ಕಾಲ್ನಡಿಗೆಯಲ್ಲೇ ಸಂತ್ರಸ್ತ ಯುವತಿಯ ಊರಿನತ್ತ ಹೆಜ್ಜೆ ಇಟ್ಟ ರಾಹುಲ್, ಪ್ರಿಯಾಂಕಾ ಗಾಂಧಿ

Update: 2020-10-01 09:30 GMT

ಹೊಸದಿಲ್ಲಿ,ಅ.1: ಅತ್ಯಾಚಾರಕ್ಕೀಡಾಗಿ ಸಾವನ್ನಪ್ಪಿರುವ ದಲಿತ ಯುವತಿಯ ಕುಟುಂಬವನ್ನು ಭೇಟಿಯಾಗಲು ಉತ್ತರಪ್ರದೇಶದ ಹಾಥರಸ್ ಜಿಲ್ಲೆಯತ್ತ ತೆರಳುತ್ತಿದ್ದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ಬೆಂಗಾವಲು ಪಡೆಯನ್ನು ಪೊಲೀಸರು ತಡೆಹಿಡಿದರು. ಹೀಗಾಗಿ ಇವರಿಬ್ಬರು ದಿಲ್ಲಿ ಹಾಗೂ ಉತ್ತರಪ್ರದೇಶ ನಡುವಿನ ಹೆದ್ದಾರಿಯಲ್ಲಿ ಕಾಲ್ನಡಿಗೆಯಲ್ಲಿ ತಮ್ಮ ಪ್ರಯಾಣ ಮುಂದುವರಿಸಿದರು.

ದಿಲ್ಲಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಮಂಗಳವಾರ ರಾತ್ರಿ ಸಾವನ್ನಪ್ಪಿದ್ದ ದಲಿತ ಯುವತಿಯನ್ನು ಉತ್ತರಪ್ರದೇಶ ಪೊಲೀಸರು ಬುಧವಾರ ರಾತ್ರಿ 2:30ರ ಸುಮಾರಿಗೆ ಅಂತ್ಯಕ್ರಿಯೆ ನಡೆಸಿದ್ದು ಇದು ಭಾರೀ ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ನಾಯಕರ ಭೇಟಿಗೆ ಮೊದಲು ಸೆಕ್ಷನ್ 144ನ್ನು ಜಾರಿಗೊಳಿಸಿ ಹೆಚ್ಚು ಜನರು ಸೇರುವುದನ್ನು ನಿಷೇಧಿಸಿರುವ ಉತ್ತರಪ್ರದೇಶದ ಆಡಳಿತವು ಕೊರೋನ ವೈರಸ್‌ಕಾರಣವನ್ನು ಮುಂದಿಟ್ಟುಕೊಂಡು ಗಡಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದೆ.

ಕಾಂಗ್ರೆಸ್ ಕಾರ್ಯಕರ್ತರು ರಸ್ತೆಗಳನ್ನು ತಡೆದು ಘೋಷಣೆಗಳನ್ನು ಕೂಗುತ್ತಿರುವ ನಡುವೆ ರಾಹುಲ್ ಹಾಗೂ ಪ್ರಿಯಾಂಕಾ ಅವರಿದ್ದ ವಾಹನವು ಗಡಿಯನ್ನು ದಾಟಿತು.ಆದರೆ, ಹಥ್ರಾಸ್‌ನಿಂದ 142 ಕಿ.ಮೀ.ದೂರದಲ್ಲಿರುವ ಗ್ರೇಟರ್‌ನೊಯ್ಡಾದಲ್ಲಿ ರಾಹುಲ್-ಪ್ರಿಯಾಂಕಾ ಅವರ ಬೆಂಗಾವಲು ಪಡೆ ವಾಹನವನ್ನು ತಡೆಯಲಾಯಿತು. ರಾಹುಲ್ ಹಾಗೂ ಪ್ರಿಯಾಂಕಾ ವಾಹನದಿಂದ ಕೆಳಗಿಳಿದು ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸುತ್ತಾ ಹಥ್ರಾಸ್‌ನತ್ತ ಹೆಜ್ಜೆ ಹಾಕುತ್ತಿದ್ದಾರೆ.

ಸೆಪ್ಟಂಬರ್ 1ರಿಂದ ನಿರ್ಬಂಧಗಳು ಜಾರಿಯಾಗಿದ್ದು, ಅದು ಅಕ್ಟೋಬರ್ 31ರ ತನಕ ವಿಸ್ತರಿಸಲಾಗಿದೆ ಎಂದು ಯು.ಪಿ. ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News