ಭೂ ಸುಧಾರಣೆಗಳ(ಎರಡನೆ ತಿದ್ದುಪಡಿ) ವಿಧೇಯಕ ಮಂಡನೆ

Update: 2020-09-25 18:07 GMT

ಬೆಂಗಳೂರು, ಸೆ.25: ವಿವಾದಿತ ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕವನ್ನು ಕಂದಾಯ ಸಚಿವ ಆರ್.ಅಶೋಕ್ ಶುಕ್ರವಾರ ವಿಧಾನಸಭೆಯಲ್ಲಿ ಮಂಡನೆ ಮಾಡಿದರು.

ಈ ಕಾಯ್ದೆಗೆ ಇದೇ ಮೊದಲ ಬಾರಿ ತಿದ್ದುಪಡಿ ಮಾಡುತ್ತಿಲ್ಲ. ಈವರೆಗೆ ಸುಮಾರು 34 ಬಾರಿ ತಿದ್ದುಪಡಿ ಮಾಡಲಾಗಿದೆ. ರಾಜ್ಯದಲ್ಲಿ ಕೃಷಿ ಉತ್ಪಾದನೆ ಹೆಚ್ಚಾಗಬೇಕು, ಆಧುನಿಕ ಕೃಷಿ ಪದ್ಧತಿ ಬರಬೇಕು. ಕೃಷಿಯಲ್ಲಿ ತೊಡಗಿಕೊಳ್ಳಲು ಆಸಕ್ತಿ ಹೊಂದಿರುವ ಯುವಕರಿಗೆ ನೆರವು ಸಿಗಬೇಕು ಎಂಬುದು ನಮ್ಮ ಉದ್ದೇಶ ಎಂದು ಅವರು ಹೇಳಿದರು.

ಗುಜರಾತ್, ರಾಜಸ್ತಾನ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಬೇರೆ ಯಾವ ರಾಜ್ಯಗಳಲ್ಲಿಯೂ 79 ಎ, ಬಿ ಪದವೆ ಇಲ್ಲ. ತಹಶೀಲ್ದಾರ್ ಹಾಗೂ ಸಹಾಯಕ ಆಯುಕ್ತರ ಕಚೇರಿಗಳಲ್ಲಿ ಲಂಚ ಹೊಡೆಯಲು ಇದನ್ನು ಬಳಸಲಾಗುತ್ತಿದೆ ಎಂದು ಅವರು ಕಿಡಿಗಾರಿದರು.

ಗುಜರಾತ್‍ನಲ್ಲಿ ಕೃಷಿ ರಫ್ತು ಪ್ರಮಾಣ ಶೇ.17ರಷ್ಟಿದೆ. ನಮ್ಮ ರಾಜ್ಯದಲ್ಲಿ ಶೇ.5ರಷ್ಟು ಇದೆ. ನಮ್ಮ ರೈತರಿಗೂ ಕೃಷಿ ರಫ್ತು ಸೌಲಭ್ಯ ಸಿಗಬೇಕು. ನಮ್ಮ ರಾಜ್ಯದವರು ಆಂಧ್ರದಲ್ಲಿ ಜಮೀನು ತೆಗೆದುಕೊಳ್ಳುತ್ತಿದ್ದಾರೆ. ಇಲ್ಲಿನ ಕಿರುಕುಳ, ಕಾಟದಿಂದ ಬೇರೆ ರಾಜ್ಯಗಳಿಗೆ ಹೋಗಿ ಜಮೀನು ಪಡೆಯುತ್ತಿದ್ದಾರೆ. ಈ ಕಿರುಕುಳ ಸಂಬಂಧ 83,171 ಪ್ರಕರಣ ದಾಖಲಾಗಿವೆ. ಸಾಧನೆ ಮಾತ್ರ ಶೂನ್ಯ. ಈ ಕಾಯ್ದೆ ಯಾಕೆ ಬೇಕು ಎಂದು ಅವರು ಪ್ರಶ್ನಿಸಿದರು.

ಬೇರೆ ರಾಜ್ಯದವರು ರೈತ ಎಂದು ಪ್ರಮಾಣ ಪತ್ರ ಪಡೆದು ಇಲ್ಲಿ ಜಮೀನು ಖರೀದಿ ಮಾಡಬಹುದು. ಆದರೆ, ನಮ್ಮ ರಾಜ್ಯದವರು ಜಮೀನು ಪಡೆಯಲು ಸಾಧ್ಯವಿಲ್ಲ. ಕೃಷಿ ಮಾಡಲು ಆಸಕ್ತಿ ಇರುವ ಯುವಕರು ಇಲ್ಲಿ ಬರಬೇಕು. 11.79 ಲಕ್ಷ ಬೀಡು ಬಿಟ್ಟಿರುವ ಭೂಮಿಯನ್ನು ಕೃಷಿ ಯೋಗ್ಯ ಮಾಡಬೇಕು ಎಂಬುದು ನಮ್ಮ ಉದ್ದೇಶ ಎಂದು ಅಶೋಕ್ ಹೇಳಿದರು.

ರೈತರ ಭೂಮಿಯನ್ನು ಕಸಿದು ಕೈಗಾರಿಕೆಗಳಿಗೆ ನೀಡಲಾಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ನಮ್ಮ ರಾಜ್ಯದಲ್ಲಿ ಶೇ.1ರಷ್ಟು ಭೂಮಿಯನ್ನು ಕೈಗಾರಿಕೆಗಳಿಗೆ ನೀಡಿಲ್ಲ. ಈ ತಿದ್ದುಪಡಿಯಿಂದ ರೈತರಿಗೆ ಯಾವ ಅನ್ಯಾಯವೂ ಆಗುವುದಿಲ್ಲ ಎಂದು ಅವರು ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News