ಶಾಸಕ ನಾರಾಯಣರಾವ್ ನಿಧನಕ್ಕೆ ವಿಧಾನಪರಿಷತ್‍ ನಲ್ಲಿ ಸಂತಾಪ

Update: 2020-09-25 18:14 GMT

ಬೆಂಗಳೂರು, ಸೆ.25: ಗುರುವಾರ ಮೃತಪಟ್ಟಿದ್ದ ಕಾಂಗ್ರೆಸ್ ಪಕ್ಷದ ವಿಧಾನಸಭೆ ಸದಸ್ಯ ನಾರಾಯಣರಾವ್ ನಿಧನಕ್ಕೆ ಶುಕ್ರವಾರ ವಿಧಾನಪರಿಷತ್‍ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಪಕ್ಷಾತೀತವಾಗಿ ಗೌರವ ಸಲ್ಲಿಸಿದರು.

ವಿಧಾನ ಪರಿಷತ್ ಬೆಳಗಿನ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ ನಾರಾಯಣರಾವ್ ನಿಧನಕ್ಕೆ ಸಂತಾಪ ಸೂಚಿಸಿದರು. ಸಂತಾಪ ನಿರ್ಣಯದ ಮೇಲೆ ಮಾತನಾಡಿದ ಸಭಾ ನಾಯಕ ಹಾಗೂ ಸಚಿವ ಕೋಟಾ ಶ್ರೀನಿವಾಸಪೂಜಾರಿ, ಶಾಸಕ ನಾರಾಯಣರಾವ್ ಕೇವಲ ಶಾಸಕರಾಗಿ ಪರಿಚಿತರಾದವರಲ್ಲ. ಅವರು, ವ್ಯವಸ್ಥೆಯಲ್ಲಿ ಧ್ವನಿಯಿಲ್ಲದವರಿಗೆ ಧ್ವನಿಯಾಗಿ ಕೆಲಸ ಮಾಡಿದರು ಎಂದು ಹೇಳಿದರು.

ಬುಡಕಟ್ಟು ಸಮುದಾಯಕ್ಕೆ, ಅದರಲ್ಲಿಯೂ ಗೊಂಡ ಸಮುದಾಯದ ಅಭಿವೃದ್ಧಿಗಾಗಿ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಆ ಸಮುದಾಯದವರಿಗೆ ಪ್ರಮಾಣಪತ್ರಗಳನ್ನು ವಿತರಿಸುವಂತೆ ಒತ್ತಾಯಿಸಿದ್ದರು. ಆ ಮೂಲಕ ಗೆಲುವು ಸಹ ಸಾಧಿಸಿದ್ದರು ಎಂದು ತಿಳಿಸಿದರು.

ಸಂತಾಪ ಸೂಚಿಸಿ ಮಾತನಾಡಿದ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ನಾರಾಯಣರಾವ್ ಅವರು ಜನರಪರ ಕಾಳಜಿ ಇದ್ದ ಶಾಸಕರು. ಬೀದರ್ ನಲ್ಲಿ ಅನುಭವ ಮಂಟಪ ನಿರ್ಮಾಣ ಮಾಡವ ತನಕ ನಾನು ಸಾಯಲ್ಲ ಅಂತ ಹೇಳುತ್ತಾ ಇದ್ದರು. ಅನುಭವ ಮಂಟಪವನ್ನು ರಾಷ್ಟ್ರಪತಿಗಳಿಂದ ಉದ್ಘಾಟನೆ ಮಾಡಿಸಬೇಕು ಅಂದಿದ್ದರು. ಆದರೆ ಅದಕ್ಕೂ ಮೊದಲೇ ನಿಧನರಾಗಿದ್ದು, ಆಘಾತ ತಂದಿದೆ ಎಂದರು.

ಬಿಜೆಪಿ ಸದಸ್ಯ ಶಾಂತರಾಮ್ ಸಿದ್ದಿ ಮಾತನಾಡಿ, ನಾರಾಯಣರಾವ್ ಬುಡಕಟ್ಟು ಜನಾಂಗದ ಏಳಿಗೆಗೆ ಶ್ರಮಿಸಿದ್ದರು. ಮುಂದೇ ನಾನು ಅವರನ್ನ ಭೇಟಿ ಮಾಡಬೇಕಾಗಿತ್ತು. ಆದರೆ ವಿಧಿ ಅಷ್ಟರಲ್ಲಿ ಬೇರೆ ಮಾಡಿದೆ. ಕಾಂಗ್ರೆಸ್ ಶಾಸಕ ನಾರಾಯಣ್ ರಾವ್ ಶೋಷಿತರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಶೋಷಿತರ ಪರವಾಗಿ ಸಾಕಷ್ಟು ಕನಸು ಹೊಂದಿದ್ದು, ಶಿಕ್ಷಣ ಕ್ಷೇತ್ರಕ್ಕೆ ಒತ್ತು ಕೊಟ್ಟಿದ್ದರು. ಆ ಭಾಗದ ಜನರಿಗೆ ಉಚಿತವಾಗಿ ಶಿಕ್ಷಣ ಕೊಡುತ್ತಾ ಇದ್ದರು. ಕೊರೋನ ಸೋಂಕಿನಿಂದ ನಿಧನ ಹೊಂದಿದ್ದು, ನಮಗೆಲ್ಲರಿಗೂ ನೋವು ತಂದಿದೆ ಎಂದರು.

ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ನಿನ್ನೆ ನಾನು ದೆಹಲಿಯಲ್ಲಿ ಇದ್ದೆ. ಅಂಗಡಿ ಅವರ ಅಂತ್ಯಕ್ರಿಯೆಗೆ ಹೋಗಿದ್ದೆ. ಈ ಸಂದರ್ಭದಲ್ಲಿ ಶಾಸಕರ ನಿಧನದ ಸುದ್ದಿ ಬಂತು. ನಾರಾಯಣ್ ರಾವ್ ಹೋರಾಟದಿಂದ ಬಂದವರು. ಬಡವರು ಮತ್ತು ತುಳಿತಕ್ಕೆ ಒಳಗಾದವರ ಬಗ್ಗೆ ಕಾಳಜಿ ಹೊಂದಿದ್ದರು. ಅನುಭವ ಮಂಟಪ ನಿರ್ಮಾಣದ ಕನಸು ಹೊಂದಿದ್ದರು. ಈಗ ಯಡಿಯೂರಪ್ಪ ಅವರು ಹಣ ಬಿಡುಗಡೆ ಮಾಡಿದ್ದಾರೆ. ಅವರ ಕನಸು ನನಸಾಯ್ತು. ಆದರೆ ಅದನ್ನ ನೋಡಲು ಅವರಿಲ್ಲ ಎನ್ನುವುದೇ ಬೇಸರ ಎಂದರು.

ರಘುನಾಥ ಮಲ್ಕಾಪುರೆ, ರವಿಕುಮಾರ್, ತೇಜಸ್ವಿನಿ, ಅರವಿಂದ ಅರಳಿ, ಎಚ್.ವಿಶ್ವನಾಥ್, ಆರ್.ಬಿ. ತಿಮ್ಮಾಪುರ, ಸಿ.ಎಂ.ಇಬ್ರಾಹಿಂ, ಸುನೀಲ್, ಪ್ರಕಾಶ್ ರಾಥೋಡ್, ಅಲ್ಲಂ ವೀರಭದ್ರಪ್ಪ ಸೇರಿದಂತೆ ಹಲವರು ಸಂತಾಪವನ್ನು ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News