ಅನಧಿಕೃತ ಕಸಾಯಿಖಾನೆ: ಬಿಬಿಎಂಪಿ ವಿರುದ್ಧ ಸ್ಥಳೀಯರ ಆಕ್ರೋಶ

Update: 2020-09-27 17:11 GMT

ಬೆಂಗಳೂರು, ಸೆ.26: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕುಶಾಲನಗರ ವಾರ್ಡ್ ವ್ಯಾಪ್ತಿಯಲ್ಲಿರುವ ಶಾಂಪುರ ಮುಖ್ಯರಸ್ತೆಯಲ್ಲಿ ಅನಧಿಕೃತವಾಗಿ ತೆರೆದಿರುವ ಕಸಾಯಿಖಾನೆಯಿಂದಾಗಿ ಸುತ್ತಮುತ್ತಲಿನ ಪರಿಸರ ಹಾಳಾಗುತ್ತಿದೆ. ಆದರೂ, ಬಿಬಿಎಂಪಿ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಸಾಯಿಖಾನೆ ತೆರೆಯಲು ಬಿಬಿಎಂಪಿ ವತಿಯಿಂದ ಯಾವುದೇ ಅನುಮತಿಯನ್ನು ಪಡೆಯಲಾಗಿಲ್ಲ. ಸ್ವಚ್ಛತೆಯನ್ನು ಕಾಪಾಡದೆ ಪ್ರಾಣಿಗಳನ್ನು ವಧೆ ಮಾಡಲಾಗುತ್ತಿದೆ. ಈಗಾಗಲೆ ಕೋವಿಡ್-19 ಸಾಂಕ್ರಾಮಿಕದಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇನ್ನೂ ಪ್ರಾಣಿಗಳ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಇರುವುದರಿಂದ, ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆಯೋ ಎಂಬುದು ಸ್ಥಳೀಯರ ಅಳಲು. ಅಲ್ಲದೆ, ಈ ಕಸಾಯಿ ಖಾನೆಯ ಸಮೀಪವೆ ಶಾಲೆ, ಕಲ್ಯಾಣ ಮಂಟಪ ಇದೆ. ಸುತ್ತಮುತ್ತಲು ವಾಸಿಸುತ್ತಿರುವವರಿಗೆ ಇದರಿಂದ ಸಾಕಷ್ಟು ಸಮಸ್ಯೆಗಳು ಆಗುತ್ತಿವೆ ಎಂದು ಅವರು ದೂರಿದ್ದಾರೆ.

ಈಗಾಗಲೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಆಯುಕ್ತರು, ಪುಲಿಕೇಶಿನಗರ ಕ್ಷೇತ್ರದ ಶಾಸಕರು, ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ, ಪಶುಸಂಗೋಪನೆ ಇಲಾಖೆಯ ಕಾರ್ಯದರ್ಶಿ ಹಾಗೂ ಸ್ಥಳೀಯ ಪಾಲಿಕೆ ಸದಸ್ಯರಿಗೆ ದೂರು ನೀಡಿದರೂ ಯಾವುದೆ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News