ಚಾಲಕರಿಗೆ ಪರಿಹಾರ ವಿತರಣೆ ವಿಚಾರ: ರಾಜ್ಯ ಸರಕಾರದ ವಿರುದ್ಧ ವಿಪಕ್ಷ ಸದಸ್ಯರ ವಾಗ್ದಾಳಿ

Update: 2020-09-24 17:11 GMT

ಬೆಂಗಳೂರು, ಸೆ.24: ರಾಜ್ಯ ಸರಕಾರವು ಕೊರೋನ ಲಾಕ್‍ಡೌನ್ ಸಂದರ್ಭದಲ್ಲಿ 7.50 ಲಕ್ಷ ಆಟೊ ಹಾಗೂ ಟ್ಯಾಕ್ಸಿ ಚಾಲಕರಿಗೆ ತಲಾ 5000 ರೂ.ಪರಿಹಾರ ನೀಡುವುದಾಗಿ ಘೋಷಿಸಿದ್ದ ಪ್ಯಾಕೇಜ್‍ನಲ್ಲಿ ಕೇವಲ 2.14 ಲಕ್ಷ ಚಾಲಕರಿಗೆ ಮಾತ್ರ ಪರಿಹಾರ ವಿತರಣೆ ಮಾಡಿದ್ದು ಏಕೆ? ಉಳಿದ ಚಾಲಕರ ಪ್ರಶ್ನೆ ಏನು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಗುರುವಾರ ವಿಧಾನಸಭೆಯಲ್ಲಿ ಪೂರಕ ಅಂದಾಜು ಮಂಡಿಸಿದ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ನೀಡಿದ ಅಂಕಿ ಅಂಶಗಳು ವಿಪಕ್ಷಗಳ ಸದಸ್ಯರನ್ನು ಕೆರಳುವಂತೆ ಮಾಡಿತು.

ಸರಕಾರ ಯಾವ ಆಧಾರದ ಮೇಲೆ 7.50 ಲಕ್ಷ ಚಾಲಕರು ಎಂದು ಹೇಳಿದೆ. 97 ಕೋಟಿ ರೂ.ಗಳ ಈ ಪ್ಯಾಕೇಜ್ ಘೋಷಣೆ ಮಾಡಿ ಆರು ತಿಂಗಳು ಕಳೆದರೂ ಕೇವಲ 2.14 ಲಕ್ಷ ಚಾಲಕರಿಗೆ ಮಾತ್ರ ಪರಿಹಾರ ನೀಡಿದೆ. ಇನ್ನುಳಿದ 5 ಲಕ್ಷ ಚಾಲಕರಿಗೆ ಯಾವಾಗ ಪರಿಹಾರ ನೀಡುತ್ತಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಸರಕಾರ ಮಂಡಿಸಿರುವ ಪೂರಕ ಅಂದಾಜಿಗೆ ಒಪ್ಪಿಗೆ ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ನೀವು ಪ್ರಸ್ತಾಪಿಸಿದ 97 ಕೋಟಿ ರೂ.ವಿಚಾರದಲ್ಲಿ ಮಾತ್ರ ಆಕ್ಷೇಪವಿದೆ. ಸಹಾಯ ಮಾಡುವುದಕ್ಕೆ ಮನಸು ಮುಖ್ಯ, ಚಾಲಕರು ಅರ್ಜಿ ಹಾಕಿಲ್ಲ, ಬ್ಯಾಡ್ಜ್ ಇಲ್ಲ ಇತ್ಯಾದಿ ತಾಂತ್ರಿಕ ಕಾರಣಗಳು ಮುಖ್ಯವಲ್ಲ. ಆಟೊ ಚಾಲಕರು, ಟ್ಯಾಕ್ಸಿ ಚಾಲಕರ ಸಂಘದವರನ್ನು ಕರೆಸಿ ಸಭೆ ಮಾಡಿ ಅವರಿಗೆಲ್ಲ ಪರಿಹಾರ ಸಿಗುವಂತೆ ಮಾಡಿ ಎಂದು ಅವರು ಹೇಳಿದರು.

ನಾವು ಪರಿಹಾರ ವಿತರಣೆ ಮಾಡಲು ಅರ್ಜಿ ಆಹ್ವಾನಿಸಿದೆವು, 2.45 ಲಕ್ಷ ಅರ್ಜಿಗಳು ಬಂದಿವೆ. ಈ ಪೈಕಿ 2.14 ಲಕ್ಷ ಮಂದಿಗೆ ಪರಿಹಾರ ನೀಡಿದ್ದೇವೆ. ಇನ್ನು ಬಾಕಿ 30 ಸಾವಿರ ಮಂದಿಗೂ ಶೀಘ್ರವೆ ಪರಿಹಾರ ವಿತರಣೆ ಮಾಡಲಾಗುವುದು. ಇನ್ನೂ ಯಾರಾದರೂ ಅರ್ಹರು ಇದ್ದರೆ ಅರ್ಜಿ ಸಲ್ಲಿಸಿದರೆ ಸರಕಾರ ಪರಿಗಣಿಸಲಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಪಿ.ಟಿ.ಪರಮೇಶ್ವರ್ ನಾಯ್ಕ್, ತುಕಾರಾಂ, ಡಾ.ಅನ್ನದಾನಿ, ಪ್ರಿಯಾಂಕ್ ಖರ್ಗೆ ಸೇರಿದಂತೆ ಇನ್ನಿತರರು ಸಚಿವರ ಪ್ರತಿಕ್ರಿಯೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಆಗ ಬಿಜೆಪಿ ಸದಸ್ಯ ರಘುಪತಿ ಭಟ್ ಮಾತನಾಡಿ, ಚಾಲಕರಿಗೆ ಅರ್ಜಿ ಸಲ್ಲಿಸಲು ಸಮಸ್ಯೆ ಇರುವುದು ನಿಜ. ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವಾಗ ಚಾಲಕ/ಮಾಲಕ(ಓನರ್ ಕಮ್ ಡ್ರೈವರ್), ಬ್ಯಾಡ್ಜ್ ತೆಗೆದು ಹಾಕಿದರೆ ಹೆಚ್ಚು ಚಾಲಕರಿಗೆ ಇದರ ಪ್ರಯೋಜನ ಸಿಗುತ್ತದೆ. ಕೇಂದ್ರ ಸರಕಾರ, ಸುಪ್ರೀಂಕೋರ್ಟ್ ಬ್ಯಾಡ್ಜ್ ಅನ್ನು ಕಡ್ಡಾಯ ಮಾಡುವಂತಿಲ್ಲ ಎಂದು ಹೇಳಿದೆ. ಸರಕಾರವು ಈ ಬಗ್ಗೆ ಗಮನ ಹರಿಸಬೇಕು ಎಂದರು.

ಸದಸ್ಯರ ಆಗ್ರಹಕ್ಕೆ ಸಹಮತ ವ್ಯಕ್ತಪಡಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ, ಚಾಲಕರು, ಮಾಲಕರ ಸಂಘದ ಸದಸ್ಯರ ಜತೆ ಸಭೆ ನಡೆಸಿ, ಸಮಸ್ಯೆಯನ್ನು ಬಗೆಹರಿಸುವಂತೆ ಸರಕಾರಕ್ಕೆ ಸೂಚಿಸಿದರು.

4008 ಕೋಟಿ ರೂ.ಪೂರಕ ಅಂದಾಜಿಗೆ ಒಪ್ಪಿಗೆ

ವಿಧಾನಸಭೆಯಲ್ಲಿ 4008 ಕೋಟಿ ರೂ.ಗಳ ಪೂರಕ ಅಂದಾಜಿಗೆ ವಿಧಾನಸಭೆಯಲ್ಲಿ ಗುರುವಾರ ಒಪ್ಪಿಗೆ ನೀಡಲಾಯಿತು. ಸರಕಾರಿ ಆಸ್ಪತ್ರೆಗಳಿಗೆ ಕೊರೋನ ಉಪಕರಣಗಳಿಗಾಗಿ 1090 ಕೋಟಿ ರೂ., ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ 400 ಕೋಟಿ ರೂ., ಕೆಎಸ್ಸಾರ್ಟಿಸಿ, ಈಶಾನ್ಯ ಸಾರಿಗೆ, ವಾಯುವ್ಯ ಸಾರಿಗೆ, ಬಿಎಂಟಿಸಿಗೆ ಸರಕಾರದಿಂದ ವೇತನ ನೀಡಲು 543 ಕೋಟಿ ರೂ., ವೈದ್ಯ ಕಾಲೇಜುಗಳಲ್ಲಿ ಸಿವಿಲ್ ಕಾಮಗಾರಿಗೆ 165 ಕೋಟಿ ರೂ., ಆಟೋ, ಟ್ಯಾಕ್ಸಿ ಚಾಲಕರಿಗೆ 97.51 ಕೋಟಿ ರೂ., ಅಂಗನವಾಡಿ ಕಟ್ಟಡಗಳ ಕಾಮಗಾರಿಗೆ 87 ಕೋಟಿ ರೂ., ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ 57 ಕೋಟಿ ರೂ., ವಾರ್ತಾ ಇಲಾಖೆಗೆ 56 ಕೋಟಿ ರೂ., ರಾಷ್ಟ್ರೀಯ ಆರೋಗ್ಯ ಮಿಷನ್‍ಗೆ 53 ಕೋಟಿ ರೂ., ಗ್ರಾಮೀಣ ನೀರು ಪೂರೈಕೆಗೆ 54 ಕೋಟಿ ರೂ. ಸೇರಿದಂತೆ ಇನ್ನಿತರ ಯೋಜನೆಗಳಿಗಾಗಿ ಅಂದಾಜು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News