ಕಾವೇರಿ ಕೂಗು ಕಾರ್ಯಕ್ರಮ ಪ್ರಸಾರ ಮಾಡದಂತೆ ನೋಟಿಸ್: ವಿಚಾರಣೆಗೆ ಹಾಜರಾಗಲು ವಕೀಲರಿಗೆ ಹೈಕೋರ್ಟ್ ಸೂಚನೆ

Update: 2020-09-25 14:35 GMT

ಬೆಂಗಳೂರು, ಸೆ.25: ಕಾವೇರಿ ಕೂಗು ಅಭಿಯಾನಕ್ಕೆ ಸಂಬಂಧಿಸಿದ ಯಾವುದಾದರೂ ಕಾರ್ಯಕ್ರಮ ಪ್ರಸಾರ ಮಾಡಿದರೆ ನ್ಯಾಯಾಂಗ ನಿಂದನೆ ಆಗಲಿದೆ ಎಂದು ಖಾಸಗಿ ಸುದ್ದಿ ವಾಹಿನಿಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದ ವಕೀಲರಿಗೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್ ಸೂಚಿಸಿದೆ.

ಕಾವೇರಿ ಕೂಗು ಅಭಿಯಾನದ ಅಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವ ಈಶ ಫೌಂಡೇಶನ್ ಕ್ರಮಕ್ಕೆ ಆಕ್ಷೇಪಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರ ವಕೀಲರು ಗೈರು ಹಾಜರಾಗಿದ್ದರು. ಬದಲಿಗೆ ಕಿರಿಯ ವಕೀಲ ಪೀಠಕ್ಕೆ ಮಾಹಿತಿ ನೀಡಿ, ತಮ್ಮ ಸೀನಿಯರ್ ಕ್ವಾರಂಟೈನ್‍ಗೆ ಒಳಗಾಗಿದ್ದು, ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಜತೆಗೆ ಆರೋಗ್ಯ ಸಮಸ್ಯೆ ಇರುವುದರಿಂದ ಅರ್ಜಿಯನ್ನು ಹೈಕೋರ್ಟ್ ಸ್ವಯಂ ಪ್ರೇರಿತ ಅರ್ಜಿಯಾಗಿ ಪರಿವರ್ತಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಅರ್ಜಿದಾರ ವಕೀಲರು ಪ್ರಕರಣದ ವಿಚಾರಣೆಗೆ ಸಾಕಷ್ಟು ಬಾರಿ ಗೈರಾಗಿದ್ದಾರೆ. ಎಷ್ಟು ದಿನದಿಂದ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ ಎಂದು ಪ್ರಶ್ನಿಸಿತು. ಅಲ್ಲದೇ, ಲೀಗಲ್ ನೋಟಿಸ್ ಜಾರಿ ಮಾಡಿರುವ ಕುರಿತು ವಿವರಣೆ ನೀಡಲು ಮುಂದಿನ ವಿಚಾರಣೆ ವೇಳೆ ತಪ್ಪದೇ ಹಾಜರಾಗಬೇಕೆಂದು ಸೂಚಿಸಿ, ವಿಚಾರಣೆಯನ್ನು ಅ.14ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ಕಾವೇರಿ ನದಿ ರಕ್ಷಣೆ ಉದ್ದೇಶದಿಂದ ಅದರ ಪಾತ್ರದ ಉದ್ದಕ್ಕೂ ಗಿಡ ನೆಡುವುದಾಗಿ ಯೋಜನೆ ರೂಪಿಸಿರುವುದಾಗಿ ಹೇಳಿರುವ ಜಗ್ಗಿ ವಾಸುದೇವ್ ಅವರ ಈಶ ಫೌಂಡೇಶನ್ ಕಾವೇರಿ ಕೂಗು ಅಭಿಯಾನದ ಅಡಿ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವಕೀಲರಾದ ಎ.ವಿ ಅಮರನಾಥನ್ ಅವರು, ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವುದು ನಿಯಮಬಾಹಿರ ಎಂದು ಆರೋಪಿಸಿ ಪಿಐಎಲ್ ಸಲ್ಲಿಸಿದ್ದರು.

ಇತ್ತೀಚೆಗೆ ಕಾವೇರಿ ಕೂಗು ಅಭಿಯಾನಕ್ಕೆ ಸಂಬಂಧಿಸಿದಂತೆ ಅಂತರ್ ರಾಷ್ಟ್ರೀಯ ವಾಹಿನಿಯೊಂದು ಕಾರ್ಯಕ್ರಮ ಪ್ರಸಾರ ಮಾಡಲು ಮುಂದಾಗಿತ್ತು. ಆದರೆ, ಕಾರ್ಯಕ್ರಮ ಪ್ರಸಾರ ಮಾಡದಂತೆ ಅರ್ಜಿದಾರ ವಕೀಲ ಲೀಗಲ್ ನೋಟಿಸ್ ಜಾರಿ ಮಾಡಿದ್ದರು. ನೋಟಿಸ್‍ನಲ್ಲಿ ಕಾರ್ಯಕ್ರಮ ಪ್ರಸಾರ ಮಾಡಿದರೆ ಅದು ನ್ಯಾಯಾಂಗ ನಿಂದನೆ ಆಗಲಿದೆ ಎಂದು ತಿಳಿಸಿದ್ದರು. ಹೀಗೆ ಲೀಗಲ್ ನೋಟಿಸ್ ನೀಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದ ಈಶ ಫೌಂಡೇಶನ್ ಪರ ವಕೀಲರು, ಚಾನೆಲ್‍ಗೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ನ್ಯಾಯಾಲಯ ಅರ್ಜಿದಾರ ವಕೀಲ ಅಮರನಾಥನ್ ಅವರಿಂದ ಖುದ್ದು ವಿವರಣೆ ಬಯಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News