ರೈತರು ತಿಳಿದಿರಬೇಕಾದ ಕಾರ್ಪೊರೇಟ್ ವ್ಯಾಪಾರದ ಹೆಜ್ಜೆ ಹಾದಿಗಳು

Update: 2020-10-01 19:30 GMT

ನೆನಪಿಡಿ, ಇದು ಆರಂಭವಾದ ಒಂದು ವರ್ಷದವರೆಗೂ ರೈತರಿಗೆ ಲಾಭವಾದ ಸುದ್ದಿಗಳೇ ಮೀಡಿಯಾಗಳಲ್ಲಿ ಉರುಳಾಡುತ್ತಿರುತ್ತವೆ. ರೈತರಿಗೂ ಈ ಭ್ರಮೆ ಹುಟ್ಟುತ್ತದೆ. ಈಗ ಆತಂಕ ವ್ಯಕ್ತಪಡಿಸಿದವರ ಆತಂಕಗಳೆಲ್ಲಾ ಸುಳ್ಳು ಎಂದು ರೈತರೇ ಸೋಟೆ ತಿವಿವ ಮಟ್ಟಿಗೆ ಮಾರುಕಟ್ಟೆ ತೇಲುತ್ತಿರುತ್ತದೆ.
ಸಾವಿರಾರು ಕೋಟಿ ಹೂಡಿಕೆ ಮಾಡುವ ಕಂಪೆನಿ ಭ್ರಮಾತ್ಮಕ ವಿಶ್ವಾಸ ಕುದುರಿಸಲು ವರ್ಷಕ್ಕೆ ಒಂದೋ ಎರಡೋ ಸಾವಿರ ಕೋಟಿ ನಷ್ಟ ಮಾಡಿಕೊಳ್ಳಲು ತಯಾರಾಗಿರುತ್ತದೆ. ಆಟ ಶುರುವಾಗುವುದು ಎರಡುವರ್ಷ ಕಳೆದ ಮೇಲೆ.


ಎ.ಪಿ.ಎಂ.ಸಿ. ತಿದ್ದುಪಡಿ, ಕರಾರು ಕೃಷಿ ಮತ್ತು ಅವಶ್ಯಕ ವಸ್ತುಗಳ ಕಾಯ್ದೆ ತಿದ್ದುಪಡಿಯೊಂದಿಗೆ ಭೂಸುಧಾರಣಾ ಕಾಯ್ದೆ ತಿದ್ದುಪಡಿ- ಈ ನಾಲ್ಕರಲ್ಲಿ ಒಂದು ಇಲ್ಲದಿದ್ದರೂ ದೊಡ್ಡ ಪ್ರಮಾಣದ ವ್ಯಾಪಾರ ಸುಸೂತ್ರವಾಗಿ ನಡೆಯುವುದಿಲ್ಲ. ಇದು ಕಾರಿನ ನಾಲ್ಕು ಚಕ್ರಗಳ ಹಾಗೆ; ಒಂದು ಪಂಕ್ಚರ್ ಆಗಿದ್ದರೂ ಶೇ. 75 ಸರಿ ಇದೆ ಎಂದು ವಾದಿಸಿ ಗಾಡಿ ಓಡಿಸಲಾಗುವುದಿಲ್ಲ.!!
ಕಾರ್ಪೊರೇಟ್‌ಗಳು ಈ ಮೊದಲು ಎಫ್.ಎಂ.ಜಿ. ಕೆಟಗರಿಯ ಮಾರಾಟದಲ್ಲಿ ದಂಡಿ ಲಾಭ ಗಳಿಸುತ್ತಿದ್ದವು ( ಎಫ್.ಎಂ.ಜಿ. ಅಂದರೆ ಸೋಪು, ಕ್ರೀಮು ಇತ್ಯಾದಿ). ಇದರಲ್ಲಿ ಉತ್ಪಾದಕ ವೆಚ್ಚದ ಹತ್ತು ಪಟ್ಟು ಬೆಲೆಗೆ ಮಾರಿ ಲಾಭ ಮಾಡುತ್ತಿದ್ದವು. ಗ್ರಾಹಕ ಗೊಣಗದಂತೆ 2-5 ರೂಪಾಯಿ ಪ್ಯಾಕೇಟು ಮಾಡಿ ಮಾರುವ ತಂತ್ರವೂ ರೂಢಿಯಲ್ಲಿದೆ.
ಈ ಮೋದಿ ಮತ್ತು ಕೊರೋನ ಸೇರಿ ನಮ್ಮ ಆರ್ಥಿಕತೆಯ ಸೊಂಟ ಮುರಿದ ಮೇಲೆ ಜನ ಪ್ರಾಥಮಿಕ ಖರ್ಚು ಮಾತ್ರ, ಅಂದರೆ ಆಹಾರಕ್ಕೆ ಮಾತ್ರ ವೆಚ್ಚ ಮಾಡುತ್ತಿದ್ದಾರೆ ಎಂದು ವಿವಿಧ ಸರ್ವೇಗಳು ಹೇಳಿವೆ. ಎಫ್.ಎಂ.ಜಿ. ಮಾಲುಗಳಿಗೆ ಕೂಡಾ ವೆಚ್ಚ ಮಾಡಲು ಜನರು ಹಿಂದೆ ಮುಂದೆ ನೋಡುವ ಪ್ರವೃತ್ತಿ ಈಗಾಗಲೇ ಆಳಕ್ಕಿಳಿದಿದೆ. ಆದ್ದರಿಂದಲೇ ಕಂಪೆನಿಗಳು ಎಫ್.ಎಂ.ಜಿ. ಗಾಡಿ ಬಿಟ್ಟು ಆಹಾರ ಸರಕು ವ್ಯವಹಾರಕ್ಕೆ ಇಳಿಯುತ್ತಿವೆ. ಇದರ ಅರ್ಥ ನಮ್ಮ ಇಕಾನಮಿ ಇನ್ನು ಮೂರು ವರ್ಷವಾದರೂ ತೆವಳುತ್ತದೇ ವಿನಃ ಕುಂಟಿ ನಡೆಯುವುದೂ ಕಷ್ಟ.

1. ಈ ವ್ಯವಹಾರಕ್ಕೆ ಕಾರ್ಪೊರೇಟ್‌ಗಳು ಉತ್ಸಾಹ ತೋರಿರುವುದು ಈ ಕೊರೋನ ಅಥವಾ ಮೋದಿ ಕಷ್ಟಪಟ್ಟು ಸಾಧಿಸಿದ ಆರ್ಥಿಕ ಕುಸಿತದ ಕಾರಣಕ್ಕೇ ಎಂದು ಭಾವಿಸಬಾರದು. ಈ ಹುನ್ನಾರ/ ಪ್ರಯತ್ನ 10 ವರ್ಷ ಮೊದಲೇ ಶುರುವಾಗಿತ್ತು. ಯು.ಪಿ.ಎ. ಕಾಲದಿಂದಲೂ ಈ ಸಂಬಂಧ ರೋಡ್‌ಕ್ಲಿಯರ್ ಮಾಡುವ ಒತ್ತಡ ಇತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. 2014ರ ಬಳಿಕವಂತೂ ಈ ಕಾರ್ಪೊರೇಟ್ ಶಕ್ತಿಗಳು ತೀರಾ ರೆಸ್ಟ್‌ಲೆಸ್ ಆಗತೊಡಗಿದವು. ಮೋದಿ ಈ ಶಕ್ತಿಗಳಿಗೆ ಕೊಟ್ಟ ಭರವಸೆಯನ್ನು ಎರಡನೇ ಬಾರಿ ಗೆದ್ದಾಗಲೂ ಈಡೇರಿಸಿಲ್ಲ ಎಂಬ ಸಂದೇಶವು ತಲುಪಿ ಈ ಕೊರೋನ ಕಾಲದಲ್ಲಿ ಜಾರಿಯಾಗಿದೆ.

2. ಆಹಾರ ಸರಕು ವ್ಯಾಪಾರಕ್ಕೆ ಇಳಿಯುವಾಗ (ಅ)ಮುಕ್ತ ಕೊಳ್ಳುವ ಸ್ವಾತಂತ್ರ್ಯ, (ಆ)ತನಗೆ ಬೇಕಾದಂತೆ ಬೆಳೆಯುವ ಸ್ವಾತಂತ್ರ್ಯ, (ಇ)ದಾಸ್ತಾನು ಸ್ವಾತಂತ್ರ್ಯ ಮತ್ತು (ಈ)ಬೆಲೆ ನಿಗದಿ ಮಾಡುವ ಸ್ವಾತಂತ್ರ್ಯ ಇವಿಷ್ಟನ್ನೂ ಕಾರ್ಪೊರೇಟ್‌ಗಳಿಗೆ ಖಾತರಿಪಡಿಸಲು ಈ ತಿದ್ದುಪಡಿಗಳನ್ನು ತರಲಾಗಿದೆ ಎಂಬ ಬಗ್ಗೆ ಯಾವ ಶಂಕೆಯೂ ಬೇಡ. ಇದರಿಂದಾಗಿ ಆಹಾರ ಸರಕುಗಳ ಬೆಲೆ ಗಗನಕ್ಕೇರುತ್ತದೆ ಎಂಬಿತ್ಯಾದಿ ಮಾತುಗಳೂ ಇವೆ. ಹಾಗೇನೂ ಆಗುವುದಿಲ್ಲ. ಗ್ರಾಹಕನನ್ನು ಸುಳ್ಳೇ ಸಂಪ್ರೀತಿಗೊಳಿಸದೇ ಕಾರ್ಪೊರೇಟ್ ಕೂಡಾ ವ್ಯವಹಾರ ಮಾಡಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಪೊರೇಟ್ ಈ ವ್ಯಾಪಾರವನ್ನು ಹೇಗೆ ಮಾಡುತ್ತದೆ ಎಂಬುದನ್ನು ಅರಿತುಕೊಳ್ಳಬೇಕಾಗಿದೆ.

ಮೂಲ ಉತ್ಪಾದಕರಿಂದ ಕೊಳ್ಳುವ ಬಗೆ: 
1. ಆಹಾರ ಸರಕನ್ನು ರೈತರಿಂದ ಕೊಳ್ಳುವಾಗ ಈ ಕಾನೂನು ತರುವ ಮೊದಲು ಎ.ಪಿ.ಎಂ.ಸಿ.ಯಲ್ಲಿ ನಿಗದಿತ ಸೂಚಿ ಬೆಲೆ ಮತ್ತು ತೆರಿಗೆ ಇತ್ತು. ಈಗ ಅದು ಯಾವುದೂ ಇಲ್ಲ. ಕಾರ್ಪೊರೇಟ್ ರೈತರಿಂದ ಮಂಡಿಯಲ್ಲಿ ಕೊಳ್ಳುತ್ತದೆ. ಹೀಗೆ ಕೊಳ್ಳುವಾಗ ರೈತರ ಎಲ್ಲಾ ಉತ್ಪನ್ನಗಳನ್ನೂ ಕೊಳ್ಳುವ ಆದೇಶ ಎಲ್ಲೂ ಇಲ್ಲ. ತಾನು ನಿಗದಿ ಪಡಿಸಿದ ಮಾನದಂಡ, ಗ್ರೇಡ್ ಮತ್ತು ಕ್ವಾಲಿಟಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮಾಲನ್ನು ತನಗೆ ಬೇಕಾದ ಪ್ರಮಾಣದಲ್ಲಿ ಮಾತ್ರ ಖರೀದಿಸುತ್ತದೆ. ಉಳಿಕೆಯನ್ನು ರೈತ ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ.

2. ಹೀಗೆ ಕೊಳ್ಳುವಾಗ ಕಂಪೆನಿ ನೇರವಾಗಿ ಖರೀದಿಗೆ ಬರಬೇಕೆಂದಿಲ್ಲ. ಇದನ್ನು ಸಂಗ್ರಹಿಸಿ ಕೊಡುವ ಏಜೆಂಟರನ್ನು ನೇಮಿಸಬಹುದು. ಈ ಸಂಗ್ರಾಹಕರಿಗೆ ಹೊಸ ಕಾಯ್ದೆಯಲ್ಲಿ ಅಧಿಕೃತತೆ ಇದೆ. ಈಗ ಎ.ಪಿ.ಎಂ.ಸಿ. ಯಲ್ಲಿರುವ ವ್ಯಾಪಾರಿಗಳೂ ಈ ರೀತಿಯ ಏಜೆಂಟರೇ!! ಅನುಭವದ ಆಧಾರದ ಮೇರೆಗೆ ಅವರೇ ಹೊಸ ಹುದ್ದೆಗೆ ನೇಮಕವಾಗುತ್ತಾರೆ!!

3. ಇದರೊಂದಿಗೆ ತನಗೆ ಬೇಕಾದ ಬೆಳೆಯನ್ನು ತನ್ನ ನಿರ್ದಿಷ್ಟತೆಗೆ ತಕ್ಕಂತೆ ಬೆಳೆಯುವ ಕರಾರು ಕೃಷಿಯಲ್ಲೂ ಸ್ಥಳ ಭೇಟಿಯಲ್ಲಿ ಬೆಳೆಯು ತನ್ನ ಮಾನದಂಡಕ್ಕನುಗುಣವಾಗಿ ಇಲ್ಲದಿದ್ದರೆ ತಿರಸ್ಕರಿಸುವ ಹಕ್ಕು ಈ ಕಂಪೆನಿಗಳಿಗಿರುತ್ತವೆ. ಹೀಗೆ ಗರ್ಕಿನ್ ಬೆಳೆದು ಒದ್ದಾಡಿದ ರೈತರನ್ನು ನಾನು ಬಲ್ಲೆ. ಕಂಪೆನಿ ವಸ್ತು ರೂಪದಲ್ಲಿ ನೀಡಿದ ಒಳಸುರಿ ವೆಚ್ಚವನ್ನು ರೈತನಿಂದ ವಸೂಲಿ ಮಾಡಿಯೇ ಮಾಡುತ್ತದೆ. ಅದನ್ನು ಕಳೆದು ಉಳಿಕೆಯನ್ನಷ್ಟೇ ಪಾವತಿಸುತ್ತದೆ. ಬೆಳೆಯ ಗುಣಮಟ್ಟ ಕಂಪೆನಿಯ ಮಾನದಂಡಕ್ಕನುಗುಣವಾಗಿ ಇಲ್ಲದಿದ್ದರೆ ತನಗೆ ಬರಬೇಕಾಗಿರುವ ಒಳಸುರಿ ವೆಚ್ಚ ವಸೂಲಿಗೆ ಕಂಪೆನಿ ದಾವೆ ದಾಖಲಿಸಬಹುದು! ಈ ಮೊತ್ತ ವಸೂಲಿಗೆ ಜಮೀನನ್ನೂ ವಶಪಡಿಸಿಕೊಳ್ಳಬಹುದು!

4. ಗಮನಿಸಬೇಕಾದ್ದು, ಈ ವ್ಯಾಜ್ಯ ಇತ್ಯರ್ಥದ ಸಂಗತಿಯಲ್ಲಿ ನ್ಯಾಯಾಲಯಕ್ಕೆ ಹೋಗುವಂತಿಲ್ಲ. ಏನಿದ್ದರೂ ಅರೆ ನ್ಯಾಯಾಧಿಕರಣದ ಅಧಿಕಾರ ವುಳ್ಳ ಅಧಿಕಾರಿ ವರ್ಗದ ನ್ಯಾಯಾಲಯವೇ ದೂರು ಸಲ್ಲಿಕೆಗಿರುವ ವೇದಿಕೆ.

 ಕೃಷಿ ಉತ್ಪನ್ನ ಕೊಂಡ ಬಳಿಕ:
1. ಈ ಕಾರ್ಪೊರೇಟ್‌ಗಳು ಉತ್ಪಾದಕನಿಂದ ಗ್ರಾಹಕನ ವರೆಗಿನ ಸರಪಳಿಯನ್ನು ಸ್ವತಃ ಹೊಂದಿರುತ್ತವೆ. ಆದ್ದರಿಂದ ತನಗೆ ಬೇಕಾದ ಗುಣಮಟ್ಟದ ಸರಕನ್ನು ಪಡೆದ ಬಳಿಕ ಸಾಗಣೆಯನ್ನೂ, ಅದನ್ನು ಕಾಪಿಡುವ ವ್ಯವಸ್ಥೆಯನ್ನೂ ಮಾಡುತ್ತದೆ. ಅವಶ್ಯ ವಸ್ತುಗಳ ಕಾಯ್ದೆ ತಿದ್ದುಪಡಿ ಮೂಲಕ ಈಗ ಈ ಕಂಪೆನಿಗಳು ಎಷ್ಟು ಬೇಕಾದರೂ ದಾಸ್ತಾನು ಮಾಡಬಹುದು.

2. ಖರೀದಿಸಿದ ಆಹಾರ ಸರಕಿಗೆ ಬೇಕಾದ ಮೌಲ್ಯವರ್ಧನೆಯನ್ನೂ ತನ್ನ ನಿಯಂತ್ರಣದಲ್ಲಿ ಮಾಡುತ್ತದೆ. ಆದರೆ ಬಹುತೇಕ ಕಾಳಿನಿಂದ ಬೇಳೆ, ಕಾಳಿನಿಂದ ಎಣ್ಣೆ ಮುಂತಾದ ಎರಡೇ ಹಂತಗಳ ಸರಳ ಮೌಲ್ಯವರ್ಧನೆಯನ್ನು ಸ್ಥಳೀಯ ಉದ್ಯಮಿಗಳಿಂದ ಮಾಡಿಸುತ್ತದೆ. ಮೌಲ್ಯವರ್ಧನೆ ಅವರದ್ದು; ಬ್ರಾಂಡ್ ಕಂಪೆನಿಯದ್ದು. 3. ಇದರಲ್ಲಿ ಇನ್ನೊಂದು ಅನುಕೂಲವಿದೆ. ಗ್ರಾಹಕನು ಉತ್ಪನ್ನದ ಗುಣಮಟ್ಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೆ ತಯಾರು ಮಾಡಿಕೊಟ್ಟ ಸ್ಥಳೀಯ ಉದ್ಯಮಿಯ ವಿಳಾಸ ಕೊಟ್ಟು ತಾನು ಪಾರಾಗುತ್ತದೆ. ಔಷಧಿಗಳ ಪ್ಯಾಕೇಟಿನಲ್ಲಿ, ಇತರ ಆಹಾರೋತ್ಪನ್ನಗಳ ಪ್ಯಾಕೇಟಿನಲ್ಲಿ produced by----- Marketed by ಅಂತ ಇರುತ್ತದೆ.

ಗ್ರಾಹಕನಿಗೆ ತಲುಪಿಸುವ ಬಗೆ:  

1. ಗ್ರಾಹಕನಿಗೆ ಈ ವಸ್ತುಗಳನ್ನು ಬಹುತೇಕ ಬ್ರಾಂಡ್ ಮಾಡಿ ತನ್ನದೇ ಅಂಗಡಿಗಳ ಮೂಲಕ ಮಾರುತ್ತದೆ. ಕೆಲವೊಮ್ಮೆ ಚಿಲ್ಲರೆ ಮಾರಾಟಗಾರರಿಗೆ ಮಾರಲು ನೀಡಬಹುದು
2. ಗ್ರಾಹಕರಿಗೆ ಸೀಸನಲ್ ಆದ ಬೆಲೆ ಏರಿಕೆ /ಕಡಿತ/ ಹೆಚ್ಚುವರಿ ಮಾಲು ನೀಡುವ ತಂತ್ರಗಳ ಮೂಲಕ ಗ್ರಾಹಕನನ್ನು ಸದಾ ನಿಷ್ಠವಾಗಿರುವಂತೆ ನೋಡಿಕೊಳ್ಳುತ್ತದೆ. ಇದಕ್ಕಾಗಿ ಆಕರ್ಷಕ ಜಾಹೀರಾತು ಕೂಡಾ ಇರುತ್ತದೆ.
3. ಗ್ರಾಹಕನಿಗೆ ಮೂಲ ಉತ್ಪನ್ನದ ವಿವಿಧ ವಸ್ತುಗಳನ್ನು ಮುಂದಿರಿಸಿ ಆಯ್ಕೆಗಳಿರುವಂತೆ ನೋಡಿಕೊಳ್ಳಲಾಗುತ್ತದೆ.

ಆರ್ಥಿಕತೆಯ ಮೇಲಿನ ಹಿಡಿತ ಹೇಗೆ?
1. ಒಂದೊಂದು ಪೈಸೆ ಮೂಲಕವೇ ಸಾವಿರಾರು ಕೋಟಿ ಗಳಿಸಬಹುದೆಂದು ಮೊಬೈಲ್ ಡೇಟಾ ತೋರಿಸಿಕೊಟ್ಟಿದೆ. ಇದೇ ತತ್ವ ಆಹಾರ ಉತ್ಪನ್ನಗಳ ಮಾರುಕಟ್ಟೆಯಲ್ಲೂ ಇದೆ. ಗ್ರಾಹಕನನ್ನೇ ಅಂತಿಮ ಗುರಿಯಾಗಿಟ್ಟುಕೊಳ್ಳುವ ಕಾರಣ ಉತ್ಪಾದಕನನ್ನು ಪೋಷಿಸಬೇಕಾದ ಅಗತ್ಯ ಯಾವ ಕಂಪೆನಿಗೂ ಇಲ್ಲ.

2. ಆದರೆ ಸರಕಾರದ ರಕ್ಷಾ ಕವಚ ಇಲ್ಲದಾಗ ಉತ್ಪಾದಕ ಅಂದರೆ ರೈತ ಸಂಪೂರ್ಣ ಕಂಪೆನಿಯ ಹಂಗಿಗೆ ಒಳಗಾಗುತ್ತಾನೆ.

3. ಇನ್ನೊಂದೆಡೆ ಗ್ರಾಹಕರನ್ನು ತನ್ನ ಬೆಂಬಲಕ್ಕೆ ಇಟ್ಟುಕೊಳ್ಳುತ್ತದೆ. ಜಾಹೀರಾತು ಇತ್ಯಾದಿ ಮೂಲಕ ಮಾಧ್ಯಮಗಳೂ ಕಂಪೆನಿಗಳ ಹತೋಟಿಯಲ್ಲಿರುತ್ತವೆ. ರೈತರ ಪಾಡಿನ ಕಥೆ-ವ್ಯಥೆಗಳು ಮತ್ತೆ ಅಂಚಿಗೆ ಸರಿಯುತ್ತವೆ.

ಮುಂದೇನು?
ನೆನಪಿಡಿ, ಇದು ಆರಂಭವಾದ ಒಂದು ವರ್ಷದವರೆಗೂ ರೈತರಿಗೆ ಲಾಭವಾದ ಸುದ್ದಿಗಳೇ ಮೀಡಿಯಾಗಳಲ್ಲಿ ಉರುಳಾಡುತ್ತಿರುತ್ತವೆ. ರೈತರಿಗೂ ಈ ಭ್ರಮೆ ಹುಟ್ಟುತ್ತದೆ. ಈಗ ಆತಂಕ ವ್ಯಕ್ತಪಡಿಸಿದವರ ಆತಂಕಗಳೆಲ್ಲಾ ಸುಳ್ಳು ಎಂದು ರೈತರೇ ಸೋಟೆ ತಿವಿವ ಮಟ್ಟಿಗೆ ಮಾರುಕಟ್ಟೆ ತೇಲುತ್ತಿರುತ್ತದೆ.
 
ಸಾವಿರಾರು ಕೋಟಿ ಹೂಡಿಕೆ ಮಾಡುವ ಕಂಪೆನಿ ಭ್ರಮಾತ್ಮಕ ವಿಶ್ವಾಸ ಕುದುರಿಸಲು ವರ್ಷಕ್ಕೆ ಒಂದೋ ಎರಡೋ ಸಾವಿರ ಕೋಟಿ ನಷ್ಟ ಮಾಡಿಕೊಳ್ಳಲು ತಯಾರಾಗಿರುತ್ತದೆ. ಆಟ ಶುರುವಾಗುವುದು ಎರಡುವರ್ಷ ಕಳೆದ ಮೇಲೆ.

Writer - ಕೆ.ಪಿ. ಸುರೇಶ

contributor

Editor - ಕೆ.ಪಿ. ಸುರೇಶ

contributor

Similar News