ಎನ್‍ಎಲ್‍ಎಸ್‍ಐಯುನಲ್ಲಿ ಕನ್ನಡಿಗರಿಗೆ ಮೀಸಲು: ಕಾಯ್ದೆ ತಿದ್ದುಪಡಿ ಆದೇಶ ರದ್ದುಗೊಳಿಸಿದ ಹೈಕೋರ್ಟ್

Update: 2020-09-29 17:30 GMT

ಬೆಂಗಳೂರು, ಸೆ.29: ನಗರದಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ (ಎನ್‍ಎಲ್‍ಎಸ್‍ಐಯು) ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ.25 ಸೀಟು ಮೀಸಲು ಕಲ್ಪಿಸುವ ಕುರಿತು ಇತ್ತೀಚಿಗೆ ರಾಜ್ಯ ಸರಕಾರ ಜಾರಿಗೊಳಿಸಿದ್ದ ತಿದ್ದುಪಡಿ ಕಾನೂನನ್ನು ಹೈಕೋರ್ಟ್ ರದ್ದುಪಡಿಸಿದೆ.

ತಿದ್ದುಪಡಿ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಭಾರತೀಯ ವಕೀಲರ ಪರಿಷತ್ ಹಾಗೂ ಕೆಲ ಕಾನೂನು ಪದವಿ ಆಕಾಂಕ್ಷಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಪೀಠ ತನ್ನ ತೀರ್ಪಿನಲ್ಲಿ ಎನ್‍ಎಲ್‍ಎಸ್‍ಐಯು ಸ್ವಾಯತ್ತ ಮತ್ತು ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಾಗಿದೆ. ಹೀಗಾಗಿ, ವಿವಿಗೆ ರಾಜ್ಯ ಸರಕಾರ ಭೂಮಿ ಸೇರಿದಂತೆ ಕೆಲ ಸವಲತ್ತುಗಳನ್ನು ಒದಗಿಸಿದ್ದರೂ ಅದರ ಮೇಲೆ ಸೀಮಿತ ಅಧಿಕಾರವನ್ನಷ್ಟೇ ಹೊಂದಿದೆ. ಸಿಜೆಐ ವಿವಿಯ ಕುಲಪತಿಗಳಾಗಿದ್ದು, ಭಾರತೀಯ ವಕೀಲರ ಪರಿಷತ್ತು ಸೇರಿದಂತೆ ಹಲವು ಪ್ರಾಧಿಕಾರಗಳು ವಿವಿಯ ಹೊಣೆಗಾರಿಕೆ ಹೊಂದಿವೆ. ಇವೆಲ್ಲವನ್ನೂ ಗಮನಿಸಿದಾಗ ವಿವಿಯು ರಾಜ್ಯದ ನಿಯಂತ್ರಣದಿಂದ ಮುಕ್ತವಾಗಿದ್ದು, ಕಾಯ್ದೆಗೆ ಮಾಡಿರುವ ತಿದ್ದುಪಡಿ ಕ್ರಮ ಸರಿಯಾದುದಲ್ಲ. ಐಐಟಿ, ಐಐಎಂ ಸೇರಿದಂತೆ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ರಾಜ್ಯಗಳಿಗೆ ಮೀಸಲು ವ್ಯವಸ್ಥೆ ಇಲ್ಲ. ಅಂತೆಯೇ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಾಗಿರುವ ಎನ್‍ಎಲ್‍ಎಸ್‍ಐಯು ಅನ್ನು ರಾಜ್ಯ ಸರಕಾರ ನಿಯಂತ್ರಿಸಲು ಸಾಧ್ಯವಿಲ್ಲ. ರಾಜ್ಯದ ವಿದ್ಯಾರ್ಥಿಗಳಿಗೆ ಇಲ್ಲಿ ಮೀಸಲು ಕಲ್ಪಿಸಿದರೆ, ಬೇರೆ ರಾಜ್ಯಗಳಲ್ಲಿರುವ ಎನ್‍ಎಲ್‍ಎಸ್‍ಐಯುಗಳಲ್ಲಿ ಸೀಟು ಕೇಳುವುದು ಹೇಗೆ ಎಂದು ಅಭಿಪ್ರಾಯ ಪಟ್ಟಿರುವ ಪೀಠ, ತಿದ್ದುಪಡಿ ಕಾನೂನನ್ನು ರದ್ದುಪಡಿಸಿದೆ. 

ಅಂತೆಯೇ, ಶೇ.25 ಮೀಸಲು ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಯ ಕಟ್‍ ಆಫ್ ಅಂಕದಲ್ಲಿ ಶೇ.5 ವಿನಾಯಿತಿ ನೀಡಿ ಎನ್‍ಎಲ್‍ಎಸ್‍ಐಯು ಆ.4ರಂದು ಹೊರಡಿಸಿದ್ದ ಅಧಿಸೂಚನೆಯನ್ನೂ ರದ್ದುಪಡಿಸಿದೆ.

ಏನಿದು ಪ್ರಕರಣ: ನ್ಯಾಷನಲ್ ಲಾ ಸ್ಕೂಲ್ ಇಂಡಿಯಾ ಯೂನಿವರ್ಸಿಟಿ ಕಾಯ್ದೆಗೆ 2020 ಮಾರ್ಚ್ ತಿಂಗಳಲ್ಲಿ ತಿದ್ದುಪಡಿ ತಂದಿದ್ದ ರಾಜ್ಯ ಸರಕಾರ ರಾಜ್ಯದ ವಿದ್ಯಾರ್ಥಿಗಳಿಗೆ ಶೇ. 25 ಸೀಟುಗಳನ್ನು ಮೀಸಲಿರಿಸಿತ್ತು. ತಿದ್ದುಪಡಿ ಕಾನೂನಿನ ಪ್ರಕಾರ ರಾಜ್ಯದಲ್ಲಿ 10 ವರ್ಷಗಳ ಕಾಲ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಎನ್‍ಎಲ್‍ಎಸ್‍ಐಯು ಪ್ರವೇಶ ಪರೀಕ್ಷೆ ಪಾಸ್ ಮಾಡುವ ಮೂಲಕ ಸೀಟು ಪಡೆದುಕೊಳ್ಳಬಹುದಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‍ಗೆ ತಕರಾರರು ಅರ್ಜಿಗಳನ್ನು ಸಲ್ಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News