ಸಂಚಾರ ನಿಯಮ ಉಲ್ಲಂಘನೆ: ಬೆಂಗಳೂರಿನಲ್ಲಿ ವಾರದಲ್ಲಿ 2.14 ಕೋಟಿ ರೂ. ದಂಡ ಸಂಗ್ರಹ

Update: 2020-09-26 15:21 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.26: ಕೊರೋನ ಸೋಂಕಿನ ಏರಿಕೆ ನಡುವೆಯೂ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ನಿಯಂತ್ರಿಸಲು ಮುಂದಾಗಿರುವ ನಗರ ಸಂಚಾರ ಪೊಲೀಸರು, 7 ದಿನಗಳ ಅಂತರದಲ್ಲಿ ಸುಮಾರು 2.14 ಕೋಟಿ ರೂ. ದಂಡ ಸಂಗ್ರಹಿಸಿದ್ದಾರೆ. ಸೆ.13ರಿಂದ ಸೆ.19ರ ನಡುವೆ 48,141 ಸಂಚಾರ ನಿಯಮ ಉಲ್ಲಂಘನೆ ಕೇಸ್‍ಗಳನ್ನು ದಾಖಲಿಸಲಾಗಿದೆ.

ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಸಂಬಂಧ 16,343 ಕೇಸ್ ದಾಖಲಿಸಲಾಗಿದೆ. ಹಿಂಬದಿ ಸವಾರರು ಹೆಲ್ಮೆಟ್ ಧರಿಸದೆ ಇರುವುದಕ್ಕೆ ಸಂಬಂಧಿಸಿದಂತೆ 10,247 ಕೇಸ್, ಚಾಲನಾ ಪರವಾನಿಗೆ ಇಲ್ಲದೇ ದ್ವಿಚಕ್ರ ವಾಹನ ಚಾಲನೆ ಸಂಬಂಧ 4,804, ನೋ ಎಂಟ್ರಿ 2,386, ರಾಂಗ್ ಪಾರ್ಕಿಂಗ್ 2,211, ತಿರುಚಿದ ನಂಬರ್ ಪ್ಲೇಟ್ ಬಳಕೆ 1,854, ಚಾಲನೆ ವೇಳೆ ಮೊಬೈಲ್ ಬಳಕೆ 1,370 ಕೇಸ್, ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸಿದ್ದಕ್ಕೆ ಸಂಬಂಧಿಸಿದಂತೆ 1,839 ಕೇಸ್ ದಾಖಲಿಸಲಾಗಿವೆ.

ಲಾಕ್‍ಡೌನ್ ಸಡಿಲಿಕೆ ನಂತರ ವಾಹನ ಸಂಚಾರ ಆರಂಭವಾಗಿ ಸಂಚಾರ ನಿಯಮ ಉಲ್ಲಂಘನೆ ಮತ್ತು ಅಪಘಾತಗಳು ಹೆಚ್ಚುತ್ತಿವೆ. ಅಪಘಾತಗಳನ್ನು ನಿಯಂತ್ರಿಸಲು ಮಾರ್ಚ್ ನಿಂದ ತಡೆಯಲಾಗಿದ್ದ ಭೌತಿಕ ತಪಾಸಣೆಯನ್ನು ಮತ್ತೆ ಆರಂಭಿಸಲಾಗಿದೆ. ಅಧಿಕಾರಿ ಮತ್ತು ಸಿಬ್ಬಂದಿ ಸುರಕ್ಷತೆಗೆ ಸೂಕ್ತ ಕ್ರಮ ಜರುಗಿಸಲಾಗಿದೆ. ಅಲ್ಲದೆ, ಸಿಸಿ ಕ್ಯಾಮೆರಾ ಮತ್ತು ಸಿಬ್ಬಂದಿ ಬಳಿ ಇರುವ ಸಾಧನಗಳ ಮೂಲಕವೂ ಕೇಸ್ ದಾಖಲಿಸಲಾಗುತ್ತಿದೆ ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News