ಮಣಿಪಾಲ್ ಗ್ರೂಪ್ ಗೆ ವಂಚನೆ ಪ್ರಕರಣ: ಪ್ರಮುಖ ಆರೋಪಿ ಸಂದೀಪ್ ಗುರುರಾಜ್ ಜಾಮೀನು ಅರ್ಜಿ ವಜಾ

Update: 2020-09-30 16:08 GMT

ಬೆಂಗಳೂರು, ಸೆ.30: ಮಣಿಪಾಲ್ ಗ್ರೂಪಿನ ವಿವಿಧ ಬ್ಯಾಂಕ್ ಖಾತೆಗಳಿಂದ 75 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಡ್ರಾ ಮಾಡಿಕೊಂಡು ದುರ್ಬಳಕೆ ಮಾಡಿ, ವಂಚನೆ ಎಸಗಿರುವ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಸಂದೀಪ್ ಗುರುರಾಜ್‍ಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.

ಜಾಮೀನು ಕೋರಿ ಸಂದೀಪ್ ಗುರುರಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರಿದ್ದ ನ್ಯಾಯಪೀಠ, ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂದೀಪ್ ಗುರುರಾಜ್ ಮತ್ತು ತನ್ನ ಪತ್ನಿ ಚಾರುಸ್ಮಿತ, ಸಹವರ್ತಿ ಅಮೃತಾ ಚೆಂಗಪ್ಪ ಮತ್ತು ಅಮೃತಾಳ ತಾಯಿ ಮೀರಾ ಚೆಂಗಪ್ಪ ಅವರನ್ನು 2018ರ ಡಿಸೆಂಬರ್ 27 ರಂದು ಪೊಲೀಸರು ಬಂಧಿಸಿದ್ದರು.

ಮಣಿಪಾಲ್ ಗ್ರೂಪಿನ ಖಾತೆಗಳಿಂದ 75 ಕೋಟಿ ರೂಪಾಯಿಗೂ ಅಧಿಕ ಹಣವನ್ನು ವಂಚನೆ ನಡೆಸಿದ ಆರೋಪದಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ದೂರು ದಾಖಲಾಗಿತ್ತು ಮತ್ತು ಪ್ರಮುಖ ಆರೋಪಿಗಳು 2018 ರ ಡಿಸೆಂಬರ್ ನಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.

ವಿದೇಶಕ್ಕೆ ಹಾರಿದ್ದ ಪ್ರಮುಖ ಆರೋಪಿಯನ್ನು ಭಾರತಕ್ಕೆ ಗಡೀಪಾರು ಮಾಡಿದ್ದರಿಂದ ಆತ ಕಾನೂನಿನ ಬಲೆಯಲ್ಲಿ ಸಿಕ್ಕಿ ಬಿದ್ದಿದ್ದಾನೆ. ಈ ಪ್ರಕರಣದಲ್ಲಿ ಹಲವಾರು ಜನರು, ಉದ್ಯಮಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಈ ವಂಚನೆ ಹಣದಲ್ಲಿ ಸಂದೀಪ್ ಗುರುರಾಜ್ ಸ್ಟಾರ್ಟಪ್‍ಗಳಲ್ಲಿಯೂ ಹೂಡಿಕೆ ಮಾಡಲು ಯತ್ನಿಸಿದ್ದ ಮತ್ತು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News