ಸೋಂಕು ಹರಡುವಿಕೆ ತಗ್ಗಿಸಲು ಮೈಕ್ರೋ, ಮ್ಯಾಕ್ರೋ ಕಂಟೈನ್ಮೆಂಟ್ ಜಾರಿ: ಮಂಜುನಾಥ್ ಪ್ರಸಾದ್

Update: 2020-09-24 18:26 GMT

ಬೆಂಗಳೂರು, ಸೆ.24: ನಗರದಲ್ಲಿ ಕೊರೋನ ಸೋಂಕಿತರ ಪ್ರದೇಶಗಳಲ್ಲಿ ಸೋಂಕು ಹರಡುವಿಕೆ ಪ್ರಮಾಣ ತಗ್ಗಿಸಲು ಮೈಕ್ರೋ (ಒಂದು ಮನೆ) ಹಾಗೂ ಮ್ಯಾಕ್ರೋ (ಒಂದು ವಿಸ್ತೃತ ಪ್ರದೇಶ) ಕಂಟೈನ್ಮೆಂಟ್‍ಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನ ಸೋಂಕು ಹರಡುವಿಕೆ ಮತ್ತು ಮರಣ ಪ್ರಮಾಣ ತಗ್ಗಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಲ್ಲ ಮಹಾನಗರ ಪಾಲಿಕೆಗಳಿಗೆ ಆದೇಶ ನೀಡಿದ್ದಾರೆ. ಸೋಂಕಿತರ ಪ್ರದೇಶಗಳನ್ನು ಮೈಕ್ರೋ ಮತ್ತು ಮ್ಯಾಕ್ರೋ ಎಂದು ವಿಭಾಗಿಸಿ ಈ ಪ್ರದೇಶಗಳಲ್ಲಿ ಹೆಚ್ಚು ನಿಗಾವಹಿಸಿ ಸೋಂಕು ನಿವಾರಣೆಗೆ ಕ್ರಮವಹಿಸಲು ಸೂಚಿಸಿದ್ದಾರೆ. ಅದರಂತೆ, ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಹೆಚ್ಚು ನಿಗಾವಹಿಸಿ ಸೋಂಕು ಹರಡುವಿಕೆ ದರ ಕಡಿಮೆ ಮಾಡಲಾಗುವುದು ಎಂದು ತಿಳಿಸಿದರು.

ಕೊರೋನ ಸೋಂಕಿತರು ಪತ್ತೆಯಾದ ಮತ್ತು ಹೋಂ ಐಸೋಲೇಷನ್‍ನಲ್ಲಿ ಒಳಗಾಗಿರುವವರ ಮನೆಗಳನ್ನು ಮೈಕ್ರೋ ಕಂಟೈನ್ಮೆಂಟ್ ಮಾಡಲಾಗುವುದು. ಸುತ್ತಲಿನ ಪ್ರದೇಶಗಳಲ್ಲಿನ ನಿವಾಸಿಗಳನ್ನು ಕಡ್ಡಾಯ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು. ಒಂದು ಪ್ರದೇಶದಲ್ಲಿ 10ಕ್ಕಿಂತ ಅಧಿಕ ಸೋಂಕಿತರು ಪತ್ತೆಯಾದಲ್ಲಿ ಅದನ್ನು ಮ್ಯಾಕ್ರೋ ಕಂಟೇನ್ಮೆಂಟ್ ಪ್ರದೇಶ ಎಂದು ಪರಿಗಣಿಸಲಾಗುವುದು. ಅಲ್ಲಿ ಮನೆ ಮನೆ ಆರೋಗ್ಯ ಸಮೀಕ್ಷೆ ನಡೆಸಿ, ಯಾವುದೇ ಅನಾರೋಗ್ಯ ಇರುವವನ್ನು ಕೊರೋನ ಸೋಂಕು ಪರೀಕ್ಷೆ ಮಾಡಲಾಗುತ್ತದೆ.

ಮರಣ ಪ್ರಮಾಣ ಶೇ1ಕ್ಕಿಳಿಸಲು ಕ್ರಮ: ನಗರದಲ್ಲಿ ಕೊರೋನ ಸೋಂಕಿನಿಂದ ಸಾವನ್ನಪ್ಪುತ್ತಿರುವ ಜೂನ್‍ನಲ್ಲಿ ಸಾವಿನ ಪ್ರಮಾಣ ಶೇ.3ರಷ್ಟ್ಟು ಇದ್ದು, ಸೆಪ್ಟಂಬರ್‍ನಲ್ಲಿ ಪ್ರಮಾಣ ಶೇ.1.4ಕ್ಕೆ ಇಳಿಕೆಯಾಗಿದೆ. ಈ ಪ್ರಮಾಣವನ್ನು ಶೇ.1ಕ್ಕಿಂತ ಕಡಿಮೆ ಮಾಡಲು ಕೇಂದ್ರ ಸರಕಾರ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಕೊರೋನ ಪರೀಕ್ಷೆ ಮಾಡುತ್ತಿರುವಾಗ ಉಸಿರಾಟದ ಪ್ರಮಾಣ ಶೇ.95ಕ್ಕಿಂತ ಕಡಿಮೆ ಇರುವವರನ್ನು ಗುರುತಿಸಿ ಕೂಡಲೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುವುದು ಎಂದು ವಿವರಿಸಿದರು.

ಲಾಕ್‍ಡೌನ್, ಸೀಲ್‍ಡೌನ್ ಇಲ್ಲವೇ ಇಲ್ಲ

ಕೊರೋನ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಹೆಚ್ಚಿನ ಜನರನ್ನು ಕೊರೋನ ಪರೀಕ್ಷೆಗೆ ಒಳಪಡಿಸುವುದು. ಆದರೆ, ಇಡೀ ನಗರವನ್ನು ಲಾಕ್‍ಡೌನ್ ಮಾಡುವ ಅಥವಾ ಯಾವುದೇ ಪ್ರದೇಶಗಳನ್ನು ಸೀಲ್‍ಡೌನ್ ಮಾಡುವ ಯೋಜನೆಗಳಿಲ್ಲ. ಈ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ. ಸರಕಾರದ ಮುಂದೆಯೂ ಇಂತಹ ಪ್ರಸ್ತಾವನೆ ಸಲ್ಲಿಸುವ ಯೋಜನೆಗಳಿಲ್ಲ.

-ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News