ಹೊರರಾಜ್ಯದಿಂದ ಹೆರಾಯಿನ್ ತಂದು ಮಾರಾಟ ಮಾಡುತ್ತಿದ್ದ ಆರೋಪ: ಇಬ್ಬರ ಬಂಧನ

Update: 2020-10-02 16:26 GMT

ಬೆಂಗಳೂರು, ಅ.2: ಹೊರರಾಜ್ಯದಿಂದ ಮಾದಕವಸ್ತು ಹೆರಾಯಿನ್ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಶಿವಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮುಹಮ್ಮದ್ ಸಿಕಂದರ್(27) ಮತ್ತು ಮುಜಾಯಿದ್ ಪಾಷಾ(21) ಎಂದು ಗುರುತಿಸಲಾಗಿದೆ. ಪೊಲೀಸರು ಬಂಧಿತರಿಂದ 80 ಸಾವಿರ ರೂ. ಮೌಲ್ಯದ 26.55 ಗ್ರಾಂ ಹೆರಾಯಿನ್ ಜಪ್ತಿ ಮಾಡಿದ್ದಾರೆ.

ಮುಹಮ್ಮದ್ ಸಿಕಂದರ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ. ಮುಜಾಯಿದ್ ಪಾಷಾ ಕಾರು ಚಾಲಕನಾಗಿದ್ದ. ಇಬ್ಬರೂ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಮಾದಕ ವಸ್ತು ಮಾರಾಟ ಮಾಡಿದರೆ ಸುಲಭವಾಗಿ ಹಣ ಸಂಪಾದಿಸಬಹುದು ಎಂದು ಯೋಚಿಸಿ ದಂಧೆಯಲ್ಲಿ ತೊಡಗಿದ್ದರು . ಡ್ರಗ್ಸ್ ಸೇವಿಸುತ್ತಿದ್ದಾಗ ಪರಿಚಯವಾಗಿದ್ದ ವ್ಯಕ್ತಿಯಿಂದ, ಮುಂಬೈನಲ್ಲಿ ಹೆರಾಯಿನ್ ಖರೀದಿಸಿ ತರುತ್ತಿದ್ದರು. ಪರಿಚಿತರಿಗೆ ಮಾರಾಟ ಮಾಡುತ್ತಿದ್ದರು. ಗುರುವಾರ ರಾತ್ರಿ ತಿಮ್ಮಯ್ಯ ರಸ್ತೆಯಲ್ಲಿರುವ ಶಾಲೆಯೊಂದರ ಬಳಿ ಮಾರಾಟಕ್ಕೆ ಯತ್ನಿಸಿದ್ದರು. ಈ ಕುರಿತು ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಸಿಕ್ಕಿ ಬಿದ್ದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News