ಲಘುವೆಂದು ಕರೆದುಕೊಳ್ಳುತ್ತಾ ಗುರುವಾಗುವ ಪ್ರಬಂಧಗಳು!

Update: 2020-09-24 19:30 GMT

ಬಾಲಸುಬ್ರಹ್ಮಣ್ಯ ಕಂಜರ್ಪಣೆ ಇಂದು ಬರಹಲೋಕದಲ್ಲಿ ಚಿರಪರಿಚಿತ ಹೆಸರು. ವೃತ್ತಿಯಲ್ಲಿ ಖ್ಯಾತ ವಕೀಲರಾಗಿದ್ದರೂ ಪ್ರವೃತ್ತಿಯಲ್ಲಿ ಬರಹಗಾರರು. ತಮ್ಮ ಲೇಖನಗಳಲ್ಲಿ ವರ್ತಮಾನದ ಎಲ್ಲ ವಲಯಗಳ ರಾಜಕೀಯಗಳನ್ನೂ ವ್ಯಂಗ್ಯದ ಅಲಗಿನಿಂದ ಚುಚ್ಚುತ್ತಾ, ಮಾನವೀಯ ಸೆಲೆಯ ಹುಡುಕಾಟದಲ್ಲಿರುವವರು. ಇಂದಿನ ರಾಜಕೀಯ ಸನ್ನಿವೇಶಗಳನ್ನು ಪ್ರಖರವಾಗಿ ವಿಮರ್ಶಿಸುತ್ತಾ, ಭವಿಷ್ಯದ ಭಾರತಕ್ಕಾಗಿ ಮಿಡಿಯುತ್ತಿರುವವರು. ಕವಿ ಹೃದಯಿ ಲೇಖಕ, ತಮ್ಮನ್ನು ಸಾಹಿತ್ಯದ ಹಲವು ಪ್ರಕಾರಗಳಿಗೆ ಒಡ್ಡಿಕೊಂಡಿದ್ದಾರೆ. ಕವನ, ಕತೆ, ಲೇಖನ, ವಿಮರ್ಶೆ ಇಲ್ಲೆಲ್ಲ ಗುರುತಿಸಿಕೊಂಡಿರುವ ಕಂಜರ್ಪಣೆಯವರ ಮೊತ್ತ ಮೊದಲ ಲಘು ಪ್ರಬಂಧ ‘ಎನ್ನ ಕಿವುಡನ ಮಾಡಯ್ಯ’ ಕೃತಿ. ‘‘...ಬದುಕೇ ಒಂದು ಕ್ರೆಡಿಟ್ ಕಾರ್ಡ್. ಹಣ ಸಂಪಾದಿಸಿದಾಗ ಹುಣ್ಣಿಮೆಯಂತೆ ತುಂಬಿಕೊಂಡು, ಬಿಲ್ ಪಾವತಿಸಿ ಖಾಲಿಯಾದಾಗ ಅಮಾವಾಸ್ಯೆಯಂತೆ ಕಪ್ಪಾಗಿ ಪಕ್ಷಾಂತರಗೊಳ್ಳುವ ಸ್ಥಿತ್ಯಂತರಗಳು ನಮ್ಮನ್ನು ಘಾಸಿಗೊಳಿಸದಂತೆ ಕಾಪಾಡುವ ವಿಧಾನ ನನ್ನ ಪಾಲಿಗಂತೂ ಇಂತಹ ಸುಖಬರಹಗಳು...’’ ಎಂದು ತಮ್ಮ ಕೃತಿಯ ಕುರಿತಂತೆ ಲೇಖಕರು ಹಂಚಿಕೊಳ್ಳುತ್ತಾರೆ.

ಕನ್ನಡ ಸಾಹಿತ್ಯದಲ್ಲಿ ಪ್ರಬಂಧಗಳು, ಲಲಿತ ಪ್ರಬಂಧಗಳು ಇತ್ತೀಚಿನ ದಿನಗಳಲ್ಲಿ ಹಿಂದುಳಿದು ಬಿಟ್ಟಿವೆ. ಇತ್ತೀಚೆಗೆ ಲಲಿತ ಪ್ರಬಂಧಗಳು ಹರಟೆ, ಹಾಸ್ಯ ಪ್ರಬಂಧಗಳಾಗಿ ಪರಿವರ್ತನೆಗೊಂಡಿವೆ. ಇಂತಹ ಸಂದರ್ಭದಲ್ಲಿ ಲಲಿತ ಪ್ರಬಂಧವನ್ನು ತುಸು ಸರಳಗೊಳಿಸಿ, ಲಘುಪ್ರಬಂಧವನ್ನಾಗಿಸಿದ್ದಾರೆ ಕಂಜರ್ಪಣೆ. ಆದರೆ ಆಯ್ಕೆ ಮಾಡಿಕೊಂಡಿರುವ ವಸ್ತು ಲಘುವಾದುದಲ್ಲ. ಗಂಭೀರವಾದ ವಿಷಯಗಳನ್ನೇ ಲವಲವಿಕೆಯಿಂದ ವಿವರಿಸುತ್ತಾ...ನಮ್ಮನ್ನು ಯೋಚಿಸುವುದಕ್ಕೆ ಹಚ್ಚುತ್ತಾರೆ. ಆದುದರಿಂದಲೇ, ಲಘು ಎನ್ನುವ ಪದವನ್ನು ಮೀರಿದ ಗುರು-ತರವಾದ ಹೊಣೆಗಾರಿಕೆಯನ್ನು ಈ ಕೃತಿ ವಹಿಸಿಕೊಂಡಿದೆ.

ಇಲ್ಲಿ ಒಟ್ಟು 12 ಪ್ರಬಂಧಗಳಿವೆ. ‘ಎನ್ನ ಕಿವುಡನ ಮಾಡಯ್ಯ...’ ಶಬ್ದ ಜಗತ್ತನ್ನು ವ್ಯಂಗ್ಯ ಮಾಡುತ್ತಾ, ವೌನ-ಮಾತಿನ ಸಮನ್ವಯವನ್ನು ಕಂಡುಕೊಳ್ಳುವ ಬರಹ. ‘‘ವೌನವಾಗಿದ್ದು ಮಾತನಾಡಲು ಮನುಷ್ಯ ಕಲಿಯಬೇಕಾಗಿದೆ. ದೇವರ ಕೃಪೆಯಿದ್ದರೆ ಮೂಕನೂ ಮಾತನಾಡಬಹುದಂತೆ. ಬುದ್ಧಿಯಿದ್ದರೆ ವಾಚಾಳಿಯೂ ವೌನಿಯಾಗಬಹುದು. ಈ ಸುಬುದ್ಧಿಯನ್ನು ಭಗವಂತ ಕರುಣಿಸಬೇಕು...’’ ಎನ್ನುವುದು ಪ್ರಬಂಧದ ಆಶಯ. ಭಾಷಣಗಳ ಕ್ಷಣ, ಹಾರದ ಭಾರ, ಮೊಬೈಲ್ ಮೊಬೈಲ್, ನಗುವೆಂಬ ಸಹಜ ಧರ್ಮ, ಪುಸ್ತಕಂ ಹಸ್ತ ಭೂಷಣಂ, ನನ್ನ ಪ್ರೀತಿಯ ಬೆಕ್ಕುಗಳು, ಸಾಹಿತ್ಯದ ಹೆಸರಿನಲ್ಲಿ....ಹೀಗೆ ಇಲ್ಲಿರುವ ಎಲ್ಲ ಪ್ರಬಂಧಗಳು ‘ಗದ್ದಲ’ ‘ಆಡಂಭರ’ ‘ತೋರಿಕೆ’ಗಳನ್ನು ವ್ಯಂಗ್ಯವಾಡುತ್ತಾ, ಸರಳತೆ, ವೌನ, ಸ್ವಂತಿಕೆಯ ತೆಕ್ಕೆಯಲ್ಲಿ ಬದುಕು ಕಟ್ಟಿಕೊಳ್ಳಲು ಕರೆ ನೀಡುತ್ತವೆ. ಪ್ರಬಂಧಗಳನ್ನು ಓದಿ ಮುಗಿಸಿದಾಗ ಇದು ‘ಲಘು’ವಾದುದಲ್ಲ ಎನ್ನುವ ಅನುಭವ ನಮ್ಮನ್ನು ಆವರಿಸಿಕೊಳ್ಳುತ್ತದೆ.

ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 80. ಮುಖಬೆಲೆ 75 ರೂ. ಆಸಕ್ತರು 080-22161900 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News