ಗುಪ್ತಚರ-ಪೊಲೀಸರ ನಿರ್ಲಕ್ಷ್ಯ ಡಿ.ಜೆ.ಹಳ್ಳಿ ಗಲಭೆಗೆ ಕಾರಣ: ಸಿದ್ದರಾಮಯ್ಯ ಆರೋಪ

Update: 2020-09-26 16:12 GMT

ಬೆಂಗಳೂರು, ಸೆ.26: ಪ್ರವಾದಿ ಬಗ್ಗೆ ಅವಹೇಳನಕಾರಿಯಾಗಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ ನವೀನ್ ಕುಮಾರ್ ವಿರುದ್ಧ ದೂರು ದಾಖಲಿಸಿಕೊಂಡು, ಶೀಘ್ರವೆ ಆತನನ್ನು ಬಂಧನ ಮಾಡಿದ್ದರೆ ಡಿ.ಜೆ.ಹಳ್ಳಿಯಲ್ಲಿ ಗಲಭೆ ಆಗುತ್ತಿರಲಿಲ್ಲ. ಇದರಲ್ಲಿ ಪೊಲೀಸ್, ಗುಪ್ತಚರ ಹಾಗೂ ರಾಜ್ಯ ಸರಕಾರದ ವೈಫಲ್ಯವಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಶನಿವಾರ ವಿಧಾನಸಭೆಯಲ್ಲಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮೇಲಿನ ಚರ್ಚೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ಒಬ್ಬ ಶಾಸಕನಿಗೆ ರಕ್ಷಣೆ ಕೊಡಲು ಸಾಧ್ಯವಿಲ್ಲದ ಈ ಸರಕಾರ, ರಾಜ್ಯದ ಜನರಿಗೆ ಹೇಗೆ ರಕ್ಷಣೆ ಕೊಡಲು ಸಾಧ್ಯ. ರಾಜ್ಯದ ಜನ ಆತಂಕದಲ್ಲಿ ಬದುಕುವಂತಾಗಿದೆ ಎಂದು ತಿಳಿಸಿದರು.

ನವೀನ್ ಅಂದು ಸಂಜೆ 5.45ಕ್ಕೆ ಫೇಸ್‍ಬುಕ್ ಪೇಜ್‍ನಲ್ಲಿ ಪ್ರವಾದಿ ಬಗ್ಗೆ ಅವಹೇಳನಕಾರಿಯಾದ ವ್ಯಂಗ್ಯ ಚಿತ್ರ ಹಾಕಿದ್ದೆ ಈ ಗಲಭೆಗೆ ಮೂಲ ಕಾರಣ. ಆನಂತರ, 8-10 ಜನ ಎಸ್‍ಡಿಪಿಐನವರು ಈ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದರು. ಆದರೆ, ಪೊಲೀಸರು ಇದು ಸೈಬರ್ ಕ್ರೈಮ್ ಗೆ ಬರುತ್ತದೆ. ಎಫ್‍ಐಆರ್ ದಾಖಲು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಬಳಿಕ 15-20 ಮೌಲವಿಗಳು ಹೋಗಿ ದೂರು ನೀಡಲು ಪ್ರಯತ್ನಿಸಿದರೂ ಪೊಲೀಸರು ಕೇಳುವುದಿಲ್ಲ. ಸಂಜೆ 7.30 ರಿಂದ ರಾತ್ರಿ 9.30ರವರೆಗೆ ಈ ವಿಚಾರ ಚರ್ಚೆ ನಡೆದಿದೆ. ಈ ಹಂತದಲ್ಲಿ ಜನ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ. ಗೃಹ ಸಚಿವ ಬೊಮ್ಮಾಯಿ, ನಮ್ಮ ಶಾಸಕ ಝಮೀರ್ ಅಹ್ಮದ್‍ಗೆ ರಾತ್ರಿ 10.30ಕ್ಕೆ ಕರೆ ಮಾಡಿ ಜನರಿಗೆ ತಿಳಿ ಹೇಳುವಂತೆ ಕೋರಿದರು. ಅದರಂತೆ, ಝಮೀರ್ ಹಾಗೂ ರಿಝ್ವಾನ್ ಅಲ್ಲಿ ಹೋಗಿ ಜನರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಅರವಿಂದ ಲಿಂಬಾವಳಿ ಮಾತನಾಡಿ, ಯಾಖೂಬ್ ಬಶೀರ್ ಎಂಬುವವನು ಹಾಕಿದ್ದ ಪೋಸ್ಟ್‍ಗೆ ನವೀನ್ ಪ್ರತಿಕ್ರಿಯೆ ನೀಡಿದ್ದು, ಆತ ಯಾವ ಪಕ್ಷದ ಕಾರ್ಯಕರ್ತ ಎಂದರು. ಈಗ ಮಧ್ಯಪ್ರವೇಶಿಸಿದ ಝಮೀರ್ ಅಹ್ಮದ್, ಆತ ಬಿಜೆಪಿ ಪಕ್ಷದ ಕಾರ್ಯಕರ್ತ ಎಂದು ಪೋಸ್ಟ್ ಹಾಕಿಕೊಂಡಿದ್ದಾನೆ ಎಂದರು. ಆಗ ಸದನದಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ನವೀನ್ ಕಾಂಗ್ರೆಸ್ ಕಾರ್ಯಕರ್ತ ಎಂದು ಪೊಲೀಸರೇ ವರದಿ ನೀಡಿದ್ದಾರೆ ಎಂದು ಅರವಿಂದ ಲಿಂಬಾವಳಿ ತಿರುಗೇಟು ನೀಡಿದರು.

ರಾತ್ರಿ 10 ಗಂಟೆಗೆ ಶ್ರೀನಿವಾಸಮೂರ್ತಿ ಮನೆಗೆ ನುಗ್ಗಿ ಅಲ್ಲಿ ಬೆಂಕಿ ಹಾಕಿದ್ದಾರೆ. ಅಲ್ಲಿನ ವಾಹನಗಳಿಗೆ ಹಾಗೂ ಪೊಲೀಸ್ ಠಾಣೆಯಲ್ಲಿದ್ದ ವಾಹನಗಳಿಗೂ ಬೆಂಕಿ ಹಚ್ಚಿದ್ದಾರೆ. ಪೊಲೀಸರು ಎಫ್‍ಐಆರ್ ಮಾಡಿಲ್ಲ, ನವೀನ್ ನನ್ನು ಬಂಧಿಸಿಲ್ಲ ಎಂಬ ವಿಚಾರಕ್ಕೆ ಜನರಲ್ಲಿ ಆಕ್ರೋಶ ಇತ್ತು. ಆದರೆ, ಸರಕಾರದ ಸಚಿವರು ಇದನ್ನು ಪೂರ್ವ ನಿಯೋಜಿತವಾದ ಸಂಚು ಎಂದು ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅವರು ಕಿಡಿಗಾರಿದರು.

ಶ್ರೀನಿವಾಸಮೂರ್ತಿ ಮನೆ ಪಕ್ಕದಲ್ಲಿದ್ದ ಆಂಜನೇಯ ದೇವಸ್ಥಾನ ಹಾಗೂ ನವೀನ್ ತಾಯಿ ಜಯಂತಿಯನ್ನು ರಕ್ಷಣೆ ಮಾಡಿದ್ದು ಮುಸ್ಲಿಮ್ ಹುಡುಗರು. ಇದು ಕೋಮುಗಲಭೆಯಾಗಿದ್ದರೆ ದೇವಸ್ಥಾನ ಹಾಗೂ ನವೀನ್ ಕುಟುಂಬದವರನ್ನು ಹಾಗೂ ಬೇರೆಯವರ ಮೇಲೆ ಹಲ್ಲೆ ನಡೆಸುತ್ತಿರಲಿಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಈ ಗಲಭೆಯಲ್ಲಿ ನಡೆದ ಗೋಲಿಬಾರ್ ನಲ್ಲಿ ಮೂವರು ಸ್ಥಳದಲ್ಲೆ ಸಾವನ್ನಪ್ಪಿದರೆ, ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. 72ಕ್ಕೂ ಹೆಚ್ಚು ಎಫ್‍ಐಆರ್ ಗಳು ದಾಖಲು, 400ಕ್ಕೂ ಹೆಚ್ಚು ಜನರ ಬಂಧನವಾಗಿದೆ. ಅದರಲ್ಲಿ ಹಲವರು ಅಮಾಯಕರಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು, ಅದರಲ್ಲಿ ರಾಜಿಯಿಲ್ಲ. ಆದರೆ, ಅಮಾಯಕರಿಗೆ ಶಿಕ್ಷೆಯಾಗಬಾರದು ಎಂದು ಅವರು ಹೇಳಿದರು.

ಡಿ.ಜೆ.ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಬಂಧಿತರಾಗಿರುವವರ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಸರಕಾರ ಇದನ್ನು ಎನ್‍ಐಎಗೆ ವಹಿಸಲು ಶಿಫಾರಸ್ಸು ಮಾಡಿದೆ. ನಮ್ಮ ಪೊಲೀಸರ ಮೇಲೆ ಇವರಿಗೆ ನಂಬಿಕೆಯಿಲ್ಲವೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಮಂಗಳೂರಿನಲ್ಲಿ ನಡೆದ ಸಿಎಎ ವಿರೋಧಿ ಹೋರಾಟದ ಸಂದರ್ಭದಲ್ಲಿಯೂ ಗೋಲಿಬಾರ್ ನಲ್ಲಿ ಇಬ್ಬರು ಅಮಾಯಕರು ಸತ್ತರು. ಈ ಬಗ್ಗೆ ಸಂತ್ರಸ್ತರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಲು ನಮ್ಮ ಪಕ್ಷದ ನಿಯೋಗ ಹೋದರೆ ವಿಮಾನ ನಿಲ್ದಾಣದಲ್ಲೆ ತಡೆ ಹಿಡಿಯಲಾಯಿತು. ನನಗೆ ಅಲ್ಲಿನ ಆಯುಕ್ತರು ಮಂಗಳೂರು ಪ್ರವೇಶಿಸದಂತೆ ನೋಟಿಸ್ ಕೊಡುತ್ತಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಸರಕಾರ ಎಂದು ಸಿದ್ದರಾಮಯ್ಯ ಕಿಡಿಗಾರಿದರು.

ಎಸ್‍ಡಿಪಿಐ ಬಗ್ಗೆ ಮೌನವೇಕೆ ?

ಗಲಭೆ ಆದಾಗ ಈ ಘಟನೆಯಲ್ಲಿ ಎಸ್‍ಡಿಪಿಐ, ಕಾಂಗ್ರೆಸ್ ಕೈವಾಡ ಎಂದು ಬಿಜೆಪಿ ಸಚಿವರು ಹೇಳಿದರು. ಆದರೆ, ಈಗ ಯಾಕೆ ಎಸ್‍ಡಿಪಿಐ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿಲ್ಲ. ಸಂಪುಟ ಸಭೆಯಲ್ಲಿ ಎಸ್‍ಡಿಪಿಐ ಬಗ್ಗೆ ಯಾರು ಮಾತನಾಡದಂತೆ ಯಡಿಯೂರಪ್ಪ ಹೇಳಿರುವುದರಿಂದ ಎಲ್ಲರೂ ಕೈ ಕಟ್ಟಿಕೊಂಡು ಕೂತಿದ್ದಾರೆ. ಇದು ನಿಮ್ಮ ದ್ವಿಮುಖ ನೀತಿಯಲ್ಲವೇ? ಇಂತಹ ಕೆಟ್ಟ ಘಟನೆಯಲ್ಲಿ ರಾಜಕೀಯ ಲಾಭ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತೀರಲ್ಲ, ನಾಚಿಕೆಯಾಗಲ್ಲವೇ?.

ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News