ಬಿಬಿಎಂಪಿ ವಾರ್ಡ್ ಹೆಚ್ಚಳ ವಿಧೇಯಕಕ್ಕೆ ಮೇಲ್ಮನೆ ಅಸ್ತು

Update: 2020-09-25 16:56 GMT

ಬೆಂಗಳೂರು, ಸೆ.25: ಬಿಬಿಎಂಪಿ ವಾರ್ಡ್‍ಗಳ ಸಂಖ್ಯೆ ಹೆಚ್ಚಿಸುವ ವಿಧಾನಸಭೆಯಿಂದ ಅಂಗೀಕೃತ ಕರ್ನಾಟಕ ನಗರ ಪಾಲಿಕೆಗಳ ಮೂರನೇ ತಿದ್ದುಪಡಿ ವಿಧೇಯಕವನ್ನು ವಿಧಾನಪರಿಪತ್‍ನಲ್ಲಿ ಅಂಗೀಕರಿಸಲಾಯಿತು.

ಸದನದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರವಾಗಿ ವಿಧೇಯಕ ಮಂಡಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಮೂರನೇ ತಿದ್ದುಪಡಿಯಲ್ಲಿ ವಾರ್ಡ್ ಸಂಖ್ಯೆ 198 ಇರುವುದನ್ನು 250 ರವರೆಗೆ ಹೆಚ್ಚಿಸುವ ಸಲಹೆ ಎಲ್ಲರಿಂದ ಬಂದಿದೆ. ಅದರ ಆಧಾರದಲ್ಲಿ ಈ ತಿದ್ದುಪಡಿ ತರಲಾಗುತ್ತಿದೆ. ಸದಸ್ಯರ ಸಂಖ್ಯೆ 225ಕ್ಕೆ ಕಡಿಮೆ ಇಲ್ಲದಂತೆ 250 ಕ್ಕೆ ಹೆಚ್ಚು ಇರದಂತೆ ಇಂದು ತಿದ್ದುಪಡಿ ಮಾಡಿದ್ದೇವೆ ಮತ್ತು ಕೆಲವೊಂದು ವಾರ್ಡ್ ಎರಡು ಮೂರು ವಿಧಾನಸಭಾ ಕ್ಷೇತ್ರಕ್ಕೆ ಹಂಚಿಕೆಯಾಗಿವೆ. ಇದು ಅಭಿವೃದ್ಧಿ ದೃಷ್ಟಿಯಿಂದ ಸಮಸ್ಯೆಯಾಗಿದೆ. ಹಾಗಾಗಿ ಯಾವುದಾದರೂ ಒಂದು ಕ್ಷೇತ್ರಕ್ಕೆ ಸೇರಿಸಬೇಕು ಎನ್ನುವ ಅಂಶ ಇದರಲ್ಲಿ ಸೇರಿಸಿದ್ದು, ವಿಧೇಯಕ್ಕಕ್ಕೆ ಅಂಗೀಕಾರ ನೀಡುವಂತೆ ಮನವಿ ಮಾಡಿದರು.

ವಿಧೇಯಕದ ಮೇಲೆ ಮಾತನಾಡಿದ ಜೆಡಿಎಸ್ ಸದಸ್ಯ ರಮೇಶ್, ಈಗಲೂ ತಿದ್ದುಪಡಿಯಲ್ಲಿ ಕೆಲ ಲೋಪದೋಷ ಇವೆ. ಕೆಎಂಸಿ ಕಾಯ್ದೆಯಡಿ ಬಿಎಂಪಿಯನ್ನು ಬಿಬಿಎಂಪಿ ಮಾಡಿ 110 ಹಳ್ಳಿ ಸೇರಿಸಿದ್ದರು. ಈಗ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಬೆಂಗಳೂರಿಗೆ ಹೊಸ ಕಾಯ್ದೆ ತರಲು ಹೊರಟಿದ್ದಾರೆ. ಆದರೆ, ಈಗ 198 ವಾರ್ಡ್‍ಗೆ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಅಂತದರಲ್ಲಿ ಹೊಸದಾಗಿ ವಾರ್ಡ್ ರಚನೆ ಮಾಡಲು ಹೊರಟಿರುವುದು ಸರಿಯಲ್ಲ, 250 ವಾರ್ಡ್ ಬೇಡ ಎಂದು ವಿಧೇಯಕವನ್ನು ವಿರೋಧಿಸಿದರು.

ಕಾಂಗ್ರೆಸ್ ಸದಸ್ಯ ರವಿ ಮಾತನಾಡಿ, ವಿಧೇಯಕ ವಾಸ್ತವ ಅಲ್ಲ. 250 ಸದಸ್ಯರು, ನಾಮ ನಿರ್ದೇಶನ, ಶಾಸಕ, ಸಂಸದ, ಅಧಿಕಾರಿ ಸೇರಿ 400 ಜನ ಆಗಲಿದ್ದಾರೆ. ಅಷ್ಟು ಜನ ಸೇರಿ ಸಭೆ ಎಲ್ಲಿ ಮಾಡಲಿದ್ದಾರೆ? ಮಾಸಿಕ ಸಭೆ ಎಷ್ಟು ದಿನ ನಡೆಸಬೇಕು? ಇದೆಲ್ಲಾ ಅವಾಸ್ತವಿಕ. ಒಂದೊಂದು ಕಡೆ ಒಂದೊಂದು ಸಮಸ್ಯೆ ಇದೆ. ಮೂರೋ ನಾಲ್ಕಕ್ಕೋ ಪಾಲಿಕೆಯನ್ನಾಗಿ ಮಾಡಿ. ಈ ಕಾನೂನಿಂದ ಜನರಿಗೆ ಉಪಯೋಗವಿಲ್ಲ, ಮತ್ತಷ್ಟು ಅಧೋಗತಿಗೆ ಕೊಂಡೊಯ್ಯಬೇಡಿ. ವಿಧೇಯಕ ವಾಪಸ್ ಪಡೆಯಿರಿ ಎಂದು ಒತ್ತಾಯಿಸಿ ವಿಧೇಯಕವನ್ನು ವಿರೋಧಿಸಿದರು.

ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಮಾತನಾಡಿ, ವಾರ್ಡ್‍ಗಳ ಅಭಿವೃದ್ಧಿ ದೃಷ್ಟಿಯಿಂದ ಇದು ಸರಿಯಾದ ನಿರ್ಧಾರವಾಗಿದೆ. ಆದರೆ, ಕೆಲ ಸದಸ್ಯರು ಜಾಗದ ಕೊರತೆ ಪ್ರಸ್ತಾಪ ಮಾಡಿದ್ದಾರೆ. ರೇಸ್ ಕೋರ್ಸ್ ಜಾಗದಲ್ಲಿ ಅವಳಿ ಗೋಪುರ ನಿರ್ಮಿಸಬಹುದು. ಫ್ರೀಡಂ ಪಾರ್ಕ್ ಜಾಗ ಇದೆ. ಅದನ್ನೂ ಬಳಸಿಕೊಳ್ಳಬಹುದು. ಐದು ಸಾವಿರ ಜನರ ಸಾಮರ್ಥ್ಯ ಸಭಾಂಗಣ ನಿರ್ಮಾಣ ಮಾಡಬಹುದು ಎಂದರು.

ಇನ್ನೂ ಕೆಲ ಸದಸ್ಯರು ಬಿಬಿಎಂಪಿ ಮೂರು ಭಾಗ ಇತ್ಯಾದಿ ವಿಷಯ ಪ್ರಸ್ತಾಪ ಮಾಡಿ ಚರ್ಚೆಗೆ ಹೆಚ್ಚಿನ ಸಮಯಾವಕಾಶ ಕೋರಿದರು. ಈ ವೇಳೆ, ಮಧ್ಯಪ್ರವೇಶಿಸಿದ ಸಚಿವ ಸುರೇಶ್ ಕುಮಾರ್, ಇರುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಳಗೆ ವಾರ್ಡ್ ಮರು ವಿಂಗಡಣೆ ಅಷ್ಟೇ. ಹೊಸದಾಗಿ ಯಾವ ಪ್ರದೇಶವನ್ನೂ ಸೇರಿಸಲ್ಲ. ಇದು ಕೇವಲ ವ್ಯಾಪ್ತಿಯೊಳಗಿನ ವಾರ್ಡ್ ಹೆಚ್ಚಳ ಅಷ್ಟೇ ಎಂದು ಸ್ಪಷ್ಟೀಕರಣ ನೀಡಿದರು. ಇದರಲ್ಲಿ ಬೇರೆ ಅಂಶ ಇಲ್ಲ, ಮುಂದೆ ಬಿಬಿಎಂಪಿ ಬಿಲ್ ಬಂದಾಗ ವಿಸ್ತೃತ ಚರ್ಚೆ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು.

ಸಚಿವರ ಸ್ಪಷ್ಟೀಕರಣ ಮತ್ತು ಸಲಹೆಗೆ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸಹಮತ ವ್ಯಕ್ತಪಡಿಸಿ ಚರ್ಚೆಗೆ ತೆರೆ ಎಳೆದರು. ನಂತರ ಧ್ವನಿ ಮತದ ಮೂಲಕ ಕರ್ನಾಟಕ ನಗರ ಪಾಲಿಕೆಗಳ ಮೂರನೇ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News