ತಮಟೆ ಕಲಾವಿದರಿಗೆ ಪರಿಹಾರ ನೀಡಲು ಆಗ್ರಹಿಸಿ ಧರಣಿ

Update: 2020-09-29 17:40 GMT

ಬೆಂಗಳೂರು, ಸೆ.29: ಲಾಕ್‍ಡೌನ್ ಪರಿಣಾಮದಿಂದಾಗಿ ರಾಜ್ಯ ವ್ಯಾಪಿ ತಮಟೆ ಕಲಾವಿದರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದು, ಈ ಕಡೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶೇಷ ಗಮನ ಹರಿಸಿ, ಪರಿಹಾರ ಒದಗಿಸಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.

ಮಂಗಳವಾರ ಇಲ್ಲಿನ ಬನ್ನಪ್ಪ ಪಾರ್ಕ್ ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೂ ಡಾ.ಬಿ.ಆರ್.ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿಯ ಸದಸ್ಯರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯ ಮಾಡಿದರು.

ಕೊರೋನ ಸೋಂಕು ಹಾಗೂ ಲಾಕ್‍ಡೌನ್ ಜಾರಿಯಾಗಿದ್ದ ಪರಿಣಾಮ ಯಾವುದೇ ರೀತಿಯ ಕಾರ್ಯಕ್ರಮಗಳು, ಇತರೆ ಸಭೆ ಸಮಾರಂಭಗಳು ನಡೆಯುತ್ತಿಲ್ಲ. ಇದನ್ನೇ ನಂಬಿ, ಜೀವನ ಸಾಗಿಸುತ್ತಿದ್ದ ತಮಟೆ ಕಲಾವಿದರು, ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮನವಿ ಸಲ್ಲಿಸಿದರೂ, ಯಾವುದೇ ರೀತಿಯ ಪರಿಹಾರ ಒದಗಿಸಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.

ರಾಜ್ಯ ಸರಕಾರ ತಮಟೆ ಕಲಾವಿದರಿಗೆ ತುರ್ತು ಪರಿಹಾರ ಒದಗಿಸಬೇಕು. ಅದೇ ರೀತಿ, ವಸತಿ, ಮೂಲಸೌಕರ್ಯಗಳನ್ನು ಕಲ್ಪಿಸಿ, ಹಿರಿಯ ಕಲಾವಿದರಿಗೆ ಪಿಂಚಣಿಯೂ ನೀಡಬೇಕೆಂದು ಪ್ರತಿಭಟನೆ ನಿರತ ಹೋರಾಟಗಾರರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News