ವಿರೋಧದ ನಡುವೆಯೇ ವಿಧಾನಸಭೆಯಲ್ಲಿ ಭೂಸುಧಾರಣೆ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ

Update: 2020-09-26 12:37 GMT

ಬೆಂಗಳೂರು, ಸೆ.26: ವಿರೋಧ ಪಕ್ಷ ಕಾಂಗ್ರೆಸ್ ಮಾಡಿದ ಸಭಾತ್ಯಾಗ, ಗದ್ದಲದ ನಡುವೆಯೇ ವಿವಾದಿತ ಕರ್ನಾಟಕ ಭೂಸುಧಾರಣೆಗಳ ವಿಧೇಯಕ(2ನೇ ತಿದ್ದುಪಡಿ)ಕ್ಕೆ ವಿಧಾನಸಭೆಯಲ್ಲಿ ಶನಿವಾರ ಅಂಗೀಕಾರ ದೊರೆಯಿತು.

ವಿಧಾನಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರು ವಿಧೇಯಕವನ್ನು ಮಂಡಿಸಿದರು. ಈ ಸಂದರ್ಭದಲ್ಲಿ ವಿರೋಧದ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪ್ರಮುಖರು ವಿಧೇಯಕ ಪ್ರತಿಯನ್ನು ಹರಿದು ಆಕ್ರೋಶ ವ್ಯಕ್ತಪಡಿಸಿ, ಸಭಾತ್ಯಾಗ ಮಾಡಿದರು. ತದನಂತರ, ತಿದ್ದುಪಡಿ ವಿಧೇಯಕವನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

ಇದಕ್ಕೂ ಮೊದಲು ವಿಧೇಯಕದ ಮೇಲೆ ನಡೆದ ಸುದೀರ್ಘ ಚರ್ಚೆಯಲ್ಲಿ ವಿಧೇಯಕದ ಪ್ರಕಾರ ಇನ್ನು ಮುಂದೆ ಯಾರು ಬೇಕಾದರೂ ಕೃಷಿ ಜಮೀನು ಖರೀದಿ ಮಾಡಬಹುದು. ಕೃಷಿಕರಲ್ಲದವರೂ ಕೃಷಿ ಭೂಮಿ ಖರೀದಿಗೆ ಅವಕಾಶ ಕೊಡುವುದರಿಂದ ಕೆಟ್ಟ ಪರಿಣಾಮಗಳಾಗುತ್ತವೆ ಎಂಬುದು ಸೇರಿದಂತೆ ಹಲವು ತಿದ್ದುಪಡಿಗೆ ಕಾಂಗ್ರೆಸ್ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಬರೀ 5 ಜನರಿರುವ ಒಂದು ಕುಟುಂಬ ಗರಿಷ್ಠ 54 ಎಕರೆ ಕೃಷಿ ಜಮೀನು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. 5ಕ್ಕಿಂತ ಹೆಚ್ಚಿರುವ ಕುಟುಂಬಕ್ಕೆ ಗರಿಷ್ಠ 108 ಎಕರೆ ಜಮೀನು ಖರೀದಿ ಮಾಡಬಹುದು. ಕೃಷಿ ಜಮೀನು ಖರೀದಿಸಲು ಈ ಹಿಂದೆ ಇದ್ದ 25 ಲಕ್ಷ ರೂ ವಾರ್ಷಿಕ ಆದಾಯ ಮಿತಿ ರದ್ದು ಮಾಡಿರುವ ಅಂಶಗಳಿಗೆ ಜೆಡಿಎಸ್ ಸದಸ್ಯರು ಚರ್ಚೆಯಲ್ಲಿ ವಿರೋಧಿಸಿದರು.

ಈ ಕುರಿತು ಸಮಾಜಾಯಿಷಿ ನೀಡಿದ ಸಚಿವ ಆರ್.ಅಶೋಕ್, ಭೂಕಂದಾಯ ಕಾಯ್ದೆ 79ಎ ತಿದ್ದುಪಡಿ ಮಾಡಲು ಪ್ರೊ. ನಂಜುಂಡಸ್ವಾಮಿ ಅವರೇ ಹೇಳಿದ್ದರು. ಹಿಂದೆ ವಿಧಾನಸಭೆ ಕಲಾಪದಲ್ಲೇ ರೈತ ನಾಯಕ ನಂಜುಂಡಸ್ವಾಮಿ ಕಾಯ್ದೆ ಬದಲಾವಣೆಗೆ ಒತ್ತಾಯಿಸಿದ್ದರು. ಈಗ ಕಾಂಗ್ರೆಸ್‍ನಲ್ಲಿರುವ ಆರ್.ವಿ.ದೇಶಪಾಂಡೆ ಅವರೂ ಕಾಯ್ದೆ ಬದಲಾವಣೆಗೆ ಒತ್ತಾಯ ಮಾಡಿರುವ ಹೇಳಿಕೆಗಳನ್ನು ಸದನದಲ್ಲಿ ಉಲ್ಲೇಖಿಸಿದರು.

ಅಲ್ಲದೆ, ಕಾಯ್ದೆ ಬದಲಾವಣೆಗೆ ಕಾಂಗ್ರೆಸ್ ನಾಯಕರೇ ಒತ್ತಾಯ ಮಾಡಿ ಈಗ ಬದಲಾಯಿಸಿ ಮಾತನಾಡುತ್ತಿದ್ದಾರೆ. ಅಲ್ಲದೆ, ಈಗ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರು ಈ ಹಿಂದೆ ಕಾಯ್ದೆ ಬದಲಾವಣೆ ಬಯಸಿದ್ದರು. ಜತೆಗೆ ಕನಕಪುರ ರಸ್ತೆಯಲ್ಲಿ ರವಿಶಂಕರ್ ಗುರೂಜಿ ಅವರು ಜಮೀನು ಪಡೆಯಲು ಸಾಧ್ಯವಾಗಲಿಲ್ಲ, ತಮ್ಮ ಸಿಬ್ಬಂದಿಯ ಮೂಲಕ ಜಮೀನು ಖರೀದಿಸಬೇಕಾಯ್ತು ಎಂದು ಡಿಕೆಶಿ ಪರೋಕ್ಷವಾಗಿ ಕಾಯ್ದೆ ಬಗೆಗಿನ ಬದಲಾವಣೆಗೆ ಸಹಮತ ಸೂಚಿಸಿದ್ದರು ಎಂದು ಅಶೋಕ್ ಅವರು ವಾಗ್ದಾಳಿ ಮಾಡಿದರು.

ಅತಿರಥರು: ಕಾಂಗ್ರೆಸ್ ಪಕ್ಷದಲ್ಲಿನ ಬಹಳ ಮಂದಿ ಈ ವಿಧೇಯಕ ತರಲು ಸಲಹೆ ಕೊಟ್ಟಿದ್ದಾರೆ. ಆ ಪಕ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿಯೇ ಅತಿರಥ ಮಹಾ ನಾಯಕರೂ ಇದ್ದಾರೆ. ಆದರೆ, ನಮ್ಮಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತ್ರ ಅತಿರಥರು ಎಂದು ನುಡಿದರು.

ಮುಖ್ಯವಾಗಿ ಈ ಹಿಂದೆ ಕಾಂಗ್ರೆಸ್ ಸರಕಾರದಲ್ಲೇ ಈ ಕಾಯ್ದೆ ಬದಲಾವಣೆಗೆ ಪ್ರಯತ್ನ ನಡೆದಿತ್ತು. ಭೂಕಂದಾಯ ಕಾಯ್ದೆ 79 ಎ ಮತ್ತು ಬಿ ಬದಲಾವಣೆ ಅಗತ್ಯವಾಗಿದೆ ಎಂದು ಇದೇ ವೇಳೆ ಸದನಕ್ಕೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News