ಬೆಂಗಳೂರು: ಆದಿತ್ಯನಾಥ ಸರಕಾರ ವಜಾಗೊಳಿಸಲು ಒತ್ತಾಯಿಸಿ ದಸಂಸ ಧರಣಿ

Update: 2020-10-02 18:10 GMT

ಬೆಂಗಳೂರು, ಅ.2: ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳ ಪರವಾದ ನೀತಿಗಳನ್ನು ಅನುಸರಿಸುತ್ತಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರಕಾರವನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ನಗರದಲ್ಲಿ ಧರಣಿ ನಡೆಸಿತು.

ಉತ್ತರ ಪ್ರದೇಶದಲ್ಲಿ ದಲಿತ ಯುವತಿಯರ ಮೇಲೆ ನಿರಂತರವಾಗಿ ಅತ್ಯಾಚಾರ, ಹಲ್ಲೆ ಪ್ರಕರಣಗಳು ವರದಿ ಆಗುತ್ತಲೇ ಇದೆ. ಆದರೂ ಈ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ದುಷ್ಕರ್ಮಿಗಳು ಉತ್ತರಪ್ರದೇಶದ ಹತ್ರಾಸ್‍ನಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರ ಮಾಡಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಯುವತಿ ಚಿಕಿತ್ಸೆ ಫಲಕಾರಿಯಾಗದೆ ದೆಹಲಿಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಆ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಒಪ್ಪಿಸದೆ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಮಧ್ಯರಾತ್ರಿ ಮೃತದೇಹವನ್ನು ಸುಟ್ಟು ಹಾಕಿದ್ದಾರೆ. ಇದೆಲ್ಲವೂ ಅಲ್ಲಿನ ಬಿಜೆಪಿ ಜನಪ್ರತಿನಿಧಿಗಳ ನೇತೃತ್ವದಲ್ಲಿ ನಡೆದಿದೆ ಎಂದು ಡಿಎಸ್ಸೆಸ್ ಮುಖಂಡ ಡಾ.ಸಿ.ಎಸ್.ರಘು ಆರೋಪಿಸಿದ್ದಾರೆ

ಕೇಂದ್ರ ಸರಕಾರ ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿರುವ ಉತ್ತರ ಪ್ರದೇಶದ ಬಿಜೆಪಿ ಸರಕಾರವನ್ನು ವಜಾಗೊಳಿಸಿ, ಪ್ರಕರಣದಲ್ಲಿ ಭಾಗಿಗಳಾಗಿರುವ ಅಲ್ಲಿನ ಉನ್ನತ ಅಧಿಕಾರಿಗಳು, ರಾಜಕಾರಣಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ರಾಷ್ಟ್ರಪತಿಗಳಿಗೆ ಮನವಿ ಮಾಡಲಾಗುವುದೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News