ಓಣಂ ಬಳಿಕ ಕೇರಳದಲ್ಲಿ ಕೋವಿಡ್ ಪ್ರಕರಣ ಗಣನೀಯ ಹೆಚ್ಚಳ : ಅಂಕಿ ಅಂಶ

Update: 2020-09-29 03:44 GMT

ಹೊಸದಿಲ್ಲಿ : ಓಣಂ ಹಬ್ಬದ ಬಳಿಕ ಕೇರಳದಲ್ಲಿ ಕೋವಿಡ್-19 ಪ್ರಕರಣಗಳು ಶೇಕಡ 126ರಷ್ಟು ಹೆಚ್ಚಿರುವುದು ಅಂಕಿ ಅಂಶಗಳ ವಿಶ್ಲೇಷಣೆಯಿಂದ ತಿಳಿದುಬಂದಿದೆ.

ಕೇರಳ ಇದೀಗ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ಬಳಿಕ ದೇಶದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ಪುಟ್ಟ ರಾಜ್ಯದಲ್ಲಿ ಗಣನೀಯ ಸಂಖ್ಯೆಯ ಪ್ರಕರಣಗಳಿರುವುದು ಆತಂಕಕಾರಿ ಬೆಳವಣಿಗೆ. ಕೇರಳದಲ್ಲಿ ಪ್ರಕರಣಗಳ ಬೆಳವಣಿಗೆ ದರ 13.6% ಇದ್ದು, ಹೊಸ ಪ್ರಕರಣಗಳ ಸಂಖ್ಯೆ ಪ್ರತಿದಿನ ಶೇಕಡ 3.5ರಷ್ಟು ಏರಿಕೆಯಾಗುತ್ತಿದೆ. ಇದು ದೇಶದ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಳ ದರದ ದುಪ್ಪಟ್ಟಾಗಿದೆ.

ಈ ಮಧ್ಯೆ ದೇಶದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಮೊದಲ ಬಾರಿಗೆ ದೈನಿಕ ಪ್ರಕರಣಗಳ ಸಂಖ್ಯೆ 70 ಸಾವಿರಕ್ಕೆ ಇಳಿದಿದ್ದು, ಐದು ವಾರಗಳಲ್ಲೇ ಕನಿಷ್ಠ ಪ್ರಕರಣ ಸೋಮವಾರ ದಾಖಲಾಗಿರುವುದು ದೇಶದಲ್ಲಿ ಸಾಂಕ್ರಾಮಿಕದ ತೀವ್ರತೆ ಕಡಿಮೆಯಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿ. ಕಳೆದ ಒಂದು ತಿಂಗಳಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಕೂಡಾ ಸುಮಾರು ಶೇಕಡ 100ರಷ್ಟು ಹೆಚ್ಚಿರುವುದು ಆಶಾದಾಯಕ ಬೆಳವಣಿಗೆ.
ಒಟ್ಟು ಪ್ರಕರಣಗಳ ಪೈಕಿ ಶೇಕಡ 82ಕ್ಕೂ ಅಧಿಕ ಮಂದಿ ಅಂದರೆ 50 ಲಕ್ಷಕ್ಕೂ ಅಧೀಕ ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಒಟ್ಟು ಪ್ರಕರಣಗಳ ಶೇಕಡ 20ಕ್ಕಿಂತಲೂ ಕಡಿಮೆ ಇದೆ ಎಂದು ಆರೋಗ್ಯ ಸಚಿವಾಲಯ ಟ್ವೀಟ್ ಮಾಡಿದೆ.

ವಿಶ್ವದಲ್ಲಿ ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 10 ಲಕ್ಷದ ಗಡಿ ದಾಟಿದ್ದು, ಇನ್‌ಫ್ಲುಯೆನ್ಝಾ, ಮಲೇರಿಯಾ, ಕಾಲರ ಮತ್ತು ಸಿಡುಬು ರೋಗಗಳಿಗೆ ಬಲಿಯಾದ ಒಟ್ಟು ಸಂಖ್ಯೆಯನ್ನು ಕೊರೋನ ಮೀರಿದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News