ಬಂದ್ ಗೆ ಅನುಮತಿ ಪಡೆದಿಲ್ಲ, ಪ್ರತಿಭಟನೆ- ಮೆರವಣಿಗೆ ನಡೆಸಿದರೆ ಬಂಧನ: ಪೊಲೀಸ್ ಆಯುಕ್ತ ಕಮಲ್ ಪಂತ್

Update: 2020-09-28 03:49 GMT

ಬೆಂಗಳೂರು, ಸೆ.27: ಸೆ.28ರ ಕರ್ನಾಟಕ ಬಂದ್ ಸಂಬಂಧ ಯಾರೂ ಅನುಮತಿ ಪಡೆದಿಲ್ಲ. ಹಾಗಾಗಿ, ಪ್ರತಿಭಟನೆ ಹಾಗೂ ಮೆರವಣಿಗೆ ನಡೆಸಿದರೆ ಬಂಧಿಸುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಪ್ರತಿಭಟನೆ ನಡೆಸಲು ನಾವು ಯಾರಿಗೂ ಅನುಮತಿ ಕೊಟ್ಟಿಲ್ಲ. ಕೆಲವು ಸಂಘಟನೆಗಳು ಸೋಮವಾರ್ ಬಂದ್ ಮಾಡುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಸೋಮವಾರ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದೇವೆ ಎಂದರು.

ಅಂಗಡಿ ಬಂದ್‍ಗೆ ಅವಕಾಶ ಕೊಡುವುದಿಲ್ಲ. ಯಾರಿಗೂ ಅಡ್ಡಿಪಡಿಸುವಂತಿಲ್ಲ. ಆ ರೀತಿ ಆದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. 40 ಕೆಎಸ್‍ಆರ್‍ಪಿ ತುಕಡಿಯನ್ನು ನಿಯೋಜನೆ ಮಾಡಿದ್ದೇವೆ. ಯಾವುದೇ ಪ್ರತಿಭಟನೆ ಹಾಗೂ ಮೆರವಣಿಗೆಗಳಿಗೂ ಅವಕಾಶವಿಲ್ಲ. ಒಂದು ವೇಳೆ ಮಾಡಿದರೆ ಅಂಥವರನ್ನು ಬಂಧಿಸುತ್ತೇವೆ ಎಂದು ಹೇಳಿದರು.

ನಗರದ ಬೇರೆ ಬೇರೆ ಕಡೆಗಳಿಂದ ಹೊರಡುವ ರ‍್ಯಾಲಿಗಳಿಂದ ಸಂಚಾರ ದಟ್ಟಣೆ ಹೆಚ್ಚಾಗುವ ಹಿನ್ನೆಲೆ ಅದಕ್ಕೆ ಅವಕಾಶ ಇರುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಬಲವಂತವಾಗಿ ಪ್ರತಿಭಟನೆಗೆ ಇಳಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದರು.

ಇನ್ನು ಪ್ರತಿಭಟನೆಯ ಹೆಸರಿನಲ್ಲಿ ಕೊರೋನ ನಿಯಮ ಉಲ್ಲಂಘಿಸಿದರೆ ಎನ್‍ಡಿಎಂಎ ಅಡಿಯಲ್ಲಿ ದೂರು ದಾಖಲು ಮಾಡಲಾಗುತ್ತದೆ. ಒಂದೊಂದು ವಿಭಾಗಗಕ್ಕೆ ಇಬ್ಬರು ಡಿಸಿಪಿಗಳ ನೇತೃತ್ವದಲ್ಲಿ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News