ಬೆಂಗಳೂರು: ಒಂದೇ ದಿನ 4,080 ಕೊರೋನ ಪ್ರಕರಣಗಳು ದೃಢ, 32 ಮಂದಿ ಮೃತ್ಯು

Update: 2020-09-25 16:50 GMT

ಬೆಂಗಳೂರು, ಸೆ.25: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಪ್ರಮಾಣ ಅಧಿಕವಾಗುತ್ತಲೇ ಇದ್ದು, ನಗರದಲ್ಲಿ ಶುಕ್ರವಾರ 4080 ಹೊಸ ಕೊರೋನ ಪ್ರಕರಣಗಳು ವರದಿಯಾಗಿದ್ದು, 32 ಜನರು ಮೃತಪಟ್ಟಿದ್ದಾರೆ.

ರಾಜಧಾನಿಯಲ್ಲಿ ಶುಕ್ರವಾರ 2517 ಜನರು ನಗರದ ವಿವಿಧ ಆಸ್ಪತ್ರೆಗಳಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ನಗರದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2,12,547 ರಷ್ಟಕ್ಕೆ ಏರಿಕೆಯಾಗಿದ್ದು, 1,67,936 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. 41,816 ಸಕ್ರಿಯ ಪ್ರಕರಣಗಳಿದ್ದು, ಇವರೆಲ್ಲರೂ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, ಹಲವಾರು ಮಂದಿ ಮನೆಯಲ್ಲಿಯೇ ಆರೈಕೆ ಮಾಡುತ್ತಿರುವುದರಿಂದ ಆಸ್ಪತ್ರೆಗಳಿಗೆ ದಾಖಲಿಸುತ್ತಿರುವವರ ಪ್ರಮಾಣವೂ ಕುಸಿದಿದೆ. ಇನ್ನು, ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 2794ಕ್ಕೆ ಏರಿಕೆಯಾಗಿದೆ.

ಬಿಬಿಎಂಪಿ ವ್ಯಾಪ್ತಿಯ 150 ಜ್ವರ ಚಿಕಿತ್ಸಾಲಯದಲ್ಲಿ ಶುಕ್ರವಾರ 3,599 ರಷ್ಟು ಜನರಿಗೆ ತಪಾಸಣೆ ಮಾಡಲಾಗಿದ್ದು, ಒಟ್ಟಾರೆ 2,61,130 ಜನರಿಗೆ ತಪಾಸಣೆ ಮಾಡಲಾಗಿದೆ. ಅಲ್ಲದೆ, ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಿನ ತಪಾಸಣೆ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಲವು ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News