾಗಿತ್ತು. ಆನ್‍ಲೈನ್‍ನಲ್ಲಿ ಕೌನ್ಸೆಲಿಂಗ್ ಮಾಡಲು ನಿರ್ಧರಿಸಿದ್ದೆವು. ಬಹುತೇಕರು ಆಫ್‍ಲೈನ್‍ನಲ್ಲೇ ಮಾಡುವಂತೆ ಮನವಿ ಮಾಡಿದರು. ಇದರಿಂದಾಗಿ ವಿಳಂಬವಾಗಿದೆ. ಶೀಘ್ರದಲ್ಲೇ ಆಫ್‍ಲೈನ್‍ನಲ್ಲಿ ಮಾಡುತ್ತೇವೆ.

-ಡಾ. ಬಿ. ರಮೇಶ್, ಕುಲಸಚಿವ (ಮೌಲ್ಯಮಾಪನ), ಬೆಂ.ನಗರ ವಿವಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News