6 ತಿಂಗಳಿಗೊಮ್ಮೆ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಲಿ, ನನಗೆ ವಿಶ್ವಾಸ ಬರುತ್ತದೆ: ಸಿಎಂ ಯಡಿಯೂರಪ್ಪ

Update: 2020-09-25 12:06 GMT

ಬೆಂಗಳೂರು, ಸೆ.25: `ಪ್ರತಿ ಆರು ತಿಂಗಳಿಗೆ ಒಮ್ಮೆ ಪ್ರತಿಪಕ್ಷ ಕಾಂಗ್ರೆಸ್ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸುತ್ತಲೇ ಇರಬೇಕು. ಇದರಿಂದ ನನಗೆ ಆರು ತಿಂಗಳ ಕಾಲ ವಿಶ್ವಾಸ ಬರುತ್ತದೆ' ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ, ಕಾಂಗ್ರೆಸ್ ಮಂಡಿಸಿರುವ ಅವಿಶ್ವಾಸ ನಿರ್ಣಯದ ವಿರುದ್ಧ ಲೇವಡಿ ಮಾಡಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇವರು ಅವಿಶ್ವಾಸ ನಿರ್ಣಯ ಮಂಡಿಸುತ್ತಿರುವುದರಿಂದ ನನಗೆ ವಿಶ್ವಾಸ ಬರುತ್ತಿದೆ. ವಿಶ್ವಾಸ ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷದವರು ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದರು.

ರೈತರ ಜೊತೆ ಸಮಾಲೋಚನೆ: ಕೈಗಾರಿಕಾ ಉದ್ದೇಶಕ್ಕಾಗಿ ರಾಜ್ಯದಲ್ಲಿ ಶೇ.2ರಷ್ಟು ಭೂಮಿ ಮಾತ್ರ ಬಳಸಲಾಗಿದೆ. ಭೂ ಸುಧಾರಣೆ ಕಾಯ್ದೆಯಿಂದ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೂ, ರೈತರು ಹೋರಾಟ ಮಾಡುತ್ತಿದ್ದು, ಅವರನ್ನು ಕರೆದು ಸಮಾಲೋಚನೆ ನಡೆಸಲಾಗುವುದು. ಅಲ್ಲದೆ, ಕಾಯ್ದೆ ಬಗ್ಗೆ ಅವರಿಗಿರುವ ಸಂಶಯಗಳನ್ನು ನಿವಾರಿಸಲಾಗುವುದು ಎಂದರು.

ನೀರಾವರಿ ಜಮೀನು ಖರೀದಿ ಮಾಡಿದರೆ ಆ ಜಮೀನನ್ನು ನೀರಾವರಿಗೆ ಬಳಸಬೇಕು ಎಂಬ ಷರತ್ತು ಹಾಕಿದ್ದೇವೆ. ಭೂ ಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಕುರಿತು ಎದ್ದಿರುವ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ರೈತ ಸಂಘಟನೆಗಳ ಮುಖಂಡರ ಜೊತೆ ಮಾತುಕತೆ ನಡೆಸಿ ಬಿಕ್ಕಟ್ಟನ್ನು ಇತ್ಯರ್ಥಪಡಿಸಲಾಗುವುದು ಎಂದು ಯಡಿಯೂರಪ್ಪನವರು ಇದೇ ವೇಳೆ ತಿಳಿಸಿದರು.

ಎಪಿಎಂಸಿ ಹಾಗೂ ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ರೈತರು ಆತಂಕಪಡಬೇಕಾದ ಅಗತ್ಯವಿಲ್ಲ. ಕಾಯ್ದೆ ಜಾರಿಯಾದರೆ ಅನ್ನದಾತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇತರೆ ಚಟುವಟಿಕೆಗಳನ್ನು ನಡೆಸಲು ಕಾನೂನಿನಲ್ಲಿ ಅವಕಾಶವಿಲ್ಲ. ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಕೆಲವರು ಅನಗತ್ಯವಾಗಿ ರೈತರು ಹಾಗೂ ಸಂಘಟನೆಗಳನ್ನು ಸರಕಾರದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News