ಶಿವಸೇನೆಯ ಬಗ್ಗೆ ಫಡ್ನವೀಸ್ ಪ್ರತಿಕ್ರಿಯೆ ಏನು ಗೊತ್ತಾ ?

Update: 2020-09-27 17:08 GMT

ಮುಂಬೈ, ಸೆ.27: ತನ್ನ ಮಾಜಿ ಮಿತ್ರಪಕ್ಷ ಶಿವಸೇನೆಯೊಂದಿಗೆ ಕೈ ಜೋಡಿಸುವ ಅಥವಾ ರಾಜ್ಯದಲ್ಲಿಯ ಉದ್ಧವ ಠಾಕ್ರೆ ನೇತೃತ್ವದ ಸರಕಾರವನ್ನು ಉರುಳಿಸುವ ಯಾವುದೇ ಉದ್ದೇಶ ಬಿಜೆಪಿಗಿಲ್ಲ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ರವಿವಾರ ಇಲ್ಲಿ ತಿಳಿಸಿದರು.

ಶನಿವಾರ ನಗರದ ಹೋಟೆಲ್‌ವೊಂದರಲ್ಲಿ ಫಡ್ನವೀಸ್ ಮತ್ತು ಶಿವಸೇನೆಯ ಸಂಸದ ಸಂಜಯ ರಾವತ್ ನಡುವೆ ನಡೆದಿದ್ದ ಭೇಟಿ ರಾಜ್ಯದ ರಾಜಕೀಯ ವಲಯಗಳಲ್ಲಿ ಊಹಾಪೋಹಗಳನ್ನು ಸೃಷ್ಟಿಸಿತ್ತು.

ಸುದ್ದಿಗಾರರೊಂದಿಗೆ ಮಾತನಾಡಿದ ಫಡ್ನವೀಸ್,ಶಿವಸೇನೆ ನೇತೃತ್ವದ ಮಹಾ ವಿಕಾಸ ಅಘಾಡಿ ಸರಕಾರದ ಕಳಪೆ ಸಾಧನೆಯಿಂದ ರಾಜ್ಯದ ಜನರು ಅಸಮಾಧಾನಗೊಂಡಿದ್ದಾರೆ ಮತ್ತು ಅಂತಿಮವಾಗಿ ಸರಕಾರವು ತನ್ನದೇ ನಿಷ್ಕ್ರಿಯತೆಗಳಿಂದ ಪತನಗೊಳ್ಳಲಿದೆ ಎಂದು ಹೇಳಿದರು.

ಶಿವಸೇನೆಯ ಮುಖವಾಣಿ ‘ಸಾಮನಾ’ಕ್ಕೆ ಸಂದರ್ಶನದ ಸಂಬಂಧ ತಾನು ರಾವತ್‌ರನ್ನು ಭೇಟಿಯಾಗಿದ್ದೆ ಎಂದೂ ಅವರು ತಿಳಿಸಿದರು.

ರಾವತ್ ಕುರಿತು ವ್ಯಂಗ್ಯವಾಡಿರುವ ಕಾಂಗ್ರೆಸ್ ನಾಯಕ ಸಂಜಯ ನಿರುಪಮ್, ಅವರು ಪ್ರಚಾರಕ್ಕಾಗಿ ಹಾತೊರೆಯುತ್ತಿದ್ದಾರೆ ಎಂದು ಆರೋಪಿಸಿದರು. ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ಕೃಷಿ ಮಸೂದೆಗಳ ಬಗ್ಗೆ ಶಿವಸೇನೆಯ ಮೌನವನ್ನು ಪ್ರಶ್ನಿಸಿದ ಅವರು,ಮಸೂದೆಗಳನ್ನು ವಿರೋಧಿಸಲು ಕಾಂಗ್ರೆಸ್ ಗಂಭೀರವಾಗಿ ಬಯಸಿದ್ದರೆ ಅದು ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಮಿತ್ರಪಕ್ಷ ಶಿವಸೇನೆಗೆ ಸೂಚಿಸಬೇಕು ಎಂದೂ ನಿರುಪಮ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News