ಚಿನ್ನಾಭರಣ ಅಂಗಡಿಯಲ್ಲಿ ಕಳವು ಪ್ರಕರಣ: ಮೂವರು ಆರೋಪಿಗಳ ಬಂಧನ

Update: 2020-09-26 15:25 GMT

ಬೆಂಗಳೂರು, ಸೆ.26: ಜ್ಯುವೆಲರಿ ಅಂಗಡಿಯಲ್ಲಿ ಸುಲಿಗೆ ಮಾಡಿದ್ದ ಆರೋಪ ಪ್ರಕರಣ ಸಂಬಂಧ ಮೂವರನ್ನು ಉತ್ತರ ವಿಭಾಗದ ಜಾಲಹಳ್ಳಿ ಠಾಣೆ ಪೊಲೀಸರು ಬಂಧಿಸಿ 90 ಲಕ್ಷ ರೂ. ಮೌಲ್ಯದ 1 ಕೆಜಿ 757 ಗ್ರಾಂ ಚಿನ್ನಾಭರಣ ಮತ್ತು 3.5 ಲಕ್ಷ ನಗದು, ಎರಡು ಬೈಕ್, ಒಂದು ಪಿಸ್ತೂಲು ಜಪ್ತಿ ಮಾಡಿದ್ದಾರೆ.

ರಾಜಸ್ತಾನ ಮೂಲದ ಗೋಪಾರಾಮ್(28), ಜಿತೇಂದರ್ ಮಾಳಿ(31), ರಾವ್(32) ಎಂಬುವರು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಜಾಲಹಳ್ಳಿ ವ್ಯಾಪ್ತಿಯ ಕೆಂಚುರಾಮಯ್ಯ ಬಿಲ್ಡಿಂಗ್, ಎಂಇಎಸ್ ರಸ್ತೆಯಲ್ಲಿರುವ ವಿನೋದ್ ಬ್ಯಾಂಕರ್ಸ್ ಅಂಡ್ ಜ್ಯುವೆಲರ್ಸ್ ಎಂಬ ಸಂಬಂಧಿಕರ ಅಂಗಡಿಯನ್ನು ರಾಹುಲ್ ಸಂಜಯ್ ಎಂಬುವವರು ನೋಡಿಕೊಳ್ಳುತ್ತಿದ್ದರು. ಆ.20ರಂದು ಇಬ್ಬರು ಬಂದು ಎರಡೂವರೆ ಗ್ರಾಂ ತೂಕದ ಚಿನ್ನದ ಸರವನ್ನು ಸಿದ್ಧಪಡಿಸಲು ಒಂದು ಸಾವಿರ ರೂ. ಮುಂಗಡ ಹಣ ಕೊಟ್ಟು ಹೋಗಿದ್ದರು ಎನ್ನಲಾಗಿದೆ.

ಸೆ.20ರಂದು ಬೆಳಗ್ಗೆ 9.30ರ ಸುಮಾರಿಗೆ ಅಂಗಡಿಗೆ ಬಂದ ಇವರಿಬ್ಬರು ಸಿದ್ಧಪಡಿಸಲು ಕೊಟ್ಟಿದ್ದ ಚಿನ್ನದ ಸರ ಕೊಡುವಂತೆ ಕೇಳಿದ್ದಾರೆ. ಅವರಿಗೆ ಚಿನ್ನದ ಸರ ತೋರಿಸಿದಾಗ ಅದನ್ನು ನೋಡಿ ತಮಗೆ ಮತ್ತೊಂದು ಚಿನ್ನದ ಉಂಗುರ ಬೇಕು ಎಂದು ಕೇಳಿದ್ದಾರೆ.

ಅಂಗಡಿಯಲ್ಲಿದ್ದ ರಾಹುಲ್ ಸಂಜಯ್ ಅವರು ಉಂಗುರ ತರಲು ಲಾಕರ್ ಕೊಠಡಿಗೆ ಹೋಗುತ್ತಿದ್ದಂತೆ ಇವರನ್ನು ಹಿಂಬಾಲಿಸಿಕೊಂಡು ಹೋಗಿ ಕೈಗಳಿಂದ ಹೊಡೆದು ಪಿಸ್ತೂಲಿನಿಂದ ಬೆದರಿಸಿ ಅಪಾರ ಮೌಲ್ಯದ ಚಿನ್ನಾಭರಣ, 715 ಗ್ರಾಂ ತೂಕದ ಬೆಳ್ಳಿ ವಸ್ತುಗಳು ಮತ್ತು 3.96 ಲಕ್ಷ ನಗದನ್ನು ಚೀಲದಲ್ಲಿ ತುಂಬಿಕೊಂಡು ನೀಲಿ ಬಣ್ಣದ ಬೈಕ್‍ನಲ್ಲಿ ಪರಾರಿಯಾಗಿದ್ದರು.

ಈ ಬಗ್ಗೆ ಜಾಲಹಳ್ಳಿ ಠಾಣೆ ಪೊಲೀಸರು ಸುಲಿಗೆ ಮತ್ತು ಶಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಈ ಪ್ರಕರಣದ ತನಿಖೆ ವೇಳೆ ಕೃತ್ಯ ನಡೆದ ಸ್ಥಳದಲ್ಲಿದ್ದ ದೊರೆತ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದು ಪರಿಶೀಲಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಹುಮಾನ ಘೋಷಣೆ

ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ತನಿಖಾಧಿಕಾರಿಗಳ ತಂಡಕ್ಕೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು 50 ಸಾವಿರ ರೂ.ನಗದು ಬಹುಮಾನ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News