ಎಸ್ಸಿ ಎಸ್ಟಿ ಅಭಿವೃದ್ಧಿ ಅನುದಾನ ದುರ್ಬಳಕೆ ಆರೋಪ: ಬಿಬಿಎಂಪಿ ಕೇಂದ್ರ ಕಚೇರಿ ಎದುರು ದಸಂಸ ಪ್ರತಿಭಟನೆ

Update: 2020-10-01 17:20 GMT

ಬೆಂಗಳೂರು, ಅ.1: ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆಯ ಬಿಲ್‍ಗಳಲ್ಲಿ ಅವ್ಯವಹಾರ ಆಗಿದೆ ಹಾಗೂ ಎಸ್.ಸಿ, ಎಸ್.ಟಿ ಜನಾಂಗದ ಅಭಿವೃದ್ದಿಗಾಗಿ ಮೀಸಲಿಟ್ಟಿರುವ ಅಭಿವೃದ್ದಿ ಅನುದಾನ ಕಾನೂನು ಬಾಹಿರವಾಗಿ ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸದಸ್ಯರು ಗುರುವಾರ ಬಿಬಿಎಂಪಿ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಡಾ ಸಿ.ಎಸ್ ರಘು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ದಿಗಾಗಿ ಮೀಸಲಿಟ್ಟ ಅನುದಾನವನ್ನು ಬಳಕೆ ಮಾಡುವಲ್ಲಿ ಶಾಸನಬದ್ಧ ಕಾನೂನು ನಿಯಮಾವಳಿಗಳನ್ನು ಉಲ್ಲಂಘಿಸಿ ಜಾಬ್ ಕೋಡ್‍ಗಳನ್ನು ಸೃಷ್ಟಿಸಿರುವುದು ಪರಿಶಿಷ್ಟರ ಆರ್ಥಿಕ ಅಭಿವೃದ್ದಿಯ ವಿರೋಧಿ ನೀತಿಯಾಗಿರುತ್ತದೆ. ಆದ್ದರಿಂದ ಸಂವಿಧಾನಬದ್ಧ ಎಸ್.ಸಿ, ಎಸ್.ಟಿ ವರ್ಗದ ಹಕ್ಕುಗಳು ಉಲ್ಲಂಘನೆಯಾಗಿರುವ ಬಗ್ಗೆ ಕಾನೂನಾತ್ಮಕ ಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪಾಲಿಕೆಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಕೆ.ಟಿ.ಪಿ.ಪಿ ಕಾಯ್ದೆ ಹಾಗೂ ಕೆ.ಎಂ.ಸಿ ಕಾಯ್ದೆ ಸಂಪೂರ್ಣವಾಗಿ ಉಲ್ಲಂಘನೆ ಮಾಡಿ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸದೆ ಬಿಲ್‍ಗಳನ್ನು ಪಾವತಿಸಿರುತ್ತಾರೆ. ಗುತ್ತಿಗೆ ಪೌರಕಾರ್ಮಿಕರಿಗೆ ಮತ್ತು ಖಾಯಂ ಪೌರಕಾರ್ಮಿಕರಿಗೆ ಸಲಕರಣೆಗಳನ್ನು ನೀಡಲು ನೆಪ ಮಾತ್ರಕ್ಕೆ ಕಾರ್ಯಾದೇಶವನ್ನು ನೀಡಿ ಪೌರಕಾರ್ಮಿಕರ ರಕ್ಷಣೆಗೆ ನೀಡಬೇಕಾದ ಸಲಕರಣೆಗಳನ್ನೂ ನೀಡದೆ ಬೋಗಸ್ ಬಿಲ್‍ಗಳನ್ನು ನೀಡಿರುತ್ತಾರೆ ಎಂದು ಆರೋಪಿಸಿದರು.

ಆಟೋ ಟಿಪ್ಪರ್ ಕಾಂಪ್ಯಾಕ್ಟರ್ ಗಳ ಆರ್.ಎಫ್.ಐ.ಡಿ ಕಾರ್ಡ್ ಕೇಂದ್ರ ಕಚೇರಿಯಿಂದಲೇ ಜಿ.ಪಿ.ಎಸ್ ಟ್ರಾಕಿಂಗ್ ಆಧರಿಸಿ ಮುಖ್ಯ ಲೆಕ್ಕಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳು ಹಣ ನಿಗದಿ ಮಾಡಬೇಕಾಗಿರುವುದು ಸರಿ. ಆದರೆ ಪಾಲಿಕೆಯ ವಿಶೇಷ ಆಯುಕ್ತ ರಂದೀಪ್ ಹಾಗೂ ಇತರರು ನಿಯಮಾವಳಿಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಹಣ ಮಂಜೂರು ಮಾಡಿರುವುದು ಕಂಡುಬಂದಿರುತ್ತದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News