ಬೆಂಗಳೂರು: ಲಾಕ್‍ಡೌನ್‍ನಲ್ಲಿ ಬಾಡಿಗೆ ಹಣ ನೀಡದ್ದಕ್ಕೆ ವ್ಯಕ್ತಿಗೆ ಗುಂಡಿಕ್ಕಿದ ಮನೆ ಮಾಲಕ; ಆರೋಪ

Update: 2020-09-25 13:13 GMT

ಬೆಂಗಳೂರು, ಸೆ.25:ಲಾಕ್‍ಡೌನ್ ಸಂದರ್ಭದಲ್ಲಿ ಮನೆ ಬಾಡಿಗೆ ಪಾವತಿ ಮಾಡದ ವ್ಯಕ್ತಿಗೆ ಮನೆ ಮಾಲಕ ಪಿಸ್ತೂಲಿನಿಂದ ಗುಂಡು ಹಾರಿಸಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟ್ಯಾಕ್ಸಿ ಚಾಲಕ ಸೆಲ್ವಂ ಎಂಬುವರು ಬಾಡಿಗೆದಾರನಾಗಿದ್ದು, ಘಟನೆಯಲ್ಲಿ ಭುಜಕ್ಕೆ ಒಂದು ಗುಂಡು ತಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ನಗರದ ಲಕ್ಷ್ಮೀ ಲೇಔಟ್ ನಿವಾಸಿ ಆನಂದರೆಡ್ಡಿ ಅವರು ಜಮೀನ್ದಾರರಾಗಿದ್ದು, ಹಲವು ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದಾರೆ. ಇವರ ಒಂದು ಮನೆಯನ್ನು ಟ್ಯಾಕ್ಸಿ ಚಾಲಕ ಸೆಲ್ವಂ ಬಾಡಿಗೆಗೆ ಪಡೆದಿದ್ದರು. ಲಾಕ್‍ಡೌನ್ ಸಂದರ್ಭದಲ್ಲಿ ಸೆಲ್ವಂ ಮನೆಗೆ ಬೀಗ ಹಾಕಿ ಹೋಗಿದ್ದು, ಬಾಡಿಗೆ ಹಣ ಪಾವತಿ ಮಾಡಿರಲಿಲ್ಲ ಎನ್ನಲಾಗಿದೆ.

ಕಳೆದ ಮೂರು ದಿನಗಳ ಹಿಂದೆ ಸೆಲ್ವಂ ಮರಳಿ ಬಂದಿದ್ದು, ಈ ಮನೆಯನ್ನು ಬಾಡಿಗೆಗೆ ಕೊಡಲ್ಲ ಎಂದು ಮಾಲಕ ಆನಂದ ರೆಡ್ಡಿ ತಿಳಿಸಿದ್ದಾರೆ. ಇದೇ ವಿಚಾರವಾಗಿ ಗುರುವಾರ ರಾತ್ರಿ ಆನಂದ ರೆಡ್ಡಿ ಹಾಗೂ ಸೆಲ್ವಂಗೂ ಜಗಳವಾಗಿದೆ. ಈ ಸಂದರ್ಭ ಆನಂದ ರೆಡ್ಡಿ ಅವರು ಪಿಸ್ತೂಲಿನಿಂದ ಸೆಲ್ವಂ ಮೇಲೆ ಗುಂಡು ಹಾರಿಸಿದ್ದು, ಒಂದು ಗುಂಡು ಸೆಲ್ವಂ ಭುಜಕ್ಕೆ ತಾಗಿದೆ. ಕೂಡಲೇ ಆನಂದ ರೆಡ್ಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಸುದ್ದಿ ತಿಳಿದ ಬೇಗೂರು ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಆನಂದ ರೆಡ್ಡಿ ಪತ್ತೆಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News