ಕುಟುಂಬವನ್ನು ದೂರವಿಟ್ಟು ರಾತ್ರೋರಾತ್ರಿ ಅಂತಿಮ ಸಂಸ್ಕಾರ ನಡೆಸಿದ ಪೋಲೀಸರ ನಡೆಗೆ ವ್ಯಾಪಕ ಆಕ್ರೋಶ

Update: 2020-09-30 05:20 GMT

ಹೊಸದಿಲ್ಲಿ: ಸೋಮವಾರ ದಿಲ್ಲಿಯ ಸಫ್ದರ್‍ ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟ ಉತ್ತರ ಪ್ರದೇಶದ ಹತ್ರಸ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಅಂತ್ಯಕ್ರಿಯೆಯನ್ನು ಪೊಲೀಸರೇ  ಮಂಗಳವಾರ ತಡರಾತ್ರಿ ಅವಸರವಸರವಾಗಿ ನಡೆಸಿರುವುದು ಹಾಗೂ ಈ ಸಂದರ್ಭ ಸಂತ್ರಸ್ತೆಯ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರನ್ನು ಅವರ ಮನೆಗಳಲ್ಲಿ ಬಂಧಿಯಾಗಿಸಿರುವುದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.

ಕುಟುಂಬ ಸದಸ್ಯರು ಪೊಲೀಸರ ಜತೆ ವಾದಿಸುತ್ತಿರುವುದು ಹಾಗೂ ಕೆಲ ಮಹಿಳಾ ಸಂಬಂಧಿಕರು ಮೃತದೇಹವನ್ನು ಹೊತ್ತ ಆ್ಯಂಬುಲೆನ್ಸ್  ಎದುರು ನಿಂತುಕೊಂಡು ತಡೆಯಲು ನಡೆಸುತ್ತಿರುವ ದೃಶ್ಯ, ಸಂತ್ರಸ್ತೆಯ ಕಳೇಬರವನ್ನು ಪೊಲೀಸರು ನೇರವಾಗಿ ರುದ್ರಭೂಮಿಗೆ ಒಯ್ಯುತ್ತಿರುವಂತೆಯೇ ಆಕೆಯ ತಾಯಿ ದುಃಖ ತಾಳಲಾರದೆ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯಗಳು ಇಡೀ ದೇಶದ ಜನತೆಯ ಮನಕಲಕಿದೆ.

ಅತ್ಯಾಚಾರ ಸಂತ್ರಸ್ತೆ ದಲಿತ ಯುವತಿಯ ಮೇಲೆ ನಡೆದ ಪೈಶಾಚಿಕ ಹಲ್ಲೆಯಿಂದ ಆಕೆಯ ದೇಹದ ಹಲವೆಡೆ ಮೂಳೆ ಮುರಿತವುಂಟಾಗಿತ್ತಲ್ಲದೆ, ಆಕೆ ಪಾರ್ಶ್ವವಾಯುವಿಗೂ ತುತ್ತಾಗಿದ್ದಳು. ಕಟುಕರು ಆಕೆಯ ನಾಲಗೆಯನ್ನೂ ಸೀಳಿದ್ದು ಇಡೀ ಪ್ರಕರಣ 2012ರ ನಿರ್ಭಯಾ ಪ್ರಕರಣವನ್ನು ನೆನಪಿಸಿತ್ತು.

ಸೋಮವಾರ ಸಂಜೆ ಯಾರಿಗೂ ತಿಳಿಸದೆಯೇ ಮೃತದೇಹವನ್ನು ಪೊಲೀಸರು ಕೊಂಡೊಯ್ದಿದ್ದಾರೆಂದು ತಿಳಿಯುತ್ತಲೇ ಸಂತ್ರಸ್ತೆಯ ತಂದೆ ಹಾಗೂ ಸೋದರರು ಧರಣಿ ಕುಳಿತಿದ್ದರೂ ಉತ್ತರ ಪ್ರದೇಶದ ನಂಬರ್ ಪ್ಲೇಟ್ ಹೊಂದಿದ್ದ ಸ್ಕಾರ್ಪಿಯೋ ವಾಹನದಲ್ಲಿ ಬಂದ ಪೊಲೀಸರು ಅವರನ್ನು ಕರೆದೊಯ್ದಿದ್ದರು.

ಮಧ್ಯರಾತ್ರಿ ಕಳೆದ ನಂತರ ಕಳೇಬರವನ್ನು ಹತ್ರಸ್‍ಗೆ ಕೊಂಡೊಯ್ಯಲಾಗಿತ್ತು, ಇದನ್ನು ತಿಳಿದು ಕುಟುಂಬಿಕರು ಹಾಗೂ ಗ್ರಾಮಸ್ಥರು ವಾಹನವನ್ನು ಹಲವು ಕಡೆ ಕಡೆ ತಡೆಯಲು ಯತ್ನಿಸಿದ್ದರೂ ಅಂತಿಮವಾಗಿ ರುದ್ರಭೂಮಿಯ ತನಕ ಕೊಂಡೊಯ್ದು ಅಂತ್ಯಕ್ರಿಯೆ ನಡೆಸುವಲ್ಲಿ ಪೊಲೀಸರು ಸಫಲರಾಗಿದ್ದರು.

ನಾಯಕರ ಖಂಡನೆ : ಪೊಲೀಸರು ಈ ಘಟನೆಯಲ್ಲಿ ವರ್ತಿಸಿದ ರೀತಿ ಹಾಗೂ ಕುಟುಂಬಿಕರಿಗೆ ಅಂತ್ಯಕ್ರಿಯೆ ನಡೆಸಲು ಅವಕಾಶ ನೀಡದೇ ತಾವಾಗಿಯೇ ಅವಸವಸರವಾಗಿ ಅಂತ್ಯಕ್ರಿಯೆ ನೆರವೇರಿಸಿದ್ದನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹಿತ ಹಲವು ನಾಯಕರು ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News