ರಾಷ್ಟ್ರೀಯ ಶಿಕ್ಷಣ ನೀತಿ-2020: ಅನುಷ್ಠಾನಕ್ಕಿರುವ ಸವಾಲುಗಳು

Update: 2020-09-26 19:30 GMT

ಭಾರತ ಸರಕಾರ, ಮಾನವ ಸಂಪನ್ಮೂಲ ಸಚಿವಾಲಯದಿಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಮೋದನೆಗೊಂಡಿದ್ದು, 34 ವರ್ಷದ ಹಳೆಯ ಶಿಕ್ಷಣ ಪದ್ಧತಿಗೆ ತಿಲಾಂಜಲಿ ಹಾಡಿ ಮುಂದಿನ ಶೈಕ್ಷಣಿಕ ವರ್ಷಗಳಿಗೆ ಈ ನೀತಿಯಲ್ಲಿ ಬರುವ ಎಲ್ಲಾ ಅಂಶಗಳನ್ನು ಅನುಷ್ಠಾನಗೊಳಿಸಲು ಭಾರತ ಸರಕಾರ ಹಾಗೂ ವಿಶೇಷವಾಗಿ ಕರ್ನಾಟಕ ಸರಕಾರ ಸಜ್ಜಾಗುತ್ತಿರುವುದು ಶ್ಲಾಘನೀಯ. ಈ ಶಿಕ್ಷಣ ನೀತಿಯಲ್ಲಿ, ಪ್ರಾಥಮಿಕ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಸಂಬಂಧ ಸಮಗ್ರವಾಗಿ ಚರ್ಚಿಸಿ ಉತ್ತಮ ಯೋಜನೆಗಳನ್ನು ರೂಪಿಸಿರುವುದು ನಿಜಕ್ಕೂ ಅರ್ಥಪೂರ್ಣ ವಿಚಾರವೇ ಹೌದು. ಈ ನೀತಿಯಲ್ಲಿ ಕೇವಲ ಬೋಧನಾ ಕಲಿಕೆಗೆ ಒತ್ತು ಕೊಡದೆ, ಕೌಶಲ್ಯ ಆಧಾರಿತ ಶಿಕ್ಷಣಕ್ಕೆ, ಕಲೆ, ಮನರಂಜನೆ ಮಕ್ಕಳ ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ಕ್ರಿಯಾಶೀಲ ಯೋಜನೆಗಳು, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವನ್ನು ಅಭಿವೃದ್ಧಿಪಡಿಸುವುದು, ಸಾಹಿತ್ಯ, ಬಹು ವಿಷಯಗಳ ಅಧ್ಯಯನ, ಹಲವು ವೃತ್ತಿಪರ ಶಿಕ್ಷಣಗಳ ವಿಲೀನ, ಶಿಕ್ಷಣದ ಅಂತರ್‌ರಾಷ್ಟ್ರೀಕರಣ, ಪ್ರಾದೇಶಿಕ ಭಾಷೆಗೆ ಮಹತ್ವ ಹೀಗೆ ಹಲವಾರು ವಿಚಾರಗಳ ಬಗ್ಗೆ ಗಮನಹರಿಸಿರುವುದು ಪರಿಪೂರ್ಣ ಶಿಕ್ಷಣದ ತಳಹದಿಗೆ ನಾಂದಿಯಾಗಬಹುದು.

ಹಿಂದಿನ ದಿನಗಳಲ್ಲಿ, ಗುರುಕುಲ ಶಿಕ್ಷಣವನ್ನು ನೆನಪಿಸಿಕೊಂಡಾಗ ಮೌಲ್ಯಕ್ಕೆ ಹೆಚ್ಚು ಹೊತ್ತು ಕೊಡಲಾಗುತ್ತಿತ್ತೇ ಹೊರತು ವಾಣಿಜ್ಯೀಕರಣಕ್ಕಲ್ಲ. ಅಲ್ಲಿ ಮೂಲಸೌಕರ್ಯ ಹಾಗೂ ಡೊನೇಶನ್ ಗೌಣ. ಜ್ಞಾನಾರ್ಜನೆ, ವೈಚಾರಿಕತೆ, ವಸ್ತುವಿಷಯಗಳ ಪಾಂಡಿತ್ಯ ತಜ್ಞತೆಯ ಬಗ್ಗೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಗಮನ ವಹಿಸಲಾಗುತ್ತಿತ್ತು.

ಆದರೆ ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಅದರಲ್ಲೂ ವಿಶೇಷವಾಗಿ ಖಾಸಗಿ ಸಂಸ್ಥೆಗಳಲ್ಲಿ ಉತ್ತಮ ಮೂಲಸೌಕರ್ಯ ಜೊತೆಗೆ ಹೈಟೆಕ್ ಸೌಲಭ್ಯಗಳಿದ್ದರೂ ಸೇವಾಮನೋಭಾವ ಮರೆಯಾಗುತ್ತಿದ್ದು, ಶಿಕ್ಷಣದ ಮೌಲ್ಯಗಳನ್ನು ವಾಣಿಜ್ಯೀಕರಣ ನುಂಗು ಹಾಕುತ್ತಿರುವ ಪರಿಸ್ಥಿತಿಗೆ ಎಲ್ಲರೂ ಕಾರಣರಾಗಿದ್ದೇವೆ. ಆದರೆ, ಹೊಸ ಶಿಕ್ಷಣ ನೀತಿಯನ್ನು ಗಮನಿಸಿದಾಗ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಮೌಲ್ಯಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವುದರ ಜೊತೆಗೆ ಇವುಗಳ ಅನುಷ್ಠಾನಕ್ಕೆ, ಹಣಕಾಸಿನ ಸೌಲಭ್ಯ, ಅನುದಾನ ಅಷ್ಟೇ ಪ್ರಮುಖವಾಗಿದೆ. ಹಣಕಾಸಿನ ನೆಪದಲ್ಲಿ ವಾಣಿಜ್ಯ ಮುಖ್ಯ ಕಾರಣವಾದರೆ, ಈ ಹೊಸ ಶಿಕ್ಷಣ ನೀತಿಯ ಮೂಲ ಸ್ವರೂಪ ಹಾಗೂ ಉದ್ದೇಶ ವಿಫಲವಾಗಿಬಿಡುತ್ತದೆ.

ಯಾವುದೇ ನೀತಿಗಳು ಕೇವಲ ಬರವಣಿಗೆಗೆ ಸೀಮಿತವಾಗದೆ, ಅನುಷ್ಠಾನಕ್ಕೆ ಹತ್ತಿರವಾಗಿದ್ದಲ್ಲಿ, ಅದರ ಪ್ರಯೋಜನ, ಪ್ರಾಮುಖ್ಯತೆ ಹಾಗೂ ಉದ್ದೇಶಗಳು ಸಫಲವಾಗುತ್ತವೆ.

ನಮ್ಮ ರಾಜ್ಯದಲ್ಲಿ ಪ್ರಸ್ತುತ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ ವ್ಯವಸ್ಥೆಗಳನ್ನು ಅವಲೋಕನ ಮಾಡಿದಾಗ, ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ, ಅದರಲ್ಲೂ ಸರಕಾರದ ಅಧೀನದಲ್ಲಿರುವ ಶಾಲೆಗಳು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ಮಾನವ ಸಂಪನ್ಮೂಲಗಳ (ಅಧ್ಯಾಪಕರ ಹಾಗೂ ಅಧ್ಯಾಪಕೇತರರ ನೇಮಕಾತಿ ವಿಚಾರ ಸಂಬಂಧ) ಹಾಗೂ ಮೂಲಸೌಕರ್ಯಗಳ ಕೊರತೆ ಬಹಳ ಎದ್ದುಕಾಣುತ್ತಿದೆ. ಸರಕಾರವೇ ರಚಿಸಿದ ಕಾಂಟ್ರಾಕ್ಟ್ ಲೇಬರ್ ರೆಗ್ಯುಲೇಶನ್ ಕಾಯ್ದೆ ವಿರುದ್ಧವಾಗಿಯೇ, ಸರಕಾರಿ ಸಂಸ್ಥೆಗಳಲ್ಲಿ ಹೊರಗುತ್ತಿಗೆ ನೇಮಕಾತಿ ಪ್ರತಿವರ್ಷವೂ ಮುಂದುವರಿಯುತ್ತಲೇ ಇದೆ. ಅತಿಥಿ ಉಪನ್ಯಾಸಕರು ತರಬೇತಿಗಳಿಂದ ವಂಚಿತರಾಗಿ ಸುಮಾರು ವರ್ಷಗಳಿಂದ ಪಾಠಪ್ರವಚನಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳು ಕೇವಲ ಖಾಯಂ ಪ್ರಾಧ್ಯಾಪಕರಿಗೆ ತರಬೇತಿ ನೀಡುತ್ತಿದೆ ಹೊರತು ತಾತ್ಕಾಲಿಕವಾಗಿ ನೇಮಕವಾಗಿರುವ ಅತಿಥಿ ಉಪನ್ಯಾಸಕರಿಗಿಲ್ಲ. ಇದು ಉನ್ನತ ಶಿಕ್ಷಣ ಗುಣಮಟ್ಟಕ್ಕೆ ಒಂದು ಸವಾಲೇ ಹೌದು. ಈ ಉಪನ್ಯಾಸಕರು ಈಗಾಗಲೇ 10-15 ವರ್ಷಗಳಿಂದ ಬೋಧನೆ ಮಾಡಿಕೊಂಡೇ ಬಂದಿರುತ್ತಾರೆ.

ತಂತ್ರಜ್ಞಾನ ಹಾಗೂ ಡಿಜಿಟಲ್ ತರಗತಿಗಳ ಬಗ್ಗೆ ಮಾತನಾಡುತ್ತೇವೆ. ಆದರೆ ವಾಸ್ತವವಾಗಿ ನೋಡಿದಾಗ ಸರಕಾರಿ ಅಧೀನ ಶಿಕ್ಷಣ ಸಂಸ್ಥೆಗಳಲ್ಲಿ ಶೌಚಾಲಯ ವ್ಯವಸ್ಥೆಯಿಂದ ತರಗತಿ ಕಟ್ಟಡಗಳ ವ್ಯವಸ್ಥೆಗಳವರೆಗೂ ಮೂಲಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ. ಇಂದಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸುವ ಬದಲಾಗಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದುಕೊಳ್ಳುವುದಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿಯೂ, ಸಾಂಪ್ರದಾಯಿಕ ರಾಜ್ಯಮಟ್ಟದ ವಿಶ್ವವಿದ್ಯಾನಿಲಯಗಳು ಕೂಡ ಸರಕಾರಿ ಶಾಲೆಗಳ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಇಂದು ಎಷ್ಟೋ ಶಾಲಾ-ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ಕಡಿಮೆ ವೇತನದಲ್ಲಿ ಕೆಲಸ ಮಾಡುತ್ತಿದ್ದು, ಯಾವುದೇ ಉತ್ಸಾಹ ಇಟ್ಟುಕೊಳ್ಳದೆ ಹಾಗೂ ಬೋಧನಾ ಕಲಿಕೆಗಳಲ್ಲಿ ಕೌಶಲ್ಯವನ್ನು ಕರಗತ ಮಾಡಿಕೊಳ್ಳದೆ ಕೇವಲ ಯಾಂತ್ರಿಕವಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಿರುವುದು ಶಿಕ್ಷಣದ ಗುಣಮಟ್ಟಕ್ಕೆ ಭಾರೀ ಹೊಡೆತ ನೀಡಿದೆ. ಶಿಕ್ಷಕರಿಗೆ ಬೋಧನಾ ತರಬೇತಿ ಕಾರ್ಯಕ್ರಮ ಬಹಳ ಹಾಗೂ ಅತ್ಯವಶ್ಯಕವಾಗಿದೆ.

ಉನ್ನತ ಶಿಕ್ಷಣಗಳಲ್ಲಿ ಸ್ವಾಯುತ್ತತೆ ದಿನೇ-ದಿನೇ ಕುಸಿಯುತ್ತಿದೆ. ಪ್ರಾಧ್ಯಾಪಕರು ನಡೆಸುತ್ತಿರುವ ಸಂಶೋಧನೆ ಹಾಗೂ ಸಂಶೋಧನಾ ವಿಚಾರಗಳು ಕಸದಬುಟ್ಟಿಗೆ ಸೇರುತ್ತಿರುವುದು ವಿಪರ್ಯಾಸವೇ ಹೌದು. ಉತ್ತಮ ಶಿಕ್ಷಣ ನೀತಿಯ ಅನುಷ್ಠಾನವು ಬಹುಮುಖ್ಯವಾಗಿ, ಸರಕಾರ ನೀಡುವ ಹಣಕಾಸು ಹಾಗೂ ಗುಣಮಟ್ಟದ ನೇಮಕಾತಿಗಳ ಮೇಲೆ ಅವಲಂಬಿತವಾಗಿದೆ. ಸರಕಾರಗಳು ಕಾಲಕಾಲಕ್ಕೆ ನೇಮಕಾತಿ ಮಾಡದೆ ಹಾಗೂ ಸರಿಯಾದ ಸಂದರ್ಭಕ್ಕೆ ಹಣಕಾಸನ್ನು ಬಿಡುಗಡೆ ಮಾಡದಿದ್ದರೆ, ಸಾಮಾನ್ಯವಾಗಿ ಪೋಷಕರು, ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಮುಖ ಮಾಡುತ್ತಾರೆ. ನಗರ ಪ್ರದೇಶಗಳಲ್ಲೇ ಸರಕಾರಿ ಅಧೀನ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಕರ್ಯ ಕೊರತೆ ಎದ್ದು ಕಾಣುವಾಗ, ಗ್ರಾಮೀಣ ಪ್ರದೇಶಗಳಲ್ಲಿ ಇವುಗಳ ಪರಿಸ್ಥಿತಿ ಹೇಗಿರಬಹುದೆಂದು ಊಹಿಸಿಕೊಳ್ಳುವುದೂ ಅಸಾಧ್ಯ. ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹಾಗೂ ಕ್ರಿಯಾಶೀಲತೆಯನ್ನು ಹೆಚ್ಚಿಸಬೇಕಾದರೆ ಎಲ್ಲಾ ರೀತಿಯ ಸೌಕರ್ಯಗಳು ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳಬೇಕು.

ಬಹುಮುಖ್ಯ ಮೂಲಸೌಕರ್ಯಗಳನ್ನು ಸಿದ್ಧಪಡಿಸಿಕೊಂಡು, ಈ ರೀತಿಯ ಶಿಕ್ಷಣ ನೀತಿಗಳನ್ನು ಅನುಷ್ಠಾನಗೊಳಿಸಿದರೆ ಅದರ ಅರ್ಥಪೂರ್ಣತೆಯನ್ನು ಕಂಡುಕೊಳ್ಳಬಹುದು. ಇಲ್ಲವಾದಲ್ಲಿ ಎರಡು ಕಾಲು, ಕೈಗಳಿಲ್ಲದ ಯೋಧ ಯುದ್ಧಕ್ಕೆ ಸಿದ್ಧವಾದಂತೆ ಭಾಸವಾಗುತ್ತದೆ.

ಶಿಕ್ಷಣಕ್ಕೆ ನಿರಂತರವಾಗಿ ಹೆಚ್ಚಿನ ಹಣಕಾಸಿನ ಬಿಡುಗಡೆ, ಗುಣಮಟ್ಟದ ನೇಮಕಾತಿ, ಅತ್ಯವಶ್ಯಕ ಮೂಲಸೌಕರ್ಯಗಳು, ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಹಾಗೂ ಮುಕ್ತತೆ, ರಾಜಕೀಯ ಹಸ್ತಕ್ಷೇಪ ಇರದಿರುವುದು, ಬೋಧನಾ ಹಾಗೂ ಕ್ರಿಯಾಶೀಲತೆಯನ್ನು ಹೆಚ್ಚಿಸುವಂತಹ ತರಬೇತಿ ಕಾರ್ಯಕ್ರಮಗಳು, ಸಂಸ್ಥೆಗಳಿಗೆ ಸ್ವಾಯತ್ತತೆ ಕೊಡುವುದು, ಉನ್ನತ ಹುದ್ದೆಗಳಿಗೆ, ಉತ್ತಮ ಬೌದ್ಧಿಕತೆಯುಳ್ಳ, ಪ್ರಾಮಾಣಿಕ ಚಾರಿತ್ರ್ಯವುಳ್ಳ, ಸರಳತೆ ಹಾಗೂ ಮಾನವೀಯ ಮೌಲ್ಯವಿರುವ ವ್ಯಕ್ತಿಗಳನ್ನು ನೇಮಕ ಮಾಡುವುದು, ಸ್ಥಳೀಯವಾಗಿ ನಂತರ ರಾಷ್ಟ್ರ ಹಾಗೂ ಅಂತರ್ ರಾಷ್ಟ್ರಮಟ್ಟದ ಬೋಧನಾ ಪಠ್ಯಕ್ರಮಗಳನ್ನು ಹಂತಹಂತವಾಗಿ ರಚಿಸುವುದು, ಕಾಲಕಾಲಕ್ಕೆ ಶಿಕ್ಷಣ ತಜ್ಞರ ಜೊತೆ ಸಮಾಲೋಚನೆ ನಡೆಸುವುದು, ಶಿಕ್ಷಕರನ್ನು ಯಾಂತ್ರಿಕವಾಗಿ ದುಡಿಸಿಕೊಳ್ಳುವುದಕ್ಕಿಂತ ಕ್ರಿಯಾಶೀಲ ರಚನಾತ್ಮಕ ಕೆಲಸಗಳಲ್ಲಿ ಆಸಕ್ತಿ ವಹಿಸುವಂತೆ ಮಾಡುವ ತರಬೇತಿಗಳು, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮನ್ನಣೆ ಇವೆಲ್ಲವೂ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಬೇಕಾಗುವ ಪ್ರಮುಖ ಅಂಶಗಳು. ಸರಕಾರಗಳು ಈ ಮೇಲಿನ ಅಂಶಗಳಿಗೆ ಹೆಚ್ಚಿನ ಆದ್ಯತೆ ಕೊಟ್ಟರೆ ಮುಂದೆ ಗುಣಮಟ್ಟ ಆಧಾರಿತ ಶಿಕ್ಷಣ ಕ್ರಾಂತಿಯನ್ನು ತರಬಹುದು.

Writer - ಡಾ. ಎನ್. ಸತೀಶ್ ಗೌಡ

contributor

Editor - ಡಾ. ಎನ್. ಸತೀಶ್ ಗೌಡ

contributor

Similar News