ಡ್ರಗ್ಸ್ ದಂಧೆ: ಅರೆಬರೆ ತನಿಖೆ ಸಾಕು, ಸಮಗ್ರ ಅಧ್ಯಯನ ಬೇಕು

Update: 2020-09-25 19:30 GMT

ಕೋಟಿಗಟ್ಟಲೆ ಲಾಭ ತಂದುಕೊಡುವ ಈ ಡ್ರಗ್ಸ್ ದಂಧೆಯ ಮೂಲವೇನು, ಈ ಕಾಳದಂಧೆಯಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ, ಯುವಜನರು ಡ್ರಗ್ಸ್ ಚಟಕ್ಕೆ ಯಾಕೆ, ಹೇಗೆ ಬಲಿಯಾಗುತ್ತಾರೆ, ಅದಕ್ಕೆ ಮಾನಸಿಕ ಅಸ್ವಸ್ಥತೆ, ಖಿನ್ನತೆ ಮುಂತಾದ ಕಾರಣಗಳಿರಬಹುದೇ, ಸಮಾಜವಿರೋಧಿ ಶಕ್ತಿಗಳು ಇದನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತವೆ ಎಂಬಿತ್ಯಾದಿ ವಿಷಯಗಳ ಮೇಲೆ ಬೆಳಕು ಚೆಲ್ಲುವುದನ್ನು ಬಿಟ್ಟು ಕೇವಲ ಸೆನ್ಸೇಷನಲ್ ಸುದ್ದಿಗಳ ಹಿಂದೆ ಬಿದ್ದಿರುವ ಮಾಧ್ಯಮಗಳು ತಮ್ಮ ಸಾಮಾಜಿಕ ಜವಾಬ್ದಾರಿಗೆ ಎಳ್ಳುನೀರು ಬಿಟ್ಟಿರುವಂತೆ ಕಾಣುತ್ತದೆ.


ಇತ್ತೀಚಿನ ಕೆಲವು ದಿನಗಳಿಂದ ನಮ್ಮ ಬಹುತೇಕ ಮಾಧ್ಯಮಗಳು ತಮ್ಮ ಚೈತನ್ಯವನ್ನೆಲ್ಲಾ ಸಿನೆಮಾರಂಗದ ಡ್ರಗ್ಸ್ ನಂಟಿನ ಮೇಲೆ ಕೇಂದ್ರೀಕರಿಸಿರುವುದನ್ನು ಕಾಣುತ್ತಿದ್ದೇವೆ. ಟಿವಿ ಚಾನೆಲ್‌ಗಳಂತೂ ಬಾಲಿವುಡ್, ಸ್ಯಾಂಡಲ್‌ವುಡ್ ಮುಂತಾದ ವಿವಿಧ ‘ವುಡ್’ಗಳ ಕೆಲವು ನಟನಟಿಯರಿಗೂ ಡ್ರಗ್ಸ್‌ಗೂ ಇದೆಯೆನ್ನಲಾದ ಸಂಬಂಧದ ಬಗ್ಗೆ ‘‘ಬ್ರೇಕಿಂಗ್ ನ್ಯೂಸ್’’, ‘‘ಸ್ಫೋಟಕ ವರದಿ’’, ‘‘ಎಕ್ಸ್‌ಕ್ಲೂಸಿವ್ ಸ್ಟೋರಿ’’ ಇತ್ಯಾದಿ ಇತ್ಯಾದಿಗಳನ್ನು ಪುಂಖಾನುಪುಂಖವಾಗಿ ಬಿತ್ತರಿಸುವುದರಲ್ಲಿ ನಿರತವಾಗಿವೆ. ತಿಣುಕುವ ಆ್ಯಂಕರ್‌ಗಳು ಪೊಲೀಸ್, ನ್ಯಾಯಾಲಯ, ನ್ಯಾಯಾಧೀಶರು ಎಲ್ಲವೂ ತಾವೇ ಎಂಬಂತೆ ವರ್ತಿಸುತ್ತಾ ತಮ್ಮದೇ ತೀರ್ಪುಗಳನ್ನು ನೀಡುತ್ತಿದ್ದಾರೆ. ಇದರ ಹಿಂದಿರುವುದು ಬರೀ ಟಿಆರ್‌ಪಿ ಹಸಿವೇ ಅಥವಾ ಒಂದು ಗುಪ್ತ ಚುನಾವಣಾ ರಾಜಕೀಯದ ಅಜೆಂಡಾವೇ? ಎರಡೂ ಇರಬಹುದೆಂದು ನಂಬಲು ಬಲವತ್ತರ ಕಾರಣಗಳಿವೆ. ಬಹುಶಃ ಹೀಗಾಗಿಯೇ ಇರಬಹುದು, ಮುಖ್ಯ ವಿಷಯಗಳು ಮುನ್ನೆಲೆಗೆ ಬರುತ್ತಲೇ ಇಲ್ಲ.

ಕೋಟಿಗಟ್ಟಲೆ ಲಾಭ ತಂದುಕೊಡುವ ಈ ಡ್ರಗ್ಸ್ ದಂಧೆಯ ಮೂಲವೇನು, ಈ ಕಾಳದಂಧೆಯಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ, ಯುವಜನರು ಡ್ರಗ್ಸ್ ಚಟಕ್ಕೆ ಯಾಕೆ, ಹೇಗೆ ಬಲಿಯಾಗುತ್ತಾರೆ, ಅದಕ್ಕೆ ಮಾನಸಿಕ ಅಸ್ವಸ್ಥತೆ, ಖಿನ್ನತೆ ಮುಂತಾದ ಕಾರಣಗಳಿರಬಹುದೇ, ಸಮಾಜವಿರೋಧಿ ಶಕ್ತಿಗಳು ಇದನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತವೆ ಎಂಬಿತ್ಯಾದಿ ವಿಷಯಗಳ ಮೇಲೆ ಬೆಳಕು ಚೆಲ್ಲುವುದನ್ನು ಬಿಟ್ಟು ಕೇವಲ ಸೆನ್ಸೇಷನಲ್ ಸುದ್ದಿಗಳ ಹಿಂದೆ ಬಿದ್ದಿರುವ ಮಾಧ್ಯಮಗಳು ತಮ್ಮ ಸಾಮಾಜಿಕ ಜವಾಬ್ದಾರಿಗೆ ಎಳ್ಳುನೀರು ಬಿಟ್ಟಿರುವಂತೆ ಕಾಣುತ್ತದೆ. ಪ್ರಜಾಪ್ರಭುತ್ವದ ಆಧಾರಸ್ತಂಭವೆಂದೇ ಕರೆಯಲ್ಪಡುವ ಮಾಧ್ಯಮಗಳಲ್ಲಿ 2014ರ ನಂತರ ಈ ಪ್ರವೃತ್ತಿ ಸಿಕ್ಕಾಪಟ್ಟೆ ಹೆಚ್ಚಿರುವುದು ನಗ್ನಸತ್ಯ. ಇವತ್ತಿನ ಈ ವಿಷಾದಕರ ಸನ್ನಿವೇಶದಲ್ಲಿ ಇದೇ ಡ್ರಗ್ಸ್ ದಂಧೆಯ ಬಗ್ಗೆ ಮುಂಬೈನ ಡಿಎನ್‌ಎ (ಡೈಲಿ ನ್ಯೂಸ್ ಆ್ಯಂಡ್ ಅನಾಲಿಸಿಸ್) ಪತ್ರಿಕೆ ಐದು ವರ್ಷಗಳ ಹಿಂದೆ ಪ್ರಕಟಿಸಿದ್ದ ಒಂದು ವಿಸ್ತೃತ ವರದಿ ಅತ್ಯಂತ ಪ್ರಸ್ತುತವಿದೆ. ಪತ್ರಿಕಾವೃತ್ತಿಯ ಗೌರವವನ್ನು ಹಲವು ಪಟ್ಟು ಹೆಚ್ಚಿಸಿದ ಆ ತನಿಖಾ ವರದಿಯ ಮುಖ್ಯಾಂಶಗಳು ಹೀಗಿವೆ:

ಡ್ರಗ್ಸ್ ದಂಧೆಯಲ್ಲಿ ಪೊಲೀಸರು
ಡ್ರಗ್ಸ್ ಮತ್ತು ಪೊಲೀಸರ ನಡುವಿನ ಅಪವಿತ್ರ ನಂಟಿನ ವಿಷಯ ಬೆಳಕಿಗೆ ಬಂದಿರುವುದು 2015ರಲ್ಲಿ. ಮುಂಬೈನ ಓರ್ವ ಪೊಲೀಸ್ ಕಾನ್‌ಸ್ಟೆಬಲ್ ಡ್ರಗ್ಸ್ ಕೂಟದಲ್ಲಿದ್ದನೆಂಬ ಸುದ್ದಿ ಪ್ರಕಟವಾದಾಗ ಹೆಚ್ಚಿನ ಜನರಿಗೆ ಆಘಾತವಾಗಿತ್ತು. ಆದರೆ ಆಮೇಲೆ ಕಂಡುಬಂದಿರುವಂತೆ ಡ್ರಗ್ಸ್-ಪೊಲೀಸ್ ನಂಟು ಕೇವಲ ಒಬ್ಬ ಕಾನ್‌ಸ್ಟೆಬಲ್‌ನಿಂದ ಮಾದಕದ್ರವ್ಯವನ್ನು ವಶಪಡಿಸಿಕೊಳ್ಳುವುದಕ್ಕಷ್ಟೆ ಸೀಮಿತವಾಗಿರಲಿಲ್ಲ. ಹಿರಿಯ ಅಧಿಕಾರಿಗಳಿಂದ ಹಿಡಿದು ತಳಮಟ್ಟದ ಪೇದೆಯವರೆಗೂ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದರೆಂಬ ಆಘಾತಕಾರಿ ವಿಷಯವೂ ಹೊರಬಿದ್ದಿದೆ. ಮಾದಕದ್ರವ್ಯವನ್ನು ಪೊಲೀಸ್ ವಾಹನದಲ್ಲಷ್ಟೆ ಅಲ್ಲ, ಠಾಣೆಯೊಳಗೂ ಪತ್ತೆಹಚ್ಚಲಾಗಿತ್ತು. ಇದೊಂದು ಶೀಘ್ರ ಅಡ್ಡಸಂಪಾದನೆಯ ಮಾರ್ಗವಾಗಿರುವುದರಿಂದ ಪೊಲೀಸರು ಸುಲಭದಲ್ಲಿ ಈ ಕಾಳದಂಧೆಗೆ ಬಲಿಯಾಗುತ್ತಾರೆಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

 ಅಪರಾಧಿಗಳ ಸಂಪರ್ಕಕ್ಕೆ ಬರುವ ಪೊಲೀಸರಿಗೆ ಅವರ ಮೂಲಕ ಡ್ರಗ್ಸ್ ದಂಧೆ ಮತ್ತು ಪ್ರಮುಖ ದಂಧೆಕೋರರ ಬಗ್ಗೆ ಮಾಹಿತಿ ದೊರೆಯುತ್ತದೆ ಎನ್ನುತ್ತಾರೆ ಮಾಜಿ ಪೊಲೀಸ್ ಅಧಿಕಾರಿ ವೈ.ಪಿ. ಸಿಂಗ್. ಪೊಲೀಸ್ ವೃತ್ತಿ ತೊರೆದಿರುವ ಸಿಂಗ್ ಈಗ ಓರ್ವ ಲಾಯರ್ ಆಗಿದ್ದಾರೆ.
   
1996ರಲ್ಲಿ ಮಾದಕದ್ರವ್ಯ ನಿಗ್ರಹ ದಳದಲ್ಲಿ (ಎಎನ್‌ಸಿ) ಕಾರ್ಯನಿರ್ವಹಿಸಿದ್ದ ಐಪಿಎಸ್ ಅಧಿಕಾರಿ ಸಂಜಯ ಪಾಂಡೆ ಹೇಳುವಂತೆ ‘‘ಮಾದಕದ್ರವ್ಯಗಳು ಸಾಮಾನ್ಯವಾಗಿ ಬಲು ದುಬಾರಿ ಬೆಲೆಗೆ ಮಾರಾಟವಾಗುತ್ತವೆ. ಹೀಗಾಗಿ ಈ ದಂಧೆಯಲ್ಲಿ ಅಪಾರ ಹೂಡಿಕೆ ಮಾಡಲಾಗುತ್ತದೆ. ನಮ್ಮಲ್ಲಿ ಕೆಲವರು ಆ ದುಡ್ಡಿನ ಹೊಳೆಯತ್ತ ಆಕರ್ಷಿತರಾಗುತ್ತಾರೆ. ಮತ್ತೊಂದು ವಿಷಯವೆಂದರೆ ಅಂತಹವರಿಗೆ ಗೋಪ್ಯವಾಗಿ ಕಾರ್ಯಾಚರಿಸುವ ಅವಕಾಶ ಸಿಗುತ್ತದೆ ಏಕೆಂದರೆ ಮಾದಕದ್ರವ್ಯ ನಿಗ್ರಹ ದಳ (ಎಎನ್‌ಸಿ) ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅಪರೂಪ; ಅದರ ಕಾರ್ಯಾಚರಣೆಗಳೆಲ್ಲ ರಹಸ್ಯವಾಗಿರುತ್ತವೆ.’’

ಹೆಸರು ಹೇಳಲಿಚ್ಛಿಸದ ಇನ್ನೋರ್ವ ಪೊಲೀಸ್ ಅಧಿಕಾರಿಯ ಪ್ರಕಾರ ‘‘ಡ್ರಗ್ಸ್ ಚಿನ್ನದಂತಲ್ಲ, ಅವು ಹಗುರವಿರುತ್ತವೆ, ಸುಲಭದಲ್ಲಿ ಕಣ್ಣಿಗೆ ಬೀಳುವುದೂ ಇಲ್ಲ. ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂ. ಬೆಲೆಬಾಳುವ ಡ್ರಗ್ಸ್‌ನ ಒಂದು ಸಣ್ಣ ಪೊಟ್ಟಣವನ್ನು ಬಚ್ಚಿಡುವುದು ಬಹುಸುಲಭ. ಡ್ರಗ್ಸ್ ದಂಧೆಯಲ್ಲಿ ಪೊಲೀಸನೊಬ್ಬ ಭಾಗಿಯಾಗಿದ್ದರೆ ಆತನನ್ನು/ಆಕೆಯನ್ನು ಪತ್ತೆಹಚ್ಚುವುದು ತುಂಬ ಕಷ್ಟ. ಕೆಲವೊಂದು ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿಗಳು ತಾವು ವಶಪಡಿಸಿಕೊಂಡ ಡ್ರಗ್ಸ್ ಪೊಟ್ಟಣಗಳಲ್ಲಿ ಒಂದಷ್ಟನ್ನು ಮಾತ್ರ ಅಧಿಕೃತವಾಗಿ ತೋರಿಸಿ ಉಳಿದುದನ್ನು ಡ್ರಗ್ಸ್ ಮಾರುಕಟ್ಟೆಗೆ ಕಳ್ಳಸಾಗಾಟ ಮಾಡುತ್ತಾರೆ.’’

‘‘ಪೊಲೀಸ್ ಅಧಿಕಾರಿಯೊಬ್ಬ ಕಮಿಷನ್ ಪಡೆಯುವುದಕ್ಕಿಂತಲೂ ನೇರವಾಗಿ ತಾನೇ ದಂಧೆಕೋರನಾಗಬಯಸುತ್ತಾನೆ. ಏಕೆಂದರೆ ಅತ್ಯಧಿಕ ಲಾಭ ಅಲ್ಲೇ ಇರುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಇಂತಹ ಭ್ರಷ್ಟ ಕಾರ್ಯಗಳು ಪೊಲೀಸ್ ಇಲಾಖೆಯೊಂದರಲ್ಲೇ ಅಲ್ಲ, ಇನ್ನಿತರ ಇಲಾಖೆಗಳಲ್ಲೂ ನಡೆಯುತ್ತಿರುವುದನ್ನು ಕಾಣಬಹುದು. ಉದಾಹರಣೆಗೆ ಕಾರ್ಪೊರೇಷನ್ ಅಧಿಕಾರಿಗಳು ಡೆವಲಪರ್‌ಗಳಾಗುತ್ತಾರೆ, ಕಸ್ಟಮ್ಸ್ ಅಧಿಕಾರಿಗಳು ಆಮದು ವ್ಯವಹಾರ ಪ್ರಾರಂಭಿಸುತ್ತಾರೆ. ಪೊಲೀಸ್ ಇಲಾಖೆಯನ್ನು ತೆಗೆದುಕೊಂಡರೆ ಅಲ್ಲಿ ಅನೇಕ ಅಧಿಕಾರಿಗಳು ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆ ವ್ಯವಸ್ಥೆಯ ಬಗ್ಗೆ ಹೆಚ್ಚಿನ ತಿಳಿವಳಿಕೆ ಹೊಂದಿರುವ ಅವರು ಸಿಕ್ಕಿಬೀಳದ ರೀತಿಯಲ್ಲಿ ಕಾನೂನು ಉಲ್ಲಂಘನೆ ಮಾಡಬಲ್ಲರು’’ ಎನ್ನುತ್ತಾರೆ ವೈ. ಪಿ. ಸಿಂಗ್.

2009ರ ಐಪಿಎಸ್ ಅಧಿಕಾರಿ ಸಾಜಿ ಮೋಹನ್ ಪ್ರಕರಣ 
ಮುಂಬೈನಲ್ಲಿ ಪೊಲೀಸ್-ಡ್ರಗ್ಸ್ ನಂಟಿನ ಮೊತ್ತಮೊದಲ ಪ್ರಕರಣ ಪತ್ತೆಯಾಗಿರುವುದು 2009ರ ಜನವರಿಯಲ್ಲಿ. ಅಂದು ಲಭಿಸಿದ ಪೂರ್ವಮಾಹಿತಿಯನುಸಾರ ಮಹಾರಾಷ್ಟ್ರದ ಉಗ್ರ ನಿಗ್ರಹ ದಳ (ಎಟಿಎಸ್) ಓಶಿವಾರದ ರೆಸ್ಟೋರೆಂಟ್ ಒಂದರ ಮೇಲೆ ದಾಳಿ ನಡೆಸಿದಾಗ ರಾಜೇಶ್ ಕುಮಾರ್ ಮತ್ತು ವಿಕ್ಕಿ ಒಬೆರಾಯ್ ಎಂಬ ಇಬ್ಬರು ವ್ಯಕ್ತಿಗಳು ಸಿಕ್ಕಿಬಿದ್ದರು. ರಾಜೇಶ್ ಹರ್ಯಾಣದ ಪೊಲೀಸ್ ಕಾನ್‌ಸ್ಟೆಬಲ್ ಆಗಿದ್ದರೆ ವಿಕ್ಕಿ ಓರ್ವ ವಾಣಿಜ್ಯೋದ್ಯಮಿ ಆಗಿದ್ದ. ಎಟಿಎಸ್‌ನ ಅಧಿಕಾರಿಯೊಬ್ಬರ ಪ್ರಕಾರ ಇಬ್ಬರನ್ನೂ ವಿಚಾರಣೆಗೊಳಪಡಿಸಿದಾಗ ತಮಗೆ ಡ್ರಗ್ಸ್ ಸಪ್ಲೈ ಮಾಡಿದಾತ ಓರ್ವ ಹಿರಿಯ ಅಧಿಕಾರಿ ಎಂದು ಬಾಯ್ಬಿಟ್ಟರು. ಆತ ಇನ್ಯಾರೂ ಅಲ್ಲ, ಜಮ್ಮು ಕಾಶ್ಮೀರ ಕೇಡರ್‌ನ ಐಪಿಎಸ್ ಅಧಿಕಾರಿ ಸಾಜಿ ಮೋಹನ್.

ಸಾಜಿ ಮೋಹನ್ ಕೆಲವೇ ವಾರಗಳ ಕೆಳಗೆ ಮಹಾರಾಷ್ಟ್ರದ ಜಾರಿ ನಿರ್ದೇಶನಾಲಯಕ್ಕೆ ಡೆಪ್ಯುಟಿ ಡೈರೆಕ್ಟರ್ ಆಗಿ ಸೇರಿದ್ದ. ತನಿಖೆ ಮುಂದುವರಿದಂತೆ ಇನ್ನಷ್ಟು ಗುಟ್ಟುಗಳು ಬಯಲಿಗೆ ಬಂದವು. ಮೋಹನ್ 2006ರಿಂದ 2008ರ ತನಕ ಚಂಡಿಗಡದ ಮಾದಕದ್ರವ್ಯ ನಿಯಂತ್ರಣ ಇಲಾಖೆಯಲ್ಲಿ (ಎನ್‌ಸಿಬಿ) ವಲಯ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದ. ಆತನ ತಂಡ ಹಲವಾರು ಡ್ರಗ್ಸ್ ಕೂಟಗಳನ್ನು ಪತ್ತೆಹಚ್ಚಿತ್ತು. ಮಾಜಿ ಸೇನಾಧಿಕಾರಿಯೊಬ್ಬರ ಮಗನಾದ ಮೋಹನ್ ಮೊದಲು ಓರ್ವ ಪಶುವೈದ್ಯನಾಗಿದ್ದ. 1995ರಲ್ಲಿ ಐಪಿಎಸ್‌ಗೆ ಸೇರಿದ ಈತ 10 ವರ್ಷಗಳ ಕಾಲ ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದ. ತರುವಾಯ ಚಂಡಿಗಡದ ಎನ್‌ಸಿಬಿಗೆ ಸೇರಿದ್ದ. ರಾಷ್ಟ್ರಪತಿಯವರ ಶೌರ್ಯ ಪ್ರಶಸ್ತಿ ವಿಜೇತನೂ ಆಗಿದ್ದ ಮೋಹನ್ 2 ವರ್ಷಗಳ ಅವಧಿಗೆ ವಿಶ್ವಸಂಸ್ಥೆಗೂ ನಿಯೋಜಿಸಲ್ಪಟ್ಟಿದ್ದ. ಮೋಹನ್ ಬಳಿ ಸಿಕ್ಕಿದ್ದ ಹೆರಾಯಿನ್ ಚಂಡಿಗಡದ ಎನ್‌ಸಿಬಿ ವಶಪಡಿಸಿಕೊಂಡಿದ್ದ ದೊಡ್ಡ ಪ್ರಮಾಣದ ಹೆರಾಯಿನ್‌ನ ಒಂದು ಭಾಗವಾಗಿತ್ತು.

2011ರ ಡಿವೈಎಸ್‌ಪಿ ಅಶೋಕ್ ದಾವ್ಳೆ ಪ್ರಕರಣ
ಕಾನೂನು ಪದವೀಧರನಾದ ಅಶೋಕ್ ದಾವ್ಳೆ ನಾಗರಿಕ ಹಕ್ಕು ರಕ್ಷಣಾ ವಿಭಾಗದಲ್ಲಿ ಡಿವೈಎಸ್‌ಪಿ ಆಗಿದ್ದ. ಮುಂಬೈನ ಕ್ರೈಮ್ ಬ್ರಾಂಚ್‌ನಿಂದ ಬಂಧಿಸಲ್ಪಟ್ಟಾಗ ಅಶೋಕ್ ದಾವ್ಳೆ ಬಳಿ 1.5 ಕಿಲೊ ಬ್ರೌನ್ ಶುಗರ್ ಪತ್ತೆಯಾಗಿತ್ತು. ಅಪರಾಧ ವಿಭಾಗದವರು ದಾವ್ಳೆಯೊಂದಿಗೆ ಆತನ ಸಹಚರ ಅಮರ್‌ಸಿಂಗ್ ದಿಲೀಪ್‌ಸಿಂಗ್‌ನನ್ನೂ ಬಂಧಿಸಿದ್ದರು. ಹತ್ತನೇ ಇಯತ್ತೆಯಲ್ಲಿ ಫೇಲ್ ಆದ ಸಿಂಗ್ ಡ್ರಗ್ಸ್ ವಲಯಗಳಲ್ಲಿ ಕಾಶ್ಮೀರಿ ಎಂದೇ ಕರೆಯಲ್ಪಡುತ್ತಿದ್ದ. ದಾವ್ಳೆ ಮೊದಲು ಮಾದಕದ್ರವ್ಯ ನಿಗ್ರಹ ದಳದಲ್ಲಿದ್ದ (ಎಎನ್‌ಸಿ). ಅಲ್ಲಿ ಆತನಿಗೆ ಸಿಂಗ್‌ನ ಪರಿಚಯವಾಗಿತ್ತು. ಪೊಲೀಸ್ ಮಾಹಿತಿದಾರನಾಗಿ ಪರಿಣಮಿಸಿದ್ದ ಸಿಂಗ್ ಹಲವಾರು ಡ್ರಗ್ಸ್ ಸಾಗಾಟಗಾರರ ಬಗ್ಗೆ ಮಾಹಿತಿ ಒದಗಿಸಿದ್ದ. ಪೊಲೀಸ್ ಮೂಲಗಳ ಪ್ರಕಾರ ರೂ. 10 ಲಕ್ಷ ಮೌಲ್ಯದ ಡ್ರಗ್ಸ್ ಖರೀದಿಸಿದ್ದ ದಾವ್ಳೆ ರೂ. 5 ಲಕ್ಷ ಲಾಭ ಹೊಡೆಯುವ ನಿರೀಕ್ಷೆಯಲ್ಲಿದ್ದ. ಆ ಡ್ರಗ್ಸ್ ಪಾರ್ಸೆಲ್ ತರಲೆಂದು ಸಿಂಗ್‌ನನ್ನು ರೈಲು ಮಾರ್ಗವಾಗಿ ರಾಜಸ್ಥಾನಕ್ಕೆ ಕಳುಹಿಸಿದ್ದ. ಬಹುಶಃ ಪಾಕಿಸ್ತಾನದಿಂದ ಜಮ್ಮು ಕಾಶ್ಮೀರಕ್ಕೆ ಕಳ್ಳಸಾಗಣೆಯಾಗಿದ್ದ ಆ ಡ್ರಗ್ಸ್ ಪಾರ್ಸೆಲ್ ಅನ್ನು ನಂತರ ಅಲ್ಲಿಂದ ರಾಜಸ್ಥಾನಕ್ಕೆ ರವಾನಿಸಲಾಗಿತ್ತು. ದಾವ್ಳೆ ಮತ್ತು ಸಿಂಗ್ ಅದನ್ನು ವರ್ಲಿಯ ಓರ್ವ ಮಹಿಳೆಗೋಸ್ಕರ ತಂದಿದ್ದರು. ಆದರೆ ವಾಸ್ತವದಲ್ಲಿ ಆಕೆ ಓರ್ವ ಮಾಹಿತಿದಾರಳಾಗಿದ್ದಳು. ಪರಿಣಾಮವಾಗಿ ಡ್ರಗ್ಸ್ ಪಾರ್ಸೆಲ್ ಅನ್ನು ಪೊಲೀಸ್ ಜೀಪ್‌ನಲ್ಲಿ ಸಾಗಿಸುತ್ತಿದ್ದಾಗ ಎಎನ್‌ಸಿ ತಂಡ ದಾಳಿ ನಡೆಸಿತು. ದಾವ್ಳೆ ಮತ್ತು ಸಿಂಗ್ ಜೀಪ್ ನಿಲ್ಲಿಸಿ ಕೆಳಗಿಳಿದಾಕ್ಷಣ ಇಬ್ಬರನ್ನೂ ಬಂಧಿಸಲಾಯಿತು. ಇದೇ ದಾವ್ಳೆ ಹಿಂದೊಮ್ಮೆ ಪೊಲೀಸ್ ವಾಹನದಲ್ಲಿ ಕಳ್ಳಭಟ್ಟಿ ಸಾಗಿಸುತ್ತಿದ್ದಾಗ ಸುಂಕದ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದ. ಆಗ ಅಮಾನತುಗೊಂಡ ದಾವ್ಳೆಯನ್ನು ನಂತರ ಹುದ್ದೆಗೆ ಮರುಭರ್ತಿ ಮಾಡಿ ನಾಗರಿಕ ಹಕ್ಕು ರಕ್ಷಣಾ ವಿಭಾಗಕ್ಕೆ ನಿಯೋಜಿಸಲಾಗಿತ್ತು.

2015ರ ಜಮ್ಮು ಕಾಶ್ಮೀರದ ಎಎಸ್‌ಐ ಮುಹಮ್ಮದ್ ಶಫಿ ಗುಲಾಮ್ ಪ್ರಕರಣ
ಎಎನ್‌ಸಿ ಅಧಿಕಾರಿಗಳು ಹೇಳುವಂತೆ ಮಸ್ಜಿದ್ ಬಂದರ್‌ನಲ್ಲಿ ಅಫೀಮಿನ ಮಾರಾಟ ನಡೆಯಲಿದೆ ಎಂಬ ನಿರ್ದಿಷ್ಟ ಮಾಹಿತಿ ಇಲಾಖೆಗೆ ದೊರೆತಿತ್ತು. ಆ ಮಾಹಿತಿಯ ಆಧಾರದಲ್ಲಿ ಹೆಣೆದ ಜಾಲದಲ್ಲಿ ಜಮ್ಮು ಕಾಶ್ಮೀರದ ಎಎಸ್‌ಐ ಮುಹಮ್ಮದ್ ಶಫಿ ಗುಲಾಮ್ ಮತ್ತು ಆತನ ಸಂಗಾತಿ ರುಕ್ಸಾನಾ ಅಬ್ದುಲ್ ಮಸ್ಜಿದ್ ಬಿಹಾರಿ ರೂ 9.6 ಲಕ್ಷ ಮೌಲ್ಯದ 8 ಕಿಲೊ ಅಫೀಮಿನೊಂದಿಗೆ ಸಿಕ್ಕಿಬಿದ್ದರು. ಹಜಮ್‌ಗೆ ಅಫೀಮು ಸರಬರಾಜು ಮಾಡಿದಾತ ಜಮ್ಮು ಕಾಶ್ಮೀರದ ಡ್ರಗ್ಸ್ ಪೆಡ್ಲರ್ ಗುಲಾಂ ನಬಿ ಎಂದು ವಿಚಾರಣೆಯ ವೇಳೆ ತಿಳಿದುಬಂದಿದೆ. ಹಜಮ್ ಆ ಅಫೀಮನ್ನು ರುಕ್ಸಾನಾಗೆ ಮಾರುವವನಿದ್ದ. 2015ರ ಕಾನ್‌ಸ್ಟೆಬಲ್ ಧರ್ಮರಾಜ್ ಕಲೋಕೆ ಪ್ರಕರಣ

2015ರ ಮಾರ್ಚ್‌ನಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಖಂಡಾಲಾ ತಾಲೂಕಿನ ಹಳ್ಳಿಯೊಂದರ ಮನೆಯಿಂದ ಕೋಟಿಗಟ್ಟಲೆ ಬೆಲೆಬಾಳುವ 110 ಕಿಲೊ ಎಂ-ಕ್ಯಾಟ್ (ಅಥವಾ ಮಿಯಾವ್ ಮಿಯಾವ್) ಎಂಬ ಮಾದಕದ್ರವ್ಯವನ್ನು ವಶಪಡಿಸಿಕೊಳ್ಳಲಾಯಿತು. ಮನೆಯ ಮಾಲಕನಾದ ಧರ್ಮರಾಜ್ ಕಲೋಕೆ ಎಂಬಾತ ಮುಂಬೈಯ ಮರೀನ್ ಡ್ರೈವ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿದ್ದ. ಠಾಣೆಯಲ್ಲಿ ಆತನ ಕಪಾಟನ್ನು ಶೋಧಿಸಿದಾಗ 12 ಕಿಲೊ ಎಂ-ಕ್ಯಾಟ್ ಎಂದು ಸಂಶಯಿಸಲಾದ ಬಿಳಿ ಪುಡಿ ಮತ್ತು ಒಂದಷ್ಟು ಅಫೀಮು ದೊರೆತಿದೆ. ಧರ್ಮರಾಜ್‌ನ ಸಹಾಯಕನಾಗಿದ್ದಾತ ಬೇಬಿ ಪಟಾಣ್‌ಕರ್ ಎಂಬ ಡ್ರಗ್ ಪೆಡ್ಲರ್. ಭಾರತದ ಯುವಜನಾಂಗವನ್ನು ತಪ್ಪುದಾರಿಗೆಳೆದು ಅವರ ಬದುಕನ್ನೇ ನಾಶಮಾಡುವ ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕಲೇಬೇಕಾಗಿದೆ. ಅದಕ್ಕೆ ಮುನ್ನ ಡ್ರಗ್ಸ್ ದಂಧೆಯ ವ್ಯಾಪ್ತಿ, ಅದರ ಸೂತ್ರಧಾರಿಗಳು ಹಾಗೂ ಪಾತ್ರಧಾರಿಗಳು, ರಾಜಕೀಯ ನಂಟುಗಳು, ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಆಯಾಮಗಳು, ಬಲಿಪಶುಗಳ ಮಾನಸಿಕ ಸ್ಥಿತಿ, ಅವರನ್ನು ವ್ಯಸನಮುಕ್ತಗೊಳಿಸಲು ಕೈಗೊಳ್ಳಬೇಕಿರುವ ಕ್ರಮಗಳು ಮುಂತಾದ ವಿಷಯಗಳ ಕುರಿತು ಒಂದು ಸಮಗ್ರ ಅಧ್ಯಯನವನ್ನು ಕೈಗೊಳ್ಳುವ ಅಗತ್ಯವಿದೆ. ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ವಿವಿಧ ಕ್ಷೇತ್ರಗಳ ತಜ್ಞರನ್ನೊಳಗೊಂಡ ಸಮಿತಿಯೊಂದು ನಡೆಸುವ ನಿಷ್ಪಕ್ಷ ಅಧ್ಯಯನವೊಂದೇ ಸತ್ಯಾಂಶಗಳನ್ನು ಹೊರಗೆಡಹಬಲ್ಲುದು ಮತ್ತು ಸೂಕ್ತ ಸಲಹೆಸೂಚನೆಗಳನ್ನು ನೀಡಬಲ್ಲುದು.

(ಆಧಾರ: ಎಪ್ರಿಲ್ 2, 2015ರ DNA ಪತ್ರಿಕೆಯಲ್ಲಿ ಪ್ರಕಟವಾದ ಸೋಮೇಂದ್ರ ಶರ್ಮಾ ಲೇಖನ)

Writer - ಸುರೇಶ್ ಭಟ್ ಬಾಕ್ರಬೈಲ್

contributor

Editor - ಸುರೇಶ್ ಭಟ್ ಬಾಕ್ರಬೈಲ್

contributor

Similar News