ಕೇರಳದಲ್ಲಿ ಮತ್ತೆ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು

Update: 2020-09-28 15:51 GMT

ಹೊಸದಿಲ್ಲಿ,ಸೆ.28: ಕೇರಳದಲ್ಲಿ ಕೊರೋನ ವೈರಸ್ ಸೋಂಕು ಉಲ್ಬಣಿಸುತ್ತಿದೆ. ರವಿವಾರ ಸುಮಾರು 7,500 ಹೊಸ ಪ್ರಕರಣಗಳು ವರದಿಯಾಗಿದ್ದು, ಜನರು ಸುರಕ್ಷಿತ ಅಂತರ ನಿಯಮವನ್ನು ಪಾಲಿಸದಿದ್ದರೆ ಮತ್ತೆ ಸಂಪೂರ್ಣ ಲಾಕ್‌ಡೌನ್ ಹೇರುವುದಾಗಿ ರಾಜ್ಯ ಸರಕಾರವು ಎಚ್ಚರಿಕೆ ನೀಡಿದೆ.

ಈ ಮೊದಲು ಕೊರೋನ ವೈರಸ್ ಸಾಂಕ್ರಾಮಿಕವನ್ನು ಯಶಸ್ವಿಯಾಗಿ ನಿಯಂತ್ರಿಸಿದ್ದಕ್ಕೆ ಜಾಗತಿಕವಾಗಿ ಪ್ರಶಂಸೆಗೆ ಪಾತ್ರವಾಗಿದ್ದ ಕೇರಳದಲ್ಲಿ ಈಗ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚುತ್ತಿದೆ. ಕಳೆದ ಐದು ದಿನಗಳಲ್ಲಿ ಪ್ರತಿದಿನವೂ ದಾಖಲೆ ಪ್ರಮಾಣದಲ್ಲಿ ಹೊಸ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಈವರೆಗೆ 1.75 ಲಕ್ಷಕ್ಕೂ ಹೆಚ್ಚಿನ ದೃಢೀಕೃತ ಕೋವಿಡ್ ಪ್ರಕರಣಗಳು ದಾಖಲಾಗಿವೆ.

ಸೋಂಕು ಪ್ರಕರಣಗಳು ಹೆಚ್ಚಲು ಜನರ ಕೆಲವು ಬೇಜವಾಬ್ದಾರಿಯ ವರ್ತನೆಗಳು ಕಾರಣ ಎಂದು ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭ ದೂರಿದ ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು,ವೈರಸ್ ಪ್ರಸರಣವನ್ನು ತಡೆಯಲು ಸರಕಾರದ ಪ್ರಯತ್ನಗಳಿಗೆ ಜನರು ಸಹಕರಿಸದಿದ್ದರೆ ಇನ್ನೊಂದು ಸುತ್ತಿನ ಲಾಕ್‌ಡೌನ್ ಹೇರುವುದನ್ನು ಬಿಟ್ಟರೆ ರಾಜ್ಯಕ್ಕೆ ಯಾವುದೇ ಆಯ್ಕೆಯಿಲ್ಲ ಎಂದು ಹೇಳಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಂತೆ ಶೈಲಜಾ ಕೂಡ ಪ್ರತಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಗಳೂ ಸೋಂಕು ಹರಡುವಿಕೆಯಲ್ಲಿ ಕೊಡುಗೆ ಸಲ್ಲಿಸುತ್ತಿವೆ ಎಂದು ಕಿಡಿಕಾರಿದರು.

ಪ್ರತಿಭಟನಾನಿರತ ಪ್ರತಿಪಕ್ಷ ಯುಡಿಎಫ್ ಮತ್ತು ಬಿಜೆಪಿ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಲ್ಲಿ ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿವೆ.

ಕೇರಳದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಈವರೆಗೆ ಸುಮಾರು ಒಂದು ಲಕ್ಷ ಹೊಸ ಪ್ರಕರಣಗಳು ದಾಖಲಾಗಿವೆ. ಇದು ಆರು ರಾಜ್ಯಗಳನ್ನು ಹೊರತುಪಡಿಸಿದರೆ ಇತರ ರಾಜ್ಯಗಳಲ್ಲಿಯ ಪ್ರಮಾಣಕ್ಕಿಂತ ಹೆಚ್ಚಾಗಿದೆ. ಈ ಪೈಕಿ ಶೇ.33ರಷ್ಟು ಪ್ರಕರಣಗಳು ಕಳೆದ ಐದು ದಿನಗಳಲ್ಲಿ ವರದಿಯಾಗಿವೆ. ಕೇರಳದಲ್ಲೀಗ ಹೊಸ ಪ್ರಕರಣಗಳ ಸಂಖ್ಯೆ ದೇಶದಲ್ಲಿಯೇ ಅತ್ಯಂತ ಹೆಚ್ಚಿನ ವೇಗದಲ್ಲಿ ವರ್ಧಿಸುತ್ತಿದೆ.

 ಕೇರಳದಲ್ಲಿ ಇತರ ತೀವ್ರಪೀಡಿತ ರಾಜ್ಯಗಳಿಗೆ ಹೋಲಿಸಿದರೆ ಕೋವಿಡ್‌ಗೆ ಕೆಲವೇ ಜನರು ಬಲಿಯಾಗಿದ್ದರು. ಸೋಂಕು ಅತ್ಯಂತ ತ್ವರಿತ ಗತಿಯಿಂದ ಹರಡತೊಡಗಿದರೆ ಹೆಚ್ಚಿನ ಸಾವುಗಳು ಸಂಭವಿಸಬಹುದು ಎಂದೂ ಹೇಳಿದ ಶೈಲಜಾ,ಕೇರಳದ ಜನಸಂಖ್ಯೆಯಲ್ಲಿ ಹಿರಿಯ ನಾಗರಿಕರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ ಮತ್ತು ಈವರೆಗೆ ರಾಜ್ಯದಲ್ಲಿ ಸಂಭವಿಸಿರುವ ಸಾವುಗಳಲ್ಲಿ 60 ವರ್ಷ ಪ್ರಾಯಕ್ಕಿಂತ ಹೆಚ್ಚಿನವರ ಪ್ರಮಾಣ ಶೇ.70ಕ್ಕೂ ಅಧಿಕವಾಗಿದೆ ಎಂದು ತಿಳಿಸಿದರು.

ತನ್ಮಧ್ಯೆ ರಾಷ್ಟ್ರಮಟ್ಟದಲ್ಲಿ ಚೇತರಿಕೆಯ ಪ್ರಮಾಣ ರವಿವಾರ ತೀವ್ರ ಕುಸಿತವನ್ನು ಕಂಡಿದೆ. 75,000ಕ್ಕೂ ಕಡಿಮೆ ರೋಗಿಗಳು ಗುಣಮುಖರಾಗಿದ್ದು,ಇದು ಸೆ.10ರಿಂದೀಚಿಗೆ ಕನಿಷ್ಠವಾಗಿದೆ. ರವಿವಾರ ದೇಶಾದ್ಯಂತ 82,000ಕ್ಕೂ ಹೊಸ ಪ್ರಕರಣಗಳು ವರದಿಯಾಗಿದ್ದು,ಒಟ್ಟು ಪ್ರಕರಣಗಳ ಸಂಖ್ಯೆ 60 ಲಕ್ಷವನ್ನು ದಾಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News