ಬೆಂಗಳೂರು ಗಲಭೆ ಪ್ರಕರಣ: ಇಮಾಮ್ಸ್ ಕೌನ್ಸಿಲ್ ಸತ್ಯಶೋಧನಾ ವರದಿ ಬಿಡುಗಡೆ, ನ್ಯಾಯಾಂಗ ತನಿಖೆಗೆ ಪಟ್ಟು

Update: 2020-09-30 14:30 GMT

ಬೆಂಗಳೂರು, ಸೆ.30: ಡಿಜೆ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಸತ್ಯಶೋಧನಾ ವರದಿಯೊಂದನ್ನು ಬಿಡುಗಡೆಗೊಳಿಸಿದ್ದು, ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.

ಬುಧವಾರ ನಗರದ ದಾರುಸ್ಸಲಾಂ ಕಟ್ಟಡದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೌನ್ಸಿಲ್ ರಾಷ್ಟ್ರೀಯ ಕಾರ್ಯದರ್ಶಿ ಜಾಫರ್ ಸಾದಿಕ್ ಫೈಝಿ, ಗಲಭೆಗೆ ಆಡಳಿತ ವ್ಯವಸ್ಥೆಯ ವೈಫಲ್ಯವೇ ಪ್ರಮುಖ ಕಾರಣವಾಗಿದ್ದು, ಬಂಧಿತ ಆರೋಪಿಗಳ ಮೇಲಿನ ಯುಎಪಿಎ ಅಡಿಯ ಮೊಕದ್ದಮೆಗಳನ್ನು ಈ ಕೂಡಲೇ ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿದರು.

ಪ್ರಚೋದನಕಾರಿ ಸಂದೇಶಗಳನ್ನು ರವಾನೆ ಮಾಡಿರುವ ವ್ಯಕ್ತಿಯ ಹಿನ್ನೆಲೆಯನ್ನು ಆಡಳಿತವೂ ಬಹಿರಂಗಪಡಿಸಬೇಕು. ಅದೇ ರೀತಿ, ಗೋಲಿಬಾರ್ ನಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಪರಿಹಾರ ಒದಗಿಸಬೇಕು. ಅಮಾಯಕರನ್ನು ಈ ಕೂಡಲೇ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು.

ವರದಿಯನ್ನುದ್ದೇಶಿಸಿ ಮಾತನಾಡಿದ ಕೌನ್ಸಿಲ್‍ನ ರಾಜ್ಯಾಧ್ಯಕ್ಷ ಮೌಲಾನಾ ಅತೀಕುರಹ್ಮಾನ್ ಅಶ್ರಫಿ, ಹಿಂದಿನಿಂದಲೂ ಕೋಮು ಸಾಮರಸ್ಯಕ್ಕೆ ಹೆಸರುವಾಸಿಯಾಗಿರುವ ಡಿಜೆ ಮತ್ತು ಕೆಜಿಹಳ್ಳಿ ಪ್ರದೇಶಗಳಲ್ಲಿ ರಾಜಕೀಯ ಲಾಭಕ್ಕಾಗಿ ಕೋಮು ಧ್ರುವೀಕರಣಗೊಳಿಸಲು ಪ್ರಯತ್ನಿಸಲಾಗಿದೆ. ತನಿಖೆ ನಡೆಯುವ ಮುನ್ನವೇ ಕೋಮುಗಲಭೆ ಎಂದು ಬಣ್ಣ ಹಚ್ಚಲಾಗಿದೆ ಎಂದರು.

ಗಲಾಟೆ ನಿಯಂತ್ರಿಸಲು ಶ್ರಮಿಸಿದ ಎಸ್‍ಡಿಪಿಐ ಸ್ಥಳೀಯ ನಾಯಕರನ್ನೇ ಗುರಿಯಾಗಿಸಿಕೊಂಡು ಬಂಧಿಸಲಾಗಿರುವುದಲ್ಲದೆ, ಭಯೋತ್ಪಾದನಾ ಪ್ರಕರಣದಲ್ಲಿ ಹಾಕಲಾಗುವ ಯುಎಪಿಎ ಕರಾಳ ಕಾಯ್ದೆಯನ್ನು ಬಂಧಿತರ ಮೇಲೆ ಹೇರಲಾಗಿದೆ. ಇದು ಆಡಳಿತ ವ್ಯವಸ್ಥೆಯ ಅನ್ಯಾಯದ ಮತ್ತು ಪ್ರತೀಕಾರದ ಕ್ರಮವಾಗಿದೆ ಎಂದು ತಿಳಿಸಿದರು.

ಬಂಧಿಸುವ ನೆಪದಲ್ಲಿ ಅನೇಕ ಅಮಾಯಕರನ್ನು ಸೆರೆಹಿಡಿಯಲಾಗಿದೆ ಎಂದ ಅವರು, ಘಟನೆಯನ್ನು ಪೂರ್ಣ ಪ್ರಮಾಣದಲ್ಲಿ ಪರಿಶೀಲನೆ ನಡೆಸಿದಾಗ ಆಡಳಿತ ವೈಫಲ್ಯವೇ ಕಾರಣವಾಗಿದೆ. ಹೀಗಾಗಿ, ನ್ಯಾಯಾಂಗ ತನಿಖೆ ನಡೆಯಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೌನ್ಸಿಲ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಫ್ತಿ ಮಹಮ್ಮದ್ ಅಝ್ಝಮ್ ಅಲ್ ಖಾಸ್ಮಿ, ಉಪಾಧ್ಯಕ್ಷ ಮೌಲಾನಾ ಮುಹಮ್ಮದ್ ಯುಸುಫ್ ರಶಾದಿ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News