ಉತ್ತರ ಪ್ರದೇಶದ ಯುವತಿಯ ಸಾಮೂಹಿಕ ಅತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆ

Update: 2020-09-30 16:21 GMT

ಬೆಂಗಳೂರು, ಸೆ.30: ಉತ್ತರ ಪ್ರದೇಶದ ಯುವತಿಯ ಮೇಲಿನ ಅತ್ಯಾಚಾರ ಮತ್ತು ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಎಐಡಿವೈಓ, ಎಐಡಿಎಸ್‍ಓ, ಎಐಎಂಎಸ್‍ಎಸ್ ಸಂಘಟನೆಗಳು ಜಂಟಿಯಾಗಿ ನಗರದಲ್ಲಿಂದು ಪ್ರತಿಭಟನೆ ನಡೆಸಿತು.

ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಜಮಾಯಿಸಿದ ಸಂಘಟನೆಗಳ ಕಾರ್ಯಕರ್ತರು, ಉತ್ತರ ಪ್ರದೇಶದಲ್ಲಿ 19 ವರ್ಷದ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಹಾಗೂ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಐಎಂಎಂಎಸ್‍ನ ಜಿಲ್ಲಾ ಕಾರ್ಯದರ್ಶಿ ಎ.ಶಾಂತ, ಯುವತಿಯ ಕತ್ತು ಹಿಸುಕಿ ಎಳೆದೊಯ್ದು ಬರ್ಬರವಾಗಿ ಅತ್ಯಾಚಾರ ನಡೆಸಿದ್ದಾರೆ. ಆಕೆಯನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ರವಾನಿಸಿದ್ದ ವೇಳೆ ಮೃತಪಟ್ಟಿದ್ದಾರೆ. ಆದರೆ, ಆಳುವ ವರ್ಗ ಮತ್ತು ಪೊಲೀಸ್ ವ್ಯವಸ್ಥೆ ಅತ್ಯಂತ ಹೀನಾಯವಾಗಿ ನಡೆದುಕೊಂಡಿರುವುದು ದುರಂತದ ಸಂಗತಿ ಎಂದು ಹೇಳಿದರು.

ಮೃತಪಟ್ಟ ಯುವತಿಯ ಸಂಬಂಧಿಕರು ಘಟನೆ ಕುರಿತು ಪೊಲೀಸರಿಗೆ ದೂರು ನೀಡಲು ತೆರಳಿದಂತಹ ಸಂದರ್ಭದಲ್ಲಿ ದೂರು ಪಡೆಯಲು ನಿರಾಕರಿಸಿದ್ದಾರೆ. ಅಂದರೆ, ಯುಪಿ ಸರಕಾರದ ಆಡಳಿತ ವ್ಯವಸ್ಥೆಯು ಅತ್ಯಾಚಾರಿಗಳ ಪರವಾಗಿದೆಯಾ ಎಂಬ ಅನುಮಾನ ಕಾಡುತ್ತಿದೆ. ಬೇಟಿ ಬಚಾವೋ ಎಂದು ದೊಡ್ಡ ದೊಡ್ಡ ಭಾಷಣಗಳಲ್ಲಿ ಹೇಳುತ್ತಾರೆಯಾದರೂ, ಅದನ್ನು ಯಾರೂ ಅನುಸರಿಸುತ್ತಿಲ್ಲ ಎಂದು ಅವರು ಆಪಾದಿಸಿದರು.

ಎಐಡಿವೈಒನ ಜಿಲ್ಲಾಧ್ಯಕ್ಷ ಕೃಷ್ಣ ಮಾತನಾಡಿ, ದೇಶದಾದ್ಯಂತ ದಿನದಿಂದ ದಿನಕ್ಕೆ ಅತ್ಯಾಚಾರ ಪ್ರಕರಣಗಳು ಅಧಿಕವಾಗುತ್ತಲೇ ಇವೆ. ಈ ಹಿಂದೆ ಉತ್ತರ ಪ್ರದೇಶದಲ್ಲಿ ಮೂರು ವರ್ಷದ ಹೆಣ್ಣು ಮಗುವಿನ ಮೇಲಿನ ಅತ್ಯಾಚಾರ, ದಲಿತ ಯುವತಿ ಮೇಲಿನ ಅತ್ಯಾಚಾರ ಜನಮಾನಸದಿಂದ ಅಳಿಯುವ ಮುನ್ನವೇ ಮತ್ತೊಂದು ಬರ್ಬರವಾದ ಅತ್ಯಾಚಾರ ನಡೆದಿದೆ. ಇಂತಹ ಘಟನೆಗಳ ವಿರುದ್ಧ ಆಳುವವರ ವಿರುದ್ಧ ಎಲ್ಲರೂ ಸಂಘಟಿತರಾಗಿ ಹೋರಾಡಬೇಕು ಎಂದು ಕರೆ ನೀಡಿದರು.

ಪ್ರತಿಭಟನೆಯಲ್ಲಿ ಎಐಡಿಎಸ್‍ಒನ ಬೆಂಗಳೂರು ಉಪಾಧ್ಯಕ್ಷ ಸುಭಾಷ್, ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯೆ ಸಿಂಧೂರ, ಅಪೂರ್ವ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News