ಕಸ ನಿರ್ವಹಣೆ ಟೆಂಡರ್ ನಲ್ಲಿ ಎಸ್ಸಿ, ಎಸ್ಟಿಗೆ ಮೀಸಲಾತಿ ಕಲ್ಪಿಸದ ವಿಚಾರ: ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್

Update: 2020-10-01 15:20 GMT

ಬೆಂಗಳೂರು, ಅ.1: ಬಿಬಿಎಂಪಿ ಕಸ ನಿರ್ವಹಣೆ ಗುತ್ತಿಗೆ ಟೆಂಡರ್ ನೀಡುವಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಕಲ್ಪಿಸದಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ನಗರಾಭಿವೃದ್ಧಿ ಇಲಾಖೆ ಹಾಗೂ ಬಿಬಿಎಂಪಿಗೆ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತು ಪೌರಕಾರ್ಮಿಕರ ಸಂಘ ಸೇರಿ ಇನ್ನಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ಬಿಬಿಎಂಪಿ ಕಸ ನಿರ್ವಹಣೆಗೆ ಸಂಬಂಧಪಟ್ಟಂತೆ 2019ರ ಜ.19ರಂದು ಟೆಂಡರ್ ಕರೆದಿದೆ. ಕೆಟಿಪಿಪಿ ಕಾಯ್ದೆಯ ಕಲಂ 6ರ ತಿದ್ದುಪಡಿ ಅನುಸಾರ ರಾಜ್ಯದಲ್ಲಿ 50 ಲಕ್ಷ ಮೀರದ ಯಾವುದೇ ಕಾಮಗಾರಿಯ ಗುತ್ತಿಗೆ ನೀಡುವಾಗ ಎಸ್ಸಿ, ಎಸ್ಟಿ ಪಂಗಡದವರಿಗೆ ಶೇ.24.10 ರಷ್ಟು ಮೀಸಲಾತಿ ನೀಡಬೇಕು. ಆ ಪ್ರಕಾರ ಬಿಬಿಎಂಪಿಯ 198 ವಾರ್ಡ್ ಗಳಲ್ಲಿ 48 ವಾರ್ಡ್ ಗಳ ಕಸ ವಿಲೇವಾರಿ ಗುತ್ತಿಗೆಯನ್ನು ಎಸ್ಸಿ, ಎಸ್ಟಿ ಗುತ್ತಿಗೆದಾರರಿಗೆ ನೀಡಬೇಕಿತ್ತು. ಆದರೆ, ನೀಡಿಲ್ಲ. ಹೀಗಾಗಿ, ಈಗ ತೆರೆದಿರುವ ಟೆಂಡರ್ ಗಳನ್ನು ರದ್ದುಗೊಳಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿಗೆ ನೋಟಿಸ್ ಜಾರಿಗೊಳಿಸಿ, ಅರ್ಜಿ ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News