ಅಧಿಕ ರಕ್ತದೊತ್ತಡ ಕುರಿತ ಈ ಮಾಹಿತಿಗಳು ನಿಮಗೆ ಗೊತ್ತಿಲ್ಲದಿರಬಹುದು

Update: 2020-10-02 18:56 GMT

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸದಿದ್ದರೆ ಅದು ಹೃದ್ರೋಗಗಳು,ಪಾರ್ಶ್ವವಾಯು,ಮೂತ್ರಪಿಂಡಕ್ಕೆ ಹಾನಿ,ಅಂಧತ್ವ ಮತ್ತು ಹೃದಯ ವೈಫಲ್ಯಕ್ಕೆ ತುತ್ತಾಗುವ ಅಪಾಯಗಳನ್ನು ಹೆಚ್ಚಿಸುತ್ತದೆ. ವಾಸ್ತವದಲ್ಲಿ ಅಧಿಕ ರಕ್ತದೊತ್ತಡವು ಹೃದ್ರೋಗ ಮತ್ತು ಪಾರ್ಶ್ವವಾಯುವಿಗೆ ಪ್ರಮುಖ ಕಾರಣವಾಗಿದೆ.

ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಅಥವಾ ಸೂಕ್ತ ಔಷಧಿಗಳ ಸೇವನೆಯಿಂದ ಅಥವಾ ಇವೆರಡರ ಸಂಯೋಜನೆಯ ಮೂಲಕ ಅಧಿಕ ರಕ್ತದೊತ್ತಡವನ್ನು ನಿಭಾಯಿಸಬಹುದಾಗಿದೆ. ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆಯುತ್ತಿರುವ ಹೆಚ್ಚಿನ ಜನರು ತಮ್ಮ ರಕ್ತದೊತ್ತಡ (ಬಿಪಿ) ನಿಯಂತ್ರಣದಲ್ಲಿದೆ ಮತ್ತು ತಾವು ಈಗ ಚೆನ್ನಾಗಿದ್ದೇವೆ ಎಂಬ ಕಾರಣಕ್ಕೆ ಔಷಧಿಗಳ ಸೇವನೆಯನ್ನು ನಿಲ್ಲಿಸುತ್ತಾರೆ ಅಥವಾ ವೈದ್ಯರು ಶಿಫಾರಸು ಮಾಡಿದ ಜೀವನಶೈಲಿ ಬದಲಾವಣೆಗಳನ್ನು ಮರೆಯುತ್ತಾರೆ ಎನ್ನುವುದು ಪ್ರಮುಖ ಸಮಸ್ಯೆಯಾಗಿದೆ.

ಔಷಧಿಗಳ ಸೇವನೆ ಮತ್ತು ಜೀವನಶೈಲಿ ಬದಲಾವಣೆಗಳಿಂದಾಗಿ ರಕ್ತದೊತ್ತಡ ಮಟ್ಟವು ನಿಯಂತ್ರಣದಲ್ಲಿರುತ್ತದೆ ಎನ್ನುವುದು ಗಮನಿಸಬೇಕಾದ ಅಂಶವಾಗಿದೆ. ಇವುಗಳನ್ನು ನಿಲ್ಲಿಸುವುದರಿಂದ ರಕ್ತದೊತ್ತಡ ಮತ್ತೆ ಅಧಿಕಗೊಳ್ಳಬಹುದು. ಹೀಗಾಗಿ ಅಧಿಕ ರಕ್ತದೊತ್ತಡ ರೋಗಿಗಳು ಔಷಧಿ ಸೇವನೆಯನ್ನು ಎಂದೂ ನಿಲ್ಲಿಸಬಾರದು ಮತ್ತು ಜೀವನಶೈಲಿಯಲ್ಲಿ ಮಾಡಿಕೊಂಡ ಬದಲಾವಣೆಗಳನ್ನು ಪ್ರಾಮಾಣಿಕವಾಗಿ ಅನುಸರಿಸಬೇಕು.

ಅಧಿಕ ರಕ್ತದೊತ್ತಡ ಕುರಿತು ಹೆಚ್ಚಿನವರಿಗೆ ಗೊತ್ತಿಲ್ಲದ ವಿಷಯಗಳು ಮತ್ತು ಅದು ಹೃದಯದಂತಹ ಪ್ರಮುಖ ಅಂಗಗಳಿಗೆ ಹೇಗೆ ಹಾನಿಯನ್ನುಂಟು ಮಾಡುತ್ತದೆ ಎನ್ನುವ ಬಗ್ಗೆ ಮಾಹಿತಿಗಳಿಲ್ಲಿವೆ......

 * ಯುವಜನರೂ ಅಧಿಕ ಬಿಪಿಗೆ ತುತ್ತಾಗುತ್ತಾರೆ

ಭಾರತದಲ್ಲಿ ಪ್ರತಿ ಐವರು ಯುವಜನರಲ್ಲಿ ಒಬ್ಬರಿಗೆ ಅಧಿಕ ಬಿಪಿ ಸಮಸ್ಯೆಯಿದೆ ಎಂದು 2018ರಲ್ಲಿ ನಡೆಸಲಾದ ಸಂಶೋಧನೆಯೊಂದು ತೋರಿಸಿದೆ. ಅಂದರೆ 80 ಮಿಲಿಯನ್ ಯುವಜನರಿಗೆ ಅಧಿಕ ಬಿಪಿಯಿದೆ ಮತ್ತು ಇದು ಬ್ರಿಟನ್‌ನ ಜನಸಂಖ್ಯೆಗಿಂತ ಹೆಚ್ಚು. ಇಂದು ಯುವಜನರ ಜೀವನಶೈಲಿಯಲ್ಲಿ ಜಡತೆಯೇ ಹೆಚ್ಚಾಗಿರುತ್ತದೆ. ದೈಹಿಕ ಚಟುವಟಿಕೆಗಳ ಕೊರತೆ,ಹೆಚ್ಚಿನ ಒತ್ತಡ,ಅನಾರೋಗ್ಯಕರ ಆಹಾರ ಸೇವನೆಗಳು ಅಧಿಕ ಬಿಪಿಗೆ ತುತ್ತಾಗುವ ಅಪಾಯವನ್ನು ಹೆಚ್ಚಿಸುವ ಕೆಲವು ಜೀವನಶೈಲಿ ಕಾರಣಗಳಾಗಿವೆ. 18 ವರ್ಷಕ್ಕೆ ಮೇಲ್ಪಟ್ಟ ಯಾರೇ ಆದರೂ ಪ್ರತಿ ಎರಡು ವರ್ಷಗಳಿಗೊಮ್ಮೆ ಮತ್ತು 40 ವರ್ಷಕ್ಕೆ ಮೇಲ್ಪಟ್ಟವರು ಪ್ರತಿ ವರ್ಷಕ್ಕೊಮ್ಮೆ ತಮ್ಮ ರಕ್ತದೊತ್ತಡವನ್ನು ತಪಾಸಣೆ ಮಾಡಿಸಬೇಕು.

* ರಕ್ತದೊತ್ತಡ ಯಾವುದೇ ಲಕ್ಷಣಗಳನ್ನು ಪ್ರಕಟಿಸುವುದಿಲ್ಲ

ಹೆಚ್ಚಾಗಿ ಅಧಿಕ ಬಿಪಿ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ ಮತ್ತು ಇದೇ ಕಾರಣದಿಂದ ಅದನ್ನು ‘ಸದ್ದಿಲ್ಲದ ಕೊಲೆಗಾರ ’ಎಂದು ಬಣ್ಣಿಸಲಾಗುತ್ತದೆ. ಯಾವುದೇ ಲಕ್ಷಣಗಳು ಕಂಡು ಬರದಿರುವುದರಿಂದ ಜನರು ತಾವು ಚೆನ್ನಾಗಿಯೇ ಇದ್ದೇವೆ ಎಂದು ನಂಬಿಕೊಂಡಿರುತ್ತಾರೆ. ಹೀಗಾಗಿ ಅವರು ತಮ್ಮ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಅಧಿಕ ಬಿಪಿ ಇದೆಯೇ ಎನ್ನುವುದನ್ನು ತಿಳಿದುಕೊಳ್ಳಲು ತಪಾಸಣೆ ಏಕೈಕ ಮಾರ್ಗವಾಗಿದೆ,ಹೀಗಾಗಿ ನಿಯಮಿತವಾಗಿ ಬಿಪಿ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ.

* ಅಧಿಕ ರಕ್ತದೊತ್ತಡದ ಜೊತೆಗೆ ತಲೆನೋವು ಮತ್ತು ಮೂಗಿನಂದ ರಕ್ತಸ್ರಾವ ಇದ್ದರೆ ತಕ್ಷಣ ತಪಾಸಣೆ ಅಗತ್ಯ

 ತಲೆನೋವು ಮತ್ತು ಮೂಗಿನಿಂದ ರಕ್ತಸ್ರಾವ ಅಧಿಕ ಬಿಪಿಯ ಸಾಮಾನ್ಯ ಲಕ್ಷಣಗಳು ಎಂದು ಕೆಲವರು ಭಾವಿಸುತ್ತಾರೆ. ಆದರೆ ವ್ಯಕ್ತಿಯ ರಕ್ತದೊತ್ತಡ 180/120 ಎಂಎಂ ಎಚ್‌ಜಿಗಿಂತ ಹೆಚ್ಚಾಗಿದ್ದಾಗ ತುರ್ತು ವೈದ್ಯಕೀಯ ಸಂದರ್ಭದಲ್ಲಿ ಇವೆರಡು ಲಕ್ಷಣಗಳು ಕಾಣಿಸಿಕೊಳ್ಳುತ್ತವೆಯಾದ್ದರಿಂದ ತಕ್ಷಣ ವೈದ್ಯಕೀಯ ನೆರವು ಬೇಕು ಎನ್ನುವುದನ್ನು ಸೂಚಿಸುತ್ತವೆ.

* ಅಧಿಕ ಬಿಪಿ ಮಿದುಳಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ

ಅಧಿಕ ಬಿಪಿ ಮಿದುಳಿಗೆ ರಕ್ತ ಮತ್ತು ಆಮ್ಲಜನಕ ಪೂರೈಕೆಯನ್ನು ಕಡಿಮೆ ಮಾಡುತ್ತದೆ,ಅರಿವಿನ ಶಕ್ತಿಯನ್ನು ಕುಂದಿಸುತ್ತದೆ ಮತ್ತು ಬುದ್ಧಿಮಾಂದ್ಯತಯ ಅಪಾಯವನ್ನು ಹೆಚ್ಚಿಸುತ್ತದೆ. ಸುದೀರ್ಘ ಸಮಯದಿಂದ ಅಧಿಕ ಬಿಪಿ ಇದ್ದರೆ ಅದು ರಕ್ತನಾಳಗಳಲ್ಲಿ ತಡೆಗಳನ್ನೂ ಉಂಟು ಮಾಡಬಹುದು ಮತ್ತು ಇದು ಪಾರ್ಶ್ವವಾಯುವಿಕೆ ಕಾರಣವಾಗುತ್ತದೆ. ಪಾರ್ಶ್ವವಾಯುವಿನಿಂದಾಗಿ ಬುದ್ಧಿಮಾಂದ್ಯತೆಯೂ ಉಂಟಾಗಬಹುದು.

* ಮಹಿಳೆಯರೂ ಅಧಿಕ ಬಿಪಿಗೆ ತುತ್ತಾಗುತ್ತಾರೆ

 ಮಹಿಳೆಯರಿಗೆ ಅಧಿಕ ಬಿಪಿಯ ಅಪಾಯವಿಲ್ಲ ಎಂದು ಕೆಲವರು ವಾದಿಸುತ್ತಿರುತ್ತಾರೆ. ವಾಸ್ತವದಲ್ಲಿ 65 ವರ್ಷ ಪ್ರಾಯದವರೆಗೆ ಪುರುಷರು ಅಧಿಕ ಬಿಪಿಗೆ ತುತ್ತಾಗುವ ಹೆಚ್ಚಿನ ಸಾಧ್ಯತೆಗಳಿದ್ದರೆ 65 ವರ್ಷ ಪ್ರಾಯದ ಬಳಿಕ ಈ ಅಪಾಯ ಮಹಿಳೆಯರಲ್ಲಿ ಹೆಚ್ಚಾಗಿರುತ್ತದೆ. ಜನನ ನಿಯಂತ್ರ ಮಾತ್ರೆಗಳ ಸೇವನೆ,ಗರ್ಭ ಧರಿಸುವಿಕೆ ಮತ್ತು ಋತುಬಂಧ ಇವು ಮಹಿಳೆಯರಲ್ಲಿ ಅಧಿಕ ಬಿಪಿಗೆ ತುತ್ತಾಗುವ ಅಪಾಯವನ್ನುಂಟು ಮಾಡುತ್ತವೆ.

* ಅಧಿಕ ಬಿಪಿ ಜಗಳಗಂಟರು ಮತ್ತು ಉದ್ವಿಗ್ನರನ್ನು ಮಾತ್ರ ಕಾಡುತ್ತದೆ ಎನ್ನುವುದು ನಿಜವಲ್ಲ

   ನಮ್ಮ ಸುತ್ತಲಿನ ಯಾರಾದರೂ ತಾಳ್ಮೆ ಕಳೆದುಕೊಂಡು ದೊಡ್ಡ ಧ್ವನಿಯಲ್ಲಿ ಮಾತನಾಡಿದಾಗ ಅವರಿಗೆ ರಕ್ತದೊತ್ತಡ ಹೆಚ್ಚಾಗಿದೆ ಎಂದು ಸಾಮಾನ್ಯವಾಗಿ ನಾವು ಅಂದುಕೊಳ್ಳುತ್ತೇವೆ. ಸುದೀರ್ಘ ಸಮಯದ ಒತ್ತಡವು ಅಧಿಕ ಬಿಪಿಯ ಅಪಾಯವನ್ನು ಹೆಚ್ಚಿಸುತ್ತದೆಯಾದರೂ ಈ ಸಮಸ್ಯೆಯು ಶಾಂತಚಿತ್ತರನ್ನೂ ಬಿಡುವುದಿಲ್ಲ.

ಅಧಿಕ ಬಿಪಿಗೆ ಕಾರಣಗಳು:ಕುಟುಂಬದ ಇತಿಹಾಸ,ವಯಸ್ಸಾಗುವಿಕೆ,ಬೊಜ್ಜು ಅಥವಾ ಅತಿಯಾದ ದೇಹತೂಕ,ಅನಾರೋಗ್ಯಕರ ಆಹಾರ ಸೇವನೆ,ಅತಿಯಾದ ಮದ್ಯಪಾನ,ಧೂಮ್ರಪಾನ ಇವೆಲ್ಲ ಅಧಿಕ ರಕ್ತದೊತ್ತಡಕ್ಕೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತವೆ.

  ಅಧಿಕ ಬಿಪಿಯು ಸದ್ದಿಲ್ಲದೆ ಯಾರನ್ನಾದರೂ ಆಕ್ರಮಿಸಿಕೊಳ್ಳಬಹುದು ಮತ್ತು ಹೃದಯಘಾತ, ಪಾರ್ಶ್ವವಾಯುವಿನಂತಹ ಮಾರಣಾಂತಿಕ ರೋಗಗಳಿಗೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಆಗಾಗ್ಗೆ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳುವುದು ಕಾಲ ಮೀರುವ ಮುನ್ನವೇ ಅಧಿಕ ಬಿಪಿಯನ್ನು ಪತ್ತೆ ಹಚ್ಚಲು ನೆರವಾಗುತ್ತದೆ ಮತ್ತು ಮೊದಲೇ ಈ ಸಮಸ್ಯೆ ಗೊತ್ತಾದರೆ ಔಷಧಿಗಳ ನೆರವಿಲ್ಲದೆ ಅದನ್ನು ನಿಭಾಯಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News