ರೈತರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಕಾಳಜಿಯಿಲ್ಲ: ರಣದೀಪ್ ಸಿಂಗ್ ಸುರ್ಜೇವಾಲ

Update: 2020-09-27 16:54 GMT

ಬೆಂಗಳೂರು, ಸೆ.27: ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕ ಸೇರಿದಂತೆ ರೈತ ವಿರೋಧಿ ಕಾಯ್ದೆಗಳ ದುಷ್ಪರಿಣಾಮಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಕೆಪಿಸಿಸಿ ಅಧ್ಯಕ್ಷರು, ಜಿಲ್ಲಾಧ್ಯಕ್ಷರು ಮಾಡಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕರೆ ನೀಡಿದ್ದಾರೆ.

ರವಿವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಕಾಂಗ್ರೆಸ್ ಹಿರಿಯ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರೈತರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೃಷಿ ಸಚಿವ ತೋಮರ್ ಗೆ ಕಾಳಜಿಯಿಲ್ಲ. ಇವತ್ತು ಶೇ.80 ರಷ್ಟು ರೈತರಿಗೆ 2 ಎಕರೆ ಭೂಮಿಯಿಲ್ಲ. ಹೆಚ್ಚಿನ ರೈತರು ಬಡತನದಲ್ಲಿಯೇ ಇದ್ದಾರೆ ಎಂದರು.

ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂಬ ಭೇದಭಾವ ಮಾಡುವುದು ಬಿಡಿ. ಸಮಗ್ರ ಕರ್ನಾಟಕದ ಅಭಿವೃದ್ಧಿಯತ್ತ ನಾವು ಗಮನ ಹರಿಸಬೇಕಿದೆ. ನಾಳೆ ನಡೆಯುವ ಬಂದ್‍ಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಸಾಕಷ್ಟು ಸಂಘ ಸಂಸ್ಥೆಗಳು ಇದಕ್ಕೆ ಬೆಂಬಲ ಸೂಚಿಸಿವೆ. ರೈತ ಮತ್ತು ಕಾರ್ಮಿಕರ ಪರ ಇರಬೇಕಿದ್ದ ಸರಕಾರ, ಅವರ ವಿರುದ್ಧವೆ ಕಾನೂನು ತರಲು ಮುಂದಾಗಿದೆ ಎಂದು ಅವರು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಎಲ್ಲ ತಾಲೂಕು, ಜಿಲ್ಲಾ ಮಟ್ಟದಲ್ಲಿ ನಾಳೆ ಬಂದ್ ಬಗ್ಗೆ ಮಾಹಿತಿ ತಿಳಿಸಿ. ವಾರ್ಡ್ ಮಟ್ಟದಲ್ಲಿ ಬೆಂಬಲ ಸಿಗುವಂತೆ ಮಾಡಬೇಕು. ಮುಂದೆ ಉಪ ಚುನಾವಣೆ ಬರುತ್ತಿದೆ, ಕೆಪಿಸಿಸಿ ನೀಡುವಂತಹ ಕೆಲಸವನ್ನು ಎಷ್ಟೇ ದೊಡ್ಡವರಾದರು ಮಾಡಬೇಕು. ಉಪ ಚುನಾವಣೆಗಳನ್ನು ನಾವು ಗೆಲ್ಲಬೇಕು ಎಂದು ಕರೆ ನೀಡಿದರು.

ಕೋವಿಡ್ ಸಂದರ್ಭದಲ್ಲಿ ನಾವು ಜನರ ಪರ ನಿಂತೆವು. ಸರಕಾರ ಮಾಡಬೇಕಾದ ಕೆಲಸ ನಾವು ಹಾಗೂ ನಮ್ಮ ಪಕ್ಷದ ಕಾರ್ಯಕರ್ತರು ಮಾಡಿದರು. ಸರಕಾರ ಹಲವು ತಪ್ಪುಗಳನ್ನ ಮಾಡಿದೆ. ಆ ತಪ್ಪುಗಳನ್ನ ಮುಂದಿಟ್ಟು ಹೋರಾಟ ಮಾಡಿ, ಕಾಂಗ್ರೆಸ್ ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತೇವೆ ಎಂದು ಅವರು ಹೇಳಿದರು.

ನಿನ್ನೆ ವಿಧಾನಸಭೆಯಲ್ಲಿ ಬಿಜೆಪಿಯವರು ವಿರೋಧ ಪಕ್ಷದ ನಾಯಕರಿಗೆ ಹೊಡೆಯೊದು ಒಂದು ಬಾಕಿ, ಹಾಗೆ ಮುಗಿಬೀಳುವುದಕ್ಕೆ ಬಂದಿದ್ದರು. ಆದರೂ, ಸಿದ್ದರಾಮಯ್ಯ ನಿಮ್ಮ ಬೆದರಿಕೆಗಳಿಗೆಲ್ಲ ನಾನು ಹೆದರುವುದಿಲ್ಲ ಎಂದು ತಿರುಗೇಟು ನೀಡಿದರು. ನಾವು ರಾಜ್ಯದ ಜನತೆಗೆ ವಿಧಾನಸಭೆಯಲ್ಲಿ ನೀಡಿದ ಹೇಳಿಕೆಗಳಿಗೆ ಬದ್ದರಾಗಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.

ಚುನಾವಣೆ ಯಾವಾಗ ಬರುತ್ತೊ ಗೊತ್ತಿಲ್ಲ. ಬೂತ್‍ಮಟ್ಟದಲ್ಲಿ ಪಕ್ಷ ಸಂಘಟನೆಯಾಗಬೇಕು. ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಸದಸ್ಯರು ಒಟ್ಟಿಗೆ ಕೆಲಸ ಮಾಡಬೇಕು. ಬೂತ್ ಮಟ್ಟದ ಏಜೆಂಟ್‍ಗಳನ್ನು ಚುನಾವಣೆ ಸಂದರ್ಭದಲ್ಲಿ ನೇಮಕ ಮಾಡುವುದಲ್ಲ, ಈಗಲೇ ಕಡ್ಡಾಯವಾಗಿ ನೇಮಕ ಮಾಡಬೇಕು ಎಂದು ಅವರು ಸೂಚಿಸಿದರು.

ವಿಧಾನಸಭೆಯಲ್ಲಿ ಯುದ್ಧದ ರೀತಿಯಲ್ಲಿ ನಡೆದ ಚರ್ಚೆಯನ್ನು ಮಾಧ್ಯಮಗಳು ತೋರಿಸುತ್ತಾರೊ ಬಿಡುತ್ತಾರೊ ಗೊತ್ತಿಲ್ಲ. ಆದರೆ, ಕಾರ್ಯಕರ್ತರು, ಮುಖಂಡರು ಸಾಮಾಜಿಕ ಜಾಲತಾಣಗಳನ್ನು ಸಕ್ರಿಯವಾಗಿ ಬಳಸಿಕೊಳ್ಳಬೇಕು. ಮುಂದೆ ಯುದ್ಧ ನಡೆದರೆ ಅದು ‘ಡಿಜಿಟಲ್ ವಾರ್’ ನಡೆಯುತ್ತದೆ. ನಾಳೆ ನಡೆಯುವ ಬಂದ್‍ಗೆ ವಾರ್ಡ್ ಮಟ್ಟದಲ್ಲಿ ಬೆಂಬಲ ಸಿಗಬೇಕು ಎಂದು ಶಿವಕುಮಾರ್ ತಿಳಿಸಿದರು.

ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ನಾವೆಲ್ಲರೂ ಒಗ್ಗೂಡಿ ಪಕ್ಷ ಮುನ್ನಡೆಸಬೇಕಿದೆ. ಹಾಗಾದಾಗ ಮಾತ್ರ ಪಕ್ಷದ ಬೆಳವಣಿಗೆ ಸಾಧ್ಯ. ಪ್ರಸ್ತುತ ಸರಕಾರ ಅಸಮರ್ಪಕವಾದ ಎಪಿಎಂಸಿ, ಕಾರ್ಮಿಕ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ತಂದಿದೆ. ಕಾರ್ಮಿಕರ ಕಾಯ್ದೆಯು ಕಾರ್ಮಿಕರನ್ನು ಕಡೆಗಣಿಸಿ ಕಂಪನಿಗಳ ಪರವಾಗಿದೆ. ಇದರ ಬಗ್ಗೆ ಹೋರಾಟ ಅನಿವಾರ್ಯ ಎಂದರು.

ರೈತರ ಜೊತೆ ಕಾರ್ಮಿಕರ ಬಗ್ಗೆಯೂ ನಾವು ಧ್ವನಿಯೆತ್ತಬೇಕು. ಮೊದಲು ಕಾರ್ಮಿಕರು 8 ಗಂಟೆ ಕೆಲಸ ಮಾಡಬೇಕಿತ್ತು. ಆದರೆ ಈಗ 12 ಗಂಟೆ ಕೆಲಸದ ಅವಧಿ ತಂದಿದೆ. ರೈತರ ಮೇಲೆ ವಿಶ್ವಾಸವಿದೆ ಅಂತ ಬಿಜೆಪಿಯವರು ಹೇಳುತ್ತಾರೆ. ಆದರೆ, ಈಗ ರೈತ ವಿರೋಧಿ ಭೂ ಸುಧಾರಣೆ ಕಾಯ್ದೆಯನ್ನ ತಂದಿದ್ದಾರೆ ಎಂದು ಅವರು ಕಿಡಿಗಾರಿದರು.

ಶೇ.87ರಷ್ಟು ಇರುವ ಸಣ್ಣ ರೈತರ ಪರವಾಗಿಯೂ ನಾವಿರಬೇಕು. ಶಿವಮೊಗ್ಗ ಜಿಲ್ಲೆಯ ಕಾಗೋಡು ಸತ್ಯಾಗ್ರಹದ ಮಾದರಿಯಲ್ಲಿ ಮತ್ತೊಂದು ಹೋರಾಟ ಮರುಕಳಿಸುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಚಿವರಾದ ಬಿ.ರಮಾನಾಥ್ ರೈ, ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ್, ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಸಂಸದ ಡಿ.ಕೆ.ಸುರೇಶ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಹಾಲಿ ಶಾಸಕರು, ಮಾಜಿ ಶಾಸಕರು, ಸಂಸದರು, ಮಾಜಿ ಸಂಸದರು, ಲೋಕಸಭೆ, ವಿಧಾನಸಭೆ ಪರಾಜಿತ ಅಭ್ಯರ್ಥಿಗಳು, ಪಕ್ಷದ ಜಿಲ್ಲಾಧ್ಯಕ್ಷರು, ಮುಂಚೂಣಿ ಘಟಕಗಳ ಮುಖಂಡರು ಸೇರಿದಂತೆ 300ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

ಸಿಎಂ ರಾಜೀನಾಮೆಗೆ ಒತ್ತಾಯ

ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬ ಭ್ರಷ್ಟಾಚಾರ ಮಾಡಿದ್ದು, ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯಲು ಅವರಿಗೆ ಅರ್ಹತೆಯಿಲ್ಲ. ಕೂಡಲೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News