ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ

Update: 2020-09-26 16:32 GMT

ಬೆಂಗಳೂರು, ಸೆ.26: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕವನ್ನು ಸಚಿವ ಕೆ.ಎಸ್. ಈಶ್ವರಪ್ಪ ವಿಧಾನ ಪರಿಷತ್‍ನಲ್ಲಿ ಮಂಡಿಸಿದರು.

ಈ ವಿಧೇಯಕದ ವಿವರಣೆ ನೀಡಿದ ಸಚಿವರು, ರಾಜ್ಯ ಚುನಾವಣಾ ಆಯೋಗ ಶಿಫಾರಸು ಹಾಗೂ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಈ ತಿದ್ದುಪಡಿ ವಿಧೇಯಕ ಮಂಡಿಸುತ್ತಿದ್ದೇನೆ. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಮತ್ತು ಬಡ ವರ್ಗದವರಿಗೆ ಅನುಕೂಲ ಆಗಲಿದೆ. ದಯವಿಟ್ಟು ವಿಧೇಯಕ ಸಮ್ಮತಿಸುವಂತೆ ಮನವಿ ಮಾಡಿದರು.

ಅತ್ಯಂತ ಪ್ರಮುಖ ಬಿಲ್ ಅನ್ನು ಅತ್ಯಂತ ತರಾತುರಿಯಲ್ಲಿ ತಂದಿದ್ದೀರಿ. ಇದರ ಬಗ್ಗೆ ಯಾವ ಮಾಹಿತಿ ಇಲ್ಲ, ಚರ್ಚೆ ಆಗಿಲ್ಲ. ಕೇವಲ ಐದು ನಿಮಿಷ ಮುಂದೆ ವಿವರ ನೋಡಿ ಪ್ರತಿಕ್ರಿಯೆ ನೀಡಿ ಎಂದರೆ ಹೇಗೆ ಮಾತನಾಡುವುದು ಎಂದು ಪ್ರತಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸಾಕಷ್ಟು ವಿರೋಧ ಬಿಲ್ ಮಂಡನೆಗೆ ವ್ಯಕ್ತವಾಯಿತು. ತಿದ್ದುಪಡಿಗೆ ಮುನ್ನ ಯಾರೊಂದಿಗೂ ಚರ್ಚಿಸಿಲ್ಲ ಎಂದು ದೂರಿದರು.

ಸ್ಥಳೀಯ ಸಂಸ್ಥೆ ಪ್ರತಿನಿಧಿಗಳ ಜತೆ ಚರ್ಚೆಗೆ ಮುಂದಿನ ಬುಧವಾರ ಬೆಳಗ್ಗೆ 11 ಗಂಟೆಗೆ ಸಭೆ ಕರೆಯುತ್ತೇನೆ ಎಂದಾಗ ಪ್ರತಿಪಕ್ಷ ಸದಸ್ಯರಲ್ಲಿ ಗೊಂದಲ ಆಯಿತು. ಉತ್ತಮ ಸಭೆ ನಡೆಸೋಣ. ಅ.7 ರಂದು ಸಭೆ ನಡೆಸಿ ಎಂಬ ಸಲಹೆ ಬಂತು. ಅದಕ್ಕೆ ಸಚಿವ ಕೆ.ಎಸ್. ಈಶ್ವರಪ್ಪ ಒಪ್ಪಿಕೊಂಡರು. ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಅಪ್ಪಾಜಿಗೌಡ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳನ್ನು ಪರಿಗಣಿಸುತ್ತಿಲ್ಲ ಎಂದು ದೂರಿದ ಹಿನ್ನೆಲೆ ಸಚಿವರು ಸಭೆ ನಿಗದಿಪಡಿಸಿದರು.

ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಬಸವರಾಜ ಇಟಗಿ, ಆರ್.ಬಿ. ತಿಮ್ಮಾಪೂರ್, ಕೆ.ಸಿ. ಕೊಂಡಯ್ಯ, ಅಪ್ಪಾಜಿಗೌಡ, ಮರಿತಿಬ್ಬೇಗೌಡ, ಮತ್ತಿತರರ ಸದಸ್ಯರು ವಿಧೇಯಕದ ಮೇಲೆ ಚರ್ಚಿಸಿದರು. ಸುದೀರ್ಘ ಆರೋಪ ಪ್ರತ್ಯಾರೋಪ, ಸಲಹೆ ನಂತರ ಒಂದಿಷ್ಟು ವ್ಯವಸ್ಥೆ ಸರಿಪಡಿಸಲು ಈ ಬದಲಾವಣೆ ತಂದಿದ್ದೇವೆ ಎಂದು ಸಚಿವ ಮಾಧುಸ್ವಾಮಿ ವಿವರಿಸಿದರು.

ಸಚಿವ ಈಶ್ವರಪ್ಪ ಮಾತನಾಡಿ, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತೇವೆ. ಅದು ಮಾತಿನಲ್ಲೇ ಉಳಿದಿದೆ. ಮಹಿಳೆಯರಲ್ಲೇ ಹತ್ತು ವಿಭಾಗ ಇದೆ. ಐದು ವರ್ಷಕ್ಕೆ ಮೀಸಲಾತಿ ಬದಲಿಸುವುದರಿಂದ ಎಲ್ಲರಿಗೂ ಅವಕಾಶ ಸಿಗಲಿದೆ. ಸಾಮಾಜಿಕ ನ್ಯಾಯ ಸಿಗಲಿದೆ. ಹೊಸದಾಗಿ ಬರುವ ಯುವಕರಿಗೆ ಅವಕಾಶ ಸಿಗಲಿದೆ. ಈ ವಿಧೇಯಕ ಅನುಮೋದಿಸಬೇಕೆಂದು ಮನವಿ ಮಾಡಿದರು. ಬಳಿಕ ಅನುಮೋದನೆ ದೊರೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News