ತೇಜಸ್ವಿ ಸೂರ್ಯ ಸ್ವಾಗತಿಸಲು ಭಾರೀ ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು: ಕೊರೋನ ನಿಯಮ ಉಲ್ಲಂಘನೆ

Update: 2020-09-30 17:51 GMT

ಬೆಂಗಳೂರು, ಸೆ.30: ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಸಂಸದ ತೇಜಸ್ವಿ ಸೂರ್ಯ ಆಯ್ಕೆಯಾದ ಬಳಿಕ ಕಾರ್ಯಕರ್ತರು ಬೃಹತ್ ರ‍್ಯಾಲಿ ನಡೆಸುವ ಮೂಲಕ ಕೊರೋನ ನಿಯಂತ್ರಣ ಸಂಬಂಧ ಸರಕಾರ ನಿಗದಿಪಡಿಸಿರುವ ನಿಯಮವನ್ನು ಉಲ್ಲಂಘಿಸಿದ್ದಾರೆ.

ಕೊರೋನ ನಿಯಮ ಉಲ್ಲಂಘಿಸಿ ಯಾವುದೇ ರಾಜಕೀಯ ರ‍್ಯಾಲಿ ಮಾಡಬಾರದು ಎಂದು ಕೇಂದ್ರ ಸರಕಾರ ಒತ್ತಿ ಹೇಳುತ್ತದೆ. ಆದರೆ ಅವರದ್ದೇ ಸರಕಾರದ ಸಂಸದ ಇದೀಗ ಕೊರೋನ ನಿಯಮ ಉಲ್ಲಂಘಿಸಿದ ಅದ್ಧೂರಿ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. 

ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಸಂಸದ ತೇಜಸ್ವಿ ಸೂರ್ಯ ಆಯ್ಕೆಯಾದ ಬಳಿಕ ದೆಹಲಿಯಿಂದ ವಾಪಸ್ಸಾಗಿದ್ದಾರೆ. ದಿಲ್ಲಿಯಿಂದ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಇಂದು ನಗರಕ್ಕೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಯುವ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೂರಾರು ಜನ ಸೇರಿ ಬೃಹತ್ ಮೆರವಣಿಗೆ ಮಾಡಿದ್ದಾರೆ.

ಕೊರೋನ ಹಿನ್ನೆಲೆ ರಾಜಕೀಯ ರ‍್ಯಾಲಿಗಳನ್ನು ನಡೆಸಬಾರದು ಎಂದು ಕೇಂದ್ರ ಸರಕಾರ ಒತ್ತಿ ಹೇಳಿದೆ. ಅಲ್ಲದೆ 100ಕ್ಕಿಂತ ಹೆಚ್ಚು ಜನ ಗುಂಪು ಸೇರಬಾರದು ಎಂಬ ನಿಯಮ ಸಹ ಇದೆ. ಆದರೆ ಅವರದ್ದೇ ಸರಕಾರದ ಸಂಸದ ರ‍್ಯಾಲಿಯಲ್ಲಿ ಭಾಗವಹಿಸುವ ಮೂಲಕ ಬೆಂಗಳೂರಲ್ಲಿ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮೆರವಣಿಗೆ, ಬೈಕ್ ರ‍್ಯಾಲಿ ಮೂಲಕ ತೇಜಸ್ವಿ ಸೂರ್ಯ ಬಿಜೆಪಿ ಕಚೇರಿಗೆ ಆಗಮಿಸಿದ್ದು, ರ‍್ಯಾಲಿಯಲ್ಲಿ ನೂರಾರು ಕಾರ್ಯಕರ್ತರು ಜಮಾವಣೆಯಾಗಿದ್ದಾರೆ. ಈ ಮೂಲಕ ನಿಯಮವನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಮಲ್ಲೇಶ್ವರದ ಬಿಜೆಪಿ ಕಚೇರಿ ವರೆಗೆ ರ‍್ಯಾಲಿ ನಡೆಸಿದ್ದು, ಸುರಕ್ಷಿತ ಅಂತರ, ಮಾಸ್ಕ್ ಇಲ್ಲದೆ ಬೈಕ್ ರ‍್ಯಾಲಿ ನಡೆಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರ‍್ಯಾಲಿ ಬಳಿಕ ಬಿಜೆಪಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ತೇಜಸ್ವಿ ಸೂರ್ಯ ಮಾತನಾಡಿದ್ದು, ಈ ವೇಳೆ ಸಹ ನೂರಾರು ಕಾರ್ಯಕರ್ತರು ಜಮಾವಣೆಯಾಗಿದ್ದರು. ಈ ವೇಳೆ ಸಹ ಸುರಕ್ಷಿತ ಅಂತರ ಇಲ್ಲದೆ ಕಾರ್ಯಕರ್ತರು ಒತ್ತೊತ್ತಾಗಿ ನಿಂತಿದ್ದರು. ಇದೇ ವೇಳೆ ಕಾರ್ಯಕರ್ತರು ತೇಜಸ್ವಿ ಸೂರ್ಯರನ್ನು ಹೆಗಲ ಮೇಲೆ ಹೊತ್ತು ಬಿಜೆಪಿ ಕಚೇರಿ ಒಳಗೆ ಕರೆತಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News