ಶಾಸಕ ಬಿ. ನಾರಾಯಣರಾವ್‍ಗೆ ಕಾಂಗ್ರೆಸ್‍ನಿಂದ ಶ್ರದ್ಧಾಂಜಲಿ

Update: 2020-09-25 18:01 GMT

ಬೆಂಗಳೂರು, ಸೆ.25: ಕೋವಿಡ್ ಸೋಂಕಿನಿಂದ ಗುರುವಾರ ನಿಧನರಾದ ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ. ನಾರಾಯಣ ರಾವ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಂತಾಪ ಸೂಚನಾ ಸಭೆಯಲ್ಲಿ ಮಾಜಿ ಸಂಸದರಾದ ಕೆ.ಎಚ್. ಮುನಿಯಪ್ಪ, ಬಿ.ಎನ್. ಚಂದ್ರಪ್ಪ, ಶಾಸಕ ಧರ್ಮಸೇನ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸೇರಿದಂತೆ ಹಲವರಿದ್ದರು.

ಸಂತಾಪ ಸೂಚಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಹುಟ್ಟು ಹೋರಾಟಗಾರ, ಅಪರೂಪದ ರಾಜಕಾರಣಿ, ಸಮಾಜದ ಎಲ್ಲ ವರ್ಗಗಳ ಬಗ್ಗೆ ಸದಾ ಚಿಂತನೆ ಮಾಡುತ್ತಿದ್ದಂತಹ ವ್ಯಕ್ತಿ ನಾರಾಯಣರಾವ್ ಸಾಮಾಜಿಕ ಕಳಕಳಿ ಹೊಂದಿದ್ದರು. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದು ಅವರ ಕಾರ್ಯವೈಖರಿಯನ್ನು ನೆನಪಿಸಿಕೊಂಡರು.

ಆಸ್ಪತ್ರೆಗೆ ದಾಖಲಾಗುವ ಮೂರು ದಿನ ಮುನ್ನ ಪಕ್ಷದ ಕಚೇರಿಗೆ ಆಗಮಿಸಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡೋಣ ಬನ್ನಿ, ನಾನೂ ಪಾಲ್ಗೊಳ್ಳುತ್ತೇನೆ ಎಂದಿದ್ದರು. ಕಾಂಗ್ರೆಸ್ ಪಕ್ಷದ ಬಗ್ಗೆ ಎಐಸಿಸಿ ಸಭೆಯಲ್ಲಿ ಉತ್ತಮ ಭಾಷಣ ಮಾಡಿದ್ದರು. ಆಗ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವೇದಿಕೆ ಮೇಲೆ ಕರೆದು ಮಾತನಾಡಿಸಿದ್ದರು. ವಿಶೇಷವಾಗಿ ಯುವಕರಿಗೆ ಹೆಚ್ಚು ಸ್ಪೂರ್ತಿ ಕೊಡುವ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಹೋರಾಡಿದವರು ಎಂದು ಬಣ್ಣಿಸಿದರು.

ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಮಾತನಾಡಿ, ನಾರಾಯಣ ರಾವ್ ಸುರ್ದೀಘ ಕಾಲದ ಸ್ನೇಹಿತರಾಗಿದ್ದರು. ಸಮಾಜದಲ್ಲಿ ಹಿಂದುಳಿದ ವರ್ಗಗಳ ಪರವಾಗಿ ನೇರವಾಗಿ ಹೋರಾಡಿದ ಕೀರ್ತಿ ಅವರದ್ದು. ವಿಶ್ರಾಂತಿಯನ್ನೇ ಪಡೆಯದ ಹೋರಾಟಗಾರ, ಪಕ್ಷ ನಿಷ್ಠರಾಗಿದ್ದರು. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರು. ನಿಷ್ಠಾವಂತ ಮುಖಂಡನನ್ನು ನಾವು ಕಳೆದುಕೊಂಡಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News