ಬಿಡಿಎ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಪರಿಷತ್‍ ನಲ್ಲಿ ಅನುಮೋದನೆ

Update: 2020-09-26 16:50 GMT

ಬೆಂಗಳೂರು, ಸೆ.26: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕವನ್ನು ಸಚಿವ ಮಾಧುಸ್ವಾಮಿ ವಿಧಾನ ಪರಿಷತ್‍ನಲ್ಲಿ ಪ್ರಸ್ತಾಪಿಸಿದರು.

ಬಿಡಿಎ ನಿವೇಶನವನ್ನು ಒತ್ತುವರಿ ಮಾಡಿಕೊಂಡಿದ್ದರೆ ಒಂದು ಹಂತದಲ್ಲಿ ದಂಡ ಪಾವತಿಸಿ ಸಕ್ರಿಯ ಗೊಳಿಸಲು ಕ್ರಮ ಕೈಗೊಳ್ಳುತ್ತೇವೆ. ಒಂದು ವರ್ಷ ಕಾಯುತ್ತೇವೆ, ಒತ್ತುವರಿ ಅರ್ಜಿ ಸಲ್ಲಿಸಿದವರಿಗೆ ಅವಕಾಶ ಮಾಡಿಕೊಡುತ್ತೇವೆ, ಅರ್ಜಿ ಸಲ್ಲಿಸದವರ ಭೂಮಿ ವಶಪಡಿಸಿಕೊಳ್ಳುತ್ತೇವೆ. ಅಗತ್ಯವಿದ್ದರೆ ತೆರವು ಕಾರ್ಯ ಕೈಗೊಳ್ಳುತ್ತೇವೆ. ಶೇ.10 ರಿಂದ ಶೇ.40 ರವರೆಗೆ ನಿವೇಶನ ಗಾತ್ರ ಆಧರಿಸಿ ದಂಡ ವಿಧಿಸುತ್ತೇವೆ. ಈ ತಿದ್ದುಪಡಿ ವಿಧೇಯಕ ಅನುಮೋದನೆ ನೀಡಬೇಕೆಂದು ಮನವಿ ಮಾಡಿದರು.

ಸದಸ್ಯರಾದ ಪಿ.ಆರ್.ರಮೇಶ್ ಮಾತನಾಡಿ, ಸರಕಾರದ ಮೂಲ ಉದ್ದೇಶಕ್ಕೆ ಇದು ವಿರುದ್ಧವಾಗಿದೆ. ಯೋಜನೆ ಹಾಗೂ ಅಭಿವೃದ್ಧಿಗೆ ಇದು ಮಾರಕವಾಗಲಿದೆ. ಬಿಡಿಎ ಜಾಗ ಬಹುತೇಕ ಬಿಬಿಎಂಪಿ ವ್ಯಾಪ್ತಿಗೆ ಬಂದಿದೆ. ಅಲ್ಲಿಗೆ ಹೋಗಿ ನೀವು ಹೇಗೆ ಕಾರ್ಯನಿರ್ವಹಿಸುತ್ತೀರಿ ಎಂದು ಪ್ರಶ್ನಿಸಿದರು.

ಸಚಿವ ಮಾಧುಸ್ವಾಮಿ ಮಧ್ಯಪ್ರವೇಶಿಸಿ ಮಾತನಾಡಿ, ಇಲ್ಲಿ ಕೇವಲ ಬಿಡಿಎ ಜಾಗ ಮಾತ್ರ ಬರಲಿದೆ. ಇತರೆ ಭೂಮಿ ಇದರ ವ್ಯಾಪ್ತಿಗೆ ಬರಲ್ಲ. ನಿವೇಶನದ ವಿಚಾರ ಇಲ್ಲಿಲ್ಲ. ನಿವೇಶನ ಹಂಚಿಕೆ ಆಗಲ್ಲ. 12 ವರ್ಷದಿಂದ ವಾಸವಾಗಿರುವ 70 ಸಾವಿರ ಮನೆಗಳಿವೆ. ಎಲ್ಲರನ್ನೂ ಖಾಲಿ ಮಾಡಿಸಿಲ್ಲ. ಮಾಡಿಸೋಕೂ ಆಗಲ್ಲ. ಇದರಿಂದ ದಂಡ ಕಟ್ಟಿಸಿಕೊಳ್ಳುವುದು ಮಾತ್ರ ಮಾರ್ಗ. ಎಲ್ಲಾ ಬಿಡಿಎ ಬಡಾವಣೆಗಳಲ್ಲಿವೆ. ಮಾನವೀಯತೆ ದೃಷ್ಟಿಯಿಂದ ಬಿಡಿಎಗೂ ಆದಾಯ ಬರುವ ದಾರಿ ಕಂಡುಕೊಂಡಿದ್ದೇವೆ ಎಂದರು. ಇದಕ್ಕೆ ಸಚಿವ ಸುರೇಶ್ ಕುಮಾರ್ ಸಹ ಸಹಮತ ವ್ಯಕ್ತಪಡಿಸಿದರು. ಇಲ್ಲೆ 12 ವರ್ಷ ಮೇಲ್ಪಟ್ಟು ವಾಸವಾಗಿರುವ ಮನೆ ಬಿಡುತ್ತೇವೆ. ನಿವೇಶನ ಇದ್ದರೆ ಅದನ್ನು ವಶಪಡಿಸಿಕೊಂಡು ನಮ್ಮ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಸದಸ್ಯರಾದ ಸಿ.ಎಂ.ಇಬ್ರಾಹಿಂ, ಬಿ.ಕೆ. ಹರಿಪ್ರಸಾದ್, ಅಪ್ಪಾಜಿಗೌಡ, ತಿಪ್ಪೇಸ್ವಾಮಿ ಮತ್ತಿತರ ಸದಸ್ಯರು ತಿದ್ದುಪಡಿ ವಿಧೇಯಕ ಸಂಬಂಧ ಮಾತನಾಡಿದರು.

ಸಚಿವ ಮಾಧುಸ್ವಾಮಿ ಮಾತನಾಡಿ, ತುಂಬಾ ಒಳ್ಳೆಯ ಉದ್ದೇಶದಿಂದ ತಿದ್ದುಪಡಿ ಮಾಡುತ್ತಿದ್ದೇವೆ. ಮುಂದೆ ಏನಾಗಲಿದೆ ಎಂಬ ಚರ್ಚೆ ನಡೆಯುತ್ತಿದೆ. ಕೋರ್ಟ್ ಮೂಲಕವೂ ಪ್ರಯತ್ನಿಸಲಾಗಿದೆ. ಇದು ಬೇರೆ ದಾರಿಯಿಲ್ಲದೇ ಈ ಹಾದಿ ಹಿಡಿದಿದ್ದೇವೆ. ಪ್ರಸ್ತಾವ ಅನುಮೋದಿಸಿ ಎಂದು ಮನವಿ ಮಾಡಿದರು. ಧ್ವನಿಮತದ ಮೂಲಕ ಪ್ರಸ್ತಾವ ಅಂಗೀಕಾರವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News