ಬೆಂಗಳೂರು: ಎಟಿಎಂ ಯಂತ್ರ ಕತ್ತರಿಸಿ 11 ಲಕ್ಷ ರೂ. ದರೋಡೆ

Update: 2020-10-02 16:16 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.2: ಎಟಿಎಂ ಕೇಂದ್ರಕ್ಕೆ ನುಗ್ಗಿದ ದುಷ್ಕರ್ಮಿಗಳ ತಂಡವೊಂದು ಗ್ಯಾಸ್ ಕಟರ್ ನಿಂದ ಎಟಿಎಂ ಯಂತ್ರ ಕತ್ತರಿಸಿ ಹನ್ನೊಂದು ಲಕ್ಷ ರೂ. ದೋಚಿ ಪರಾರಿಯಾಗಿರುವ ಘಟನೆ ಕೆ.ಆರ್.ಪುರಂ ವ್ಯಾಪ್ತಿಯ ಭಟ್ಟರಹಳ್ಳಿಯ ಬಸವಪುರ ಮುಖ್ಯರಸ್ತೆಯಲ್ಲಿರುವ ಆಕ್ಸಿಸ್ ಬ್ಯಾಂಕ್‍ನ ಎಟಿಎಂ ಕೇಂದ್ರದಲ್ಲಿ ನಡೆದಿದೆ. 

ಶುಕ್ರವಾರ ಬೆಳಗ್ಗೆ 6.30ರಲ್ಲಿ ವ್ಯಕ್ತಿಯೊಬ್ಬರು ಹಣ ಪಡೆಯಲು ಎಟಿಎಂ ಕೇಂದ್ರಕ್ಕೆ ಹೋಗಿದ್ದರು. ಈ ವೇಳೆ ದರೋಡೆ ನಡೆದಿರುವುದು ಗೊತ್ತಾಗಿ ಪೊಲೀಸರಿಗೆ ಕರೆ ಮಾಡಿ ದೂರು ಮುಟ್ಟಿಸಿದ್ದರು.

ನಿಯಂತ್ರಣ ಕೊಠಡಿಯಿಂದ ಬಂದ ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಬೆರಳಚ್ಚು ತಂತ್ರಜ್ಞರು ಹಾಗೂ ಶ್ವಾನದಳದಿಂದ ಮಾಹಿತಿ ಸಂಗ್ರಹಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಕೆ.ಆರ್.ಪುರ. ಠಾಣೆ ಪೊಲೀಸರು ತಿಳಿಸಿದ್ದಾರೆ.

ದುಷ್ಕರ್ಮಿಗಳು ಎಟಿಎಂ ಕೇಂದ್ರಕ್ಕೆ ನುಗ್ಗಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದಾದ ಬಳಿಕ ಸಿಸಿ ಕ್ಯಾಮರಾಗೆ ಬಣ್ಣ ಬಳಿದಿದ್ದು, ಕೃತ್ಯದ ದೃಶ್ಯ ಸೆರೆಯಾಗಿಲ್ಲ. ಗ್ಯಾಸ್ ಕಟ್ಟರ್ ಬಳಸಿ ಯಂತ್ರ ಕತ್ತರಿಸಿ, ಹಣ ದೋಚಿ ಪರಾರಿಯಾಗಿದ್ದಾರೆ. ನಾಲ್ಕು ತಿಂಗಳ ಹಿಂದೆ ಎಟಿಎಂ ಕೇಂದ್ರ ಆರಂಭವಾಗಿದ್ದು, ಭದ್ರತಾ ಸಿಬ್ಬಂದಿ ಇರಲಿಲ್ಲ. ಇದನ್ನು ಗಮನಿಸಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News