ತೀವ್ರಗೊಂಡ ರೈತ ಪ್ರತಿಭಟನೆ: ಪಂಜಾಬ್ ಸಿಎಂ ಧರಣಿ

Update: 2020-09-28 03:59 GMT

ಹೊಸದಿಲ್ಲಿ, ಸೆ.28: ಮೂರು ವಿವಾದಿತ ಕೃಷಿ ತಿದ್ದುಪಡಿ ಮಸೂದೆಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿರುವ ಬೆನ್ನಲ್ಲೇ ದೇಶಾದ್ಯಂತ ನಡೆಯುತ್ತಿರುವ ರೈತರ ಪ್ರತಿಭಟನೆ ಕಾವು ತೀವ್ರಗೊಂಡಿದೆ. ಈ ಮಧ್ಯೆ ಪ್ರತಿಭಟನಾನಿರತ ರೈತರಿಗೆ ಬೆಂಬಲ ನೀಡಿ, ಶಹೀದ್ ಭಗತ್ ಸಿಂಗ್ ಅವರ ಜನ್ಮದಿನವಾದ ಇಂದು ಅವರ ಹುಟ್ಟೂರು ಖತ್ಕತ್ ಕಲಾನ್‌ನಲ್ಲಿ ಇಡೀ ದಿನ ಧರಣಿ ನಡೆಸಲು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ನಿರ್ಧರಿಸಿದ್ದಾರೆ.

ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್, ಕಾಂಗ್ರೆಸ್‌ನ ಎಲ್ಲ ಸಂಸದರು ಮತ್ತು ಶಾಸಕರು ಕೂಡಾ ಈ ಧರಣಿಯಲ್ಲಿ ಪಾಲ್ಗೊಳ್ಳುವರು ಎಂದು ಪಂಜಾಬ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಸುನೀಲ್ ಜಖಾರ್ ಹೇಳಿದ್ದಾರೆ.

ಬಿಜೆಪಿ ಜತೆಗಿನ ಸಂಬಂಧ ಕಡಿದುಕೊಂಡಿರುವ ಅಕಾಲಿದಳ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಅವರು, "ಕೃಷಿ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದ ರವಿವಾರ ಪ್ರಜಾಪ್ರಭುತ್ವ ಹಾಗೂ ರೈತರ ಪಾಲಿಗೆ ಕರಾಳ ದಿನ" ಎಂದು ಬಣ್ಣಿಸಿದ್ದಾರೆ.

ರವಿವಾರ ಕೂಡಾ ರೈತರು ಅಮೃತಸರ- ದೆಹಲಿ ರೈಲು ಹಳಿಯ ಮೇಲೆ ಧರಣಿ ಹಾಗೂ ರೈಲು ತಡೆ ಚಳವಳಿ ನಡೆಸಿದರು. ಅಕ್ಕಪಕ್ಕದ ರೈತರು ಪ್ರತಿಭಟನಾಕಾರರಿಗೆ ತಮ್ಮ ಮನೆಗಳಲ್ಲೇ ಆಹಾರ ಸಿದ್ಧಪಡಿಸಿ ತರುತ್ತಿದ್ದ ದೃಶ್ಯ ಕಂಡುಬಂತು. ಸ್ಥಳೀಯ ಗುರುದ್ವಾರಗಳು ಸ್ಥಳೀಯ ಸಮುದಾಯ ಪಾಕಶಾಲೆಗಳನ್ನು ಧರಣಿ ಸ್ಥಳದಲ್ಲಿ ನಡೆಸುತ್ತಿವೆ. ಕೇಸರಿ ದುಪ್ಪಟ ಧರಿಸಿದ್ದ ಮಹಿಳೆಯರು ಕೂಡಾ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರದ ವಿರುದ್ಧ ಘೋಷಣೆ ಕೂಗುತ್ತಿರುವುದು ಕಂಡುಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News