ಸದನದಲ್ಲಿ ಮುಖ್ಯಮಂತ್ರಿ ಬಿಎಸ್‍ವೈ- ವಿಪಕ್ಷ ನಾಯಕ ಸಿದ್ದರಾಮಯ್ಯರಿಂದ 'ರಾಜೀನಾಮೆ' ಸವಾಲು

Update: 2020-09-26 17:29 GMT
File Photo

ಬೆಂಗಳೂರು, ಸೆ.26: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ವಸತಿ ಕಾಮಗಾರಿಯಲ್ಲಿ ಬಿಡಿಎ ಗುತ್ತಿಗೆದಾರರೊಬ್ಬರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬದ ಸದಸ್ಯರೊಬ್ಬರು ಲಂಚ ಪಡೆದಿದ್ದಾರೆ ಎಂದು ಖಾಸಗಿ ಸುದ್ದಿವಾಹಿನಿಯೊಂದು ನಡೆಸಿರುವ ರಹಸ್ಯ ಕಾರ್ಯಾಚರಣೆಯ ಪ್ರಕರಣದ ವಾಟ್ಸ್ ಆ್ಯಪ್ ಸಂಭಾಷಣೆಯು ವಿಧಾನಸಭೆಯಲ್ಲಿ ಆಡಳಿತ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದಕ್ಕೆ ಎಡೆ ಮಾಡಿಕೊಟ್ಟಿತು.

ಶನಿವಾರ ವಿಧಾನಸಭೆಯಲ್ಲಿ ಸರಕಾರದ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಸ್ತಾಪಿಸಿದ ಈ ವಿಷಯವು, ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ನಡುವೆ ಪರಸ್ಪರ ರಾಜೀನಾಮೆಯ ಸವಾಲಿಗೆ ತಲುಪಿತು.

ಈ ಸದನದ ಸದಸ್ಯನಲ್ಲದ ವ್ಯಕ್ತಿಯ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಈ ವಿಚಾರದಲ್ಲಿ ನನ್ನ ಮಗನ ಪಾತ್ರವಿದ್ದರೆ ನಾನು ಈ ಕೂಡಲೆ ರಾಜೀನಾಮೆ ನೀಡಿ, ರಾಜಕೀಯ ಜೀವನದಿಂದ ನಿವೃತ್ತನಾಗುತ್ತೇನೆ. ವಿಜಯೇಂದ್ರ ವಿರುದ್ಧ ನೀವು ಮಾಡುತ್ತಿರುವ ಆರೋಪವನ್ನು ಸಾಬೀತು ಮಾಡಿ, ಯಾವ ರೀತಿಯ ತನಿಖೆಯನ್ನಾದರೂ ಮಾಡಿ, ಆರೋಪ ಸಾಬೀತುಪಡಿಸದಿದ್ದರೆ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಯಡಿಯೂರಪ್ಪ ಸವಾಲು ಹಾಕಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇದು ನಡೆದಿರುವುದು ಒಂದು ಖಾಸಗಿ ಸುದ್ದಿ ವಾಹಿನಿಯ ಸ್ಟ್ರಿಂಗ್ ಆಪರೇಷನ್(ರಹಸ್ಯ ಕಾರ್ಯಾಚರಣೆ). ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಸುಪ್ರೀಂಕೋರ್ಟ್‍ನ ಹಾಲಿ ನ್ಯಾಯಾಧೀಶರು, ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಅಥವಾ ಎಸ್‍ಐಟಿ ಮೂಲಕ ತನಿಖೆ ನಡೆಸಬೇಕು ಎಂಬುದು ನಮ್ಮ ಒತ್ತಾಯ ಎಂದರು.

ಯಡಿಯೂರಪ್ಪ ರಾಜಕೀಯದಿಂದ ನಿವೃತ್ತಿಯಾಗುವುದು ಬೇಡ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಈಗ ಕೇಳಿ ಬಂದಿರುವ ಆರೋಪಗಳು ಸಾಬೀತಾಗದಿದ್ದಲ್ಲಿ ಪುನಃ ಮುಖ್ಯಮಂತ್ರಿಯಾಗಿ ಬರಲಿ, ಸಾಬೀತಾದರೆ ಮನೆಗೆ ಹೋಗಲಿ. ನಾನು ಮಾಡಿದ ಆರೋಪಗಳು ಆಧಾರ ರಹಿತ, ರಾಜಕೀಯಪ್ರೇರಿತ ಎಂಬುದು ಸಾಬೀತಾದರೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಈ ರಹಸ್ಯ ಕಾರ್ಯಾಚರಣೆ ಮಾಡಿದವನ ವಿರುದ್ಧ ಆ ಗುತ್ತಿಗೆದಾರ ನೀಡಿರುವ ದೂರಿನ ಪ್ರತಿಯನ್ನು ನಿಮಗೆ ಕಳುಹಿಸಿಕೊಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಆಡಳಿತ-ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿ ಸದಸ್ಯರು ಎದ್ದು ನಿಂತು ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದರು. ಆಗ 'ಯಾರು ಕೂಡ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ನಿಮ್ಮ ಬೆದರಿಕೆಗಳಿಗೆ ಹೆದರುವುದಿಲ್ಲ' ಎಂದು ಸಿದ್ದರಾಮಯ್ಯ ಹೇಳಿದರು.

ನಮ್ಮ ಸದನದ ಸದಸ್ಯರು, ಅಧಿಕಾರಿಗಳು ಇದರಲ್ಲಿ ಭಾಗಿಯಾಗಿಲ್ಲ. ಆದುದರಿಂದ, ಯಾವುದೆ ತನಿಖೆ ನಡೆಸುವ ಅಗತ್ಯವಿಲ್ಲ. ಈ ಸಭೆಯಲ್ಲಿ ಯಾರ ವಿರುದ್ಧವಾದರೂ ಆರೋಪ ಮಾಡುವುದಾದರೆ ಮೊದಲು ಸ್ಪೀಕರ್ ಗೆ ನೋಟಿಸ್ ನೀಡಬೇಕು. ನಿಮ್ಮ ಬಳಿ ದಾಖಲೆಗಳು ಇದ್ದರೆ, ಅವರ ಮುಂದೆ ಇಡಿ ಚರ್ಚೆ ಮಾಡೋಣ ಎಂದು ಮಾಧುಸ್ವಾಮಿ ಹೇಳಿದರು.

ರಹಸ್ಯ ಕಾರ್ಯಾಚರಣೆ ದಾಖಲೆಯಾಗಿ ಬರುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ವಿಚಾರದ ಕುರಿತು ಕಾಂಗ್ರೆಸ್ ಪಕ್ಷ ಹೊರತುಪಡಿಸಿ ಯಾರೊಬ್ಬರೂ ಒಂದೇ ಒಂದು ಹೇಳಿಕೆ ನೀಡಿಲ್ಲ. ನಿಮ್ಮ ಬಳಿ ಮಾಹಿತಿ ಇದ್ದರೆ ದೂರು ದಾಖಲಿಸಿ. ಇದಕ್ಕೂ ಮುಖ್ಯಮಂತ್ರಿಗೂ ಯಾವುದೆ ಸಂಬಂಧವಿಲ್ಲ ಎಂದು ಮಾಧುಸ್ವಾಮಿ ಹೇಳಿದರು.

ನೀವು ಏನೇನೋ ಮಾತನಾಡಿದರೆ ಅದನ್ನೆಲ್ಲ ಕೇಳಬೇಕೆ. ಸೋನಿಯಾಗಾಂಧಿ, ರಾಹುಲ್‍ ಗಾಂಧಿ, ರಾಬರ್ಟ್ ವಾದ್ರ ಪ್ರಕರಣಗಳನ್ನು ಇಲ್ಲಿ ತಂದು ಚರ್ಚೆ ಮಾಡೋಣವೆ ಎಂದು ಯಡಿಯೂರಪ್ಪ ಕಿಡಿಗಾರಿದರು.

ವಿಜಯೇಂದ್ರ ಹೆಸರನ್ನು ಕಡತದಿಂದ ತೆಗೆಸಬೇಕು. ಇಲ್ಲದಿದ್ದರೆ ನಾವು ಸದನ ನಡೆಯಲು ಬಿಡುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, ಡಿ.ಕೆ.ರವಿ ಸಾವು ಆದಾಗ ಮೆರವಣಿಗೆ ಮಾಡಿ, ತನಿಖೆಗೆ ಆಗ್ರಹಿಸಲಿಲ್ಲವೆ? ನಾವು ಸಿಬಿಐ ತನಿಖೆಗೆ ಒಪ್ಪಿಸಲಿಲ್ಲವೇ? ಮತ್ತೆ ಈ ವಿಚಾರದಲ್ಲಿ ತನಿಖೆಗೆ ಯಾಕೆ ಹಿಂದೇಟು ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News