ಎಸ್.ಪಿ.ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಮೇಲ್ಮನೆಯಲ್ಲಿ ಸಂತಾಪ

Update: 2020-09-26 17:07 GMT

ಬೆಂಗಳೂರು, ಸೆ.26: ಕಲಾರತ್ನ, ಹಿರಿಯ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಮೇಲ್ಮನೆಯಲ್ಲಿ ಗೌರವಪೂರ್ವಕ ಸಂತಾಪಗಳನ್ನು ಸಲ್ಲಿಸಲಾಯಿತು.

ಶನಿವಾರ ವಿಧಾನಪರಿಷತ್‍ನಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ಸಂತಾಪ ನಿರ್ಣಯ ಮಂಡಿಸಿದ ಸಭಾಪತಿ ಪ್ರತಾಪಚಂದ್ರಶೆಟ್ಟಿ, ಗಾಯನ ಲೋಕದಲ್ಲಿ ಮೇರು ಶಿಖರವನ್ನೇರಿದ ಬಾಲಸುಬ್ರಹ್ಮಣ್ಯಂ ದೇಶದ 17 ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ ಕೀರ್ತಿಗೆ ಭಾಜನರಾಗಿದ್ದಾರೆ. ಗಾಯನದಲ್ಲಿ ಅಷ್ಟೇ ಅಲ್ಲದೇ ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಗುಣಗಾನ ಮಾಡಿದರು.

ಸಂತಾಪ ನಿರ್ಣಯದ ಮೇಲೆ ಮಾತನಾಡಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಕಲಾತ್ಮಕ ಸಿನಿಮಾಗಳಿಗೆ ಹಾಗೂ ಕಮರ್ಷಿಯಲ್ ಚಲನಚಿತ್ರಗಳಿಗೆ ಹೇಗೆ ಬೇಕೋ ಹಾಗೆ ಹಾಡುಗಳನ್ನು ಹಾಡುವ ಮೂಲಕ ನೈಜವಾದ ನ್ಯಾಯ ನೀಡಿದ್ದಾರೆ ಎಂದು ನುಡಿದರು.

ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಹಲವಾರು ಭಾಷೆಗಳಲ್ಲಿ ಗಾಯನ ಮೂಲಕ ಖ್ಯಾತರಾದ ಅವರು, ಕನ್ನಡದಲ್ಲಿಯೇ ಅತ್ಯಧಿಕ ಹಾಡುಗಳನ್ನು ಹಾಡಿದ್ದಾರೆ. ಅಲ್ಲದೆ, ಪದ್ಮಶ್ರೀ, ಪದ್ಮಭೂಷಣ, ಆರು ಭಾಷೆಗಳಲ್ಲಿ ರಾಷ್ಟ್ರ ಪ್ರಶಸ್ತಿ, 25 ಬಾರಿ ಆಂಧ್ರಪ್ರದೇಶ ಸರಕಾರದ ನಂದಿ ಪ್ರಶಸ್ತಿ ಸೇರಿದಂತೆ ಅನೇಕ ವಿವಿಗಳಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದು ತಿಳಿಸಿದರು. ನಂತರ ಸಭಾಪತಿ ಪ್ರತಾಪಚಂದ್ರ ಶೆಟ್ಟಿ 10 ನಿಮಿಷ ಸದನವನ್ನು ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News