ಕೇಂದ್ರದ ಬಳಿ ಹಣ ಕೇಳುವ ಧೈರ್ಯ ಬಿಜೆಪಿಯವರಿಗೆ ಇಲ್ಲ: ಸಿದ್ದರಾಮಯ್ಯ

Update: 2020-09-27 16:47 GMT

ಬೆಂಗಳೂರು, ಸೆ.27: ರಾಜ್ಯದ ಹಣಕಾಸು ಸ್ಥಿತಿ ಅಧೋಗತಿಗೆ ಹೋಗಿದೆ. ಸಾಲದ ಮೇಲೆ ಸಾಲ ಮಾಡ್ತಾ ಇದಾರೆ. ರಾಜ್ಯ ಸರಕಾರದ ಸಾಲ 4 ಲಕ್ಷ ಕೋಟಿ ರೂ. ದಾಟಲಿದ್ದು, ವರ್ಷಕ್ಕೆ 23 ಸಾವಿರ ಕೋಟಿ ರೂ. ಬಡ್ಡಿ ಕಟ್ಟುತ್ತಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ರವಿವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಕಾಂಗ್ರೆಸ್ ಹಿರಿಯ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪರಿಸ್ಥಿತಿ ಈ ರೀತಿ ಇದೇ ರೀತಿ ಮುಂದುವರಿದರೆ, ರಾಜ್ಯದಲ್ಲಿ ಅಭಿವೃದ್ದಿ ಕಾರ್ಯಗಳು ಹೇಗೆ ಆಗುತ್ತೆ. ಇಂಥ ಸರಕಾರವನ್ನು ಕಿತ್ತು ಒಗೆಯದಿದ್ದರೆ, ರಾಜ್ಯಕ್ಕೆ ಉಳಿಗಾಲ ಇಲ್ಲ ಎಂದರು.

ವಿಧಾನಪರಿಷತ್ತಿನಲ್ಲಿ ಭೂ ಸುಧಾರಣೆ ಹಾಗೂ ಕಾರ್ಮಿಕ ವಿಧೇಯಕಗಳಿಗೆ ಒಪ್ಪಿಗೆ ಸಿಗದಂತೆ ಮಾಡಿದ್ದು ಒಳ್ಳೆಯ ಕೆಲಸ. ಕೋವಿಡ್ ಸಂದರ್ಭದಲ್ಲೂ ಯಡಿಯೂರಪ್ಪ ಸರಕಾರ ಭ್ರಷ್ಟಾಚಾರ ಮಾಡಿದೆ. ಸತ್ತ ಹೆಣಗಳ ಮೇಲೆ ಹಣ ಮಾಡಿದ್ದಾರೆ. ಕೋವಿಡ್ ಉಪಕರಣಗಳ ಖರೀದಿಯಲ್ಲಿ ಕನಿಷ್ಠ 2 ಸಾವಿರ ಕೋಟಿ ರೂ.ಅವ್ಯವಹಾರ ಆಗಿದೆ ಎಂದು ಅವರು ದೂರಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಲ್ಪಸಂಖ್ಯಾತರು ಭಯದಿಂದ ಬದುಕುವಂತೆ ಆಗಿದೆ. ಡಿ.ಜೆ.ಹಳ್ಳಿ ಗೋಲಿಬಾರ್ ಪ್ರಕರಣದಲ್ಲಿ ಬಿಜೆಪಿಯವರು ಅನಗತ್ಯವಾಗಿ ಕಾಂಗ್ರೆಸ್ ಹೆಸರು ಎಳೆದು ತಂದಿದ್ದಾರೆ. ನಿನ್ನೆ ಸದನದಲ್ಲಿಯೂ ಕಾನೂನು ಸಚಿವ ಮಾಧುಸ್ವಾಮಿ ಇದನ್ನೆ ಹೇಳುತ್ತಾರೆ. ನಾಚಿಕೆ ಆಗಬೇಕು ಇವರಿಗೆ ಎಂದು ಸಿದ್ದರಾಮಯ್ಯ ಕಿಡಿಗಾರಿದರು.

ಬಿಜೆಪಿಯವರಿಗೆ ಕೇಂದ್ರ ಸರಕಾರದ ಬಳಿ ಹೋಗಿ ಹಣ ಕೇಳುವ ಧೈರ್ಯ ಇಲ್ಲ. ಜಿಎಸ್‍ಟಿ ನಷ್ಟ ತುಂಬಲು ಕರ್ನಾಟಕಕ್ಕೆ 4900 ಕೋಟಿ ರೂ.ವಿಶೇಷ ಅನುದಾನ ಕೊಡಲು 15ನೆ ಹಣಕಾಸು ಆಯೋಗ ಶಿಫಾರಸ್ಸು ಮಾಡಿರುವ ಅನುದಾನವನ್ನ ಪಡೆಯೋಕೆ ರಾಜ್ಯ ಬಿಜೆಪಿ ಸರಕಾರಕ್ಕೆ ಸಾಧ್ಯವಾಗಿಲ್ಲ ಎಂದು ಅವರು ಕಿಡಿಗಾರಿದರು.

ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆ ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ಜನದ್ರೋಹಿ ಕಾಯ್ದೆಗಳನ್ನು ವಿರೋಧಿಸಿ, ರೈತ, ದಲಿತ, ಕಾರ್ಮಿಕ ಸಂಘಟನೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಸೆ.28ರಂದು ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ. ಈ ಜನ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಪಕ್ಷ ನಿರಂತರವಾಗಿ ಹೋರಾಟ ನಡೆಸಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News