×
Ad

ನಗರೋತ್ಥಾನ ಯೋಜನೆ ಹಣ ದುರ್ಬಳಕೆ ಆರೋಪ: ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿ ಕಚೇರಿಗೆ ಬೀಗಮುದ್ರೆ

Update: 2020-10-03 22:41 IST

ಬೆಂಗಳೂರು, ಅ.3: ನಗರೋತ್ಥಾನ ಯೋಜನೆ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪ ಹಿನ್ನೆಲೆ ಬಿಬಿಎಂಪಿಯ ಮುಖ್ಯ ಲೆಕ್ಕಾಧಿಕಾರಿ ಗೋವಿಂದರಾಜು ಅವರ ಕಚೇರಿಗೆ ಬೀಗ ಮುದ್ರೆ ಹಾಕಲಾಗಿದೆ.

ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿ ಗೋವಿಂದರಾಜು ಅವರು ಬಿಲ್ ಪಾವತಿ ಮಾಡುವಾಗ ಜೇಷ್ಠತೆ ಆಧಾರದಲ್ಲಿ ಮಾಡಬೇಕು, ಯಾವುದೇ ನಿಯಮವನ್ನು ಉಲ್ಲಂಘಿಸಬಾರದು. ಸೀನಿಯಾರಿಟಿ ಪ್ರಕಾರ ಮೊದಲು ಕಾಮಗಾರಿ ಮುಗಿಸಿದವರಿಗೆ ಬಿಲ್ ಪಾವತಿ ಮಾಡಬೇಕು. ಜೊತೆಗೆ ಸರಕಾರ ಒಂದು ಕೆಲಸಕ್ಕೆ  ಬಿಡುಗಡೆ ಮಾಡಿದ ಹಣವನ್ನು ಅದೇ ಕೆಲಸಕ್ಕೆ ಬಳಸಬೇಕು. ಆದರೆ, ಮುಖ್ಯ ಲೆಕ್ಕಾಧಿಕಾರಿ ಯಾರ ಗಮನಕ್ಕೂ ತಾರದೆ ನಿಯಮಗಳನ್ನು ಉಲ್ಲಂಘನೆ ಮಾಡಿದ ಹಿನ್ನೆಲೆ ಮುಖ್ಯ ಲೆಕ್ಕಾಧಿಕಾರಿ ಕಚೇರಿಗೆ ಬೀಗಮುದ್ರೆ ಹಾಕಿದ್ದು, ಉನ್ನತ ಮಟ್ಟದ ತಂಡ ರಚನೆ ಮಾಡಿ ತನಿಖೆ ಮಾಡಿ ರಾಜ್ಯ ಸರಕಾರದ ಗಮನಕ್ಕೆ ತರಲಾಗುವುದು ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ರಾಜ್ಯ ಹಣಕಾಸು ಆಯೋಗದ ಅನುದಾನವನ್ನು ಬಿಬಿಎಂಪಿ ಕಾಮಗಾರಿಗಳಿಗೆ ಪಲ್ಲಟ ಮಾಡಿ 5.83 ಕೋಟಿ ರೂ. ಬಿಲ್ ಪಾವತಿ ಮಾಡಿದ್ದಾರೆ. ಪಾಲಿಕೆಯಲ್ಲಿ ಯಾವುದೇ ಬಿಲ್ ಪಾವತಿ ಮಾಡಬೇಕಾದರೂ ಐ.ಎಫ್.ಎಮ್.ಎಸ್ ಸಾಫ್ಟ್ ವೇರ್ ಮುಖಾಂತರವೇ ಮಾಡಬೇಕು. ಆದರೆ ಸಾಫ್ಟ್ ವೇರ್ ಬದಿಗೊತ್ತಿ, ಗಾಂಧಿನಗರದ ಕಾರ್ಯಪಾಲಕ ಅಭಿಯಂತರರಿಗೆ 6.96 ಕೋಟಿ ರೂ. ಬಿಲ್ ಪಾವತಿಯನ್ನು ಆಫ್‍ಲೈನ್ ಮೂಲಕ ಮಾಡಿರುವುದು ಗಮನಕ್ಕೆ ಬಂದಿದ್ದು, ಅದನ್ನು ತಡೆಹಿಡಿಯಲಾಗಿದೆ ಎಂದರು.

ಪ್ರತೀ ಕಾಮಗಾರಿಗಳಿಗೆ ಒಂದೊಂದು ರುಪಾಯಿಗೂ ಕಷ್ಟ ಪಡುವಾಗ ಹಿರಿಯ ಅಧಿಕಾರಿಯಾಗಿ ಈ ರೀತಿ ತಪ್ಪು ಮಾಡಿರುವುದು ಸರಿಯಲ್ಲ. ಹೆಚ್ಚಿನ ಹಣ ದುರುಪಯೋಗ ಆಗಿರುವುದು ಕಂಡುಬಂದಿದ್ದರೆ, ಅಧಿಕಾರಿ ಮೇಲೆ ಕ್ರಿಮಿನಲ್ ಕೇಸ್ ಕೂಡಾ ದಾಖಲಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News