ಬಾಬೂ, ನಿನ್ನ ಆಯ್ಕೆ ಯಾವುದು?

Update: 2020-10-03 18:34 GMT

ಹಿಂದೂ ಬಹುಸಂಖ್ಯಾತವಾದ ಮತ್ತು ಜನಾಂಗೀಯ ಹಿಂಸೆಗಳ ಮೇಲಿನ ಅಧ್ಯಯನ ಹಲವಾರು ಪುಸ್ತಕಗಳಿಗೆ ಜನ್ಮ ಕೊಟ್ಟಿದ್ದು, ರಾಜಕೀಯ ಬಲ ಪಂಥೀಯತೆಯಲ್ಲಿರುವ ಕೆಡಕುಗಳ ಮೂಲವನ್ನು ಗುರುತಿಸಿದೆ. ಅಪರ್ಣಾ ವೈದಿಕ್‌ರ "My Son's inheritance'-ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಗಳ ಮತ್ತಷ್ಟು ಆಳಕ್ಕೆ ಇಳಿದು ಮಾನಸಿಕ ದೈಹಿಕ ಹಿಂಸೆಗಳು ಭಾರತೀಯ ಸಮಾಜೋ- ರಾಜಕೀಯದಲ್ಲಿ ಪಾರಂಪರಿಕವಾಗಿ ಬಂದಿರುವಂಥವೇ ಹೊರತು ಇತ್ತೀಚಿನ ಸಿದ್ಧಾಂತಗಳಲ್ಲ ಎಂಬುದನ್ನು ತೋರಿಸುತ್ತದೆ.

ತಮ್ಮ ಮಗ ‘ಬಾಬು’ವನ್ನು ಉದ್ದೇಶಿಸಿದಂತೆ, ಸುಲಭವಾಗಿ ಹರಿಯುವ ನಿರೂಪಣೆಯ ಈ ಪುಸ್ತಕದಲ್ಲಿ ಲೇಖಕಿ ಹಿಂಸೆ ಭಾರತದ ಕೌಟುಂಬಿಕ ಮತ್ತು ರಾಷ್ಟ್ರೀಯ ಪರಂಪರೆ ಎಂಬುದನ್ನು ತಳ್ಳಿಹಾಕಲಾರದು ಎನ್ನುತ್ತಾರೆ. ಆಕೆ ಹಿಂಸೆಯನ್ನು ಹಿಂದೂ ಮತ್ತು ಮೈನಾರಿಟಿಗಳು ಮುಖ್ಯವಾಗಿ ಹಿಂದೂ-ಮುಸ್ಲಿಮರ ಮಧ್ಯೆ ಕೇಂದ್ರಿತಗೊಳಿಸಿ ಇದು ಆಗಾಗ ಕ್ರಿಯೆ-ಪ್ರತಿಕ್ರಿಯೆ ರೀತಿಯ ನ್ಯಾಯವೆನಿಸಿಕೊಳ್ಳುತ್ತದೆ ಎನ್ನುತ್ತಾರೆ. ವೈದಿಕ್ ಹೇಳುವಂತೆ ಹಿಂದೂಗಳ ಮಧ್ಯದಲ್ಲೇ ಆಳವಾದ ಮಾನಸಿಕವಾದ ಹಿಂಸೆ ನಡೆಯುತ್ತಿದೆ. ನಾವು ನೆನಪಿಸಿಕೊಳ್ಳುವಂತೆ ಭಾರತದ ಬಹುತೇಕ ಮುಸ್ಲಿಮರು ಮತ್ತು ಕ್ರೈಸ್ತರು- ‘ಅನಾರ್ಯರು’- ಕೆಳಜಾತಿಯವರಾಗಿದ್ದು, ಅಸ್ಪಶ್ಯತೆ ಮತ್ತು ದಬ್ಬಾಳಿಕೆಗಳಿಂದ ನರಳಿ ಮತಾಂತರಗೊಂಡವರು.

ವೈದಿಕ್, ಜನರ ಮೇಲೆ ಜನರ ಹಿಂಸೆಯ ಮುಂದುವರಿಕೆಗೆ, ಹಿಂಸೆಯ ಇರುವಿಕೆಯನ್ನೇ ನಿರಾಕರಿಸಿ, ನಮ್ಮದು ಗಂಗೆ, ಬುದ್ಧರ ನಾಡು ಎಂದೂ, ಈ ಶಾಂತಿ ಪ್ರಿಯ ನೆಲದಲ್ಲಿ ಶತಮಾನಗಳಿಂದ ವಿವಿಧ ಜನಾಂಗಗಳು ಸೌಹಾರ್ದದ ಸಹಬಾಳ್ವೆ ನಡೆಸುತ್ತಿದ್ದಾರೆ ಎಂಬ ಕಾಲ್ಪನಿಕತೆಗೂ ಸಂಬಂಧವಿದೆ. ನಮಗೆ ಅಸೌಕರ್ಯವೆನಿಸುವ ಸತ್ಯಗಳನ್ನು ದೂರವಿಡುವುದು ನಮ್ಮನ್ನು ವೌನವಾಗಿಸುತ್ತದೆ, ಇಲ್ಲವೇ ಅಹಿಂಸೆಯನ್ನು ವೈಭವೀಕರಿಸುವಂತೆ ಮಾಡುತ್ತವೆ. ಈ ವೌನ, ಈ ಉದ್ದೇಶಪೂರ್ವಕ ಚರಿತ್ರೆಯ ವಿಕೃತೀಕರಣ ನಮ್ಮೆಳಗೆ ನುಗ್ಗಿ ನಮ್ಮ ಆತ್ಮಗಳನ್ನು ಹಿಂಸೆಗೀಡು ಮಾಡುತ್ತವೆ ಎನ್ನುತ್ತಾರೆ. ಭಾರತದಲ್ಲಿ ಗತಕಾಲದಲ್ಲಿದ್ದ ಜನಾಂಗೀಯ ದ್ವೇಷವನ್ನು ಪ್ರತಿಪಾದಿಸಲು ಲೇಖಕಿ ತಮ್ಮದೇ ಕುಟುಂಬ ಮತ್ತು ನೆರೆಯವರ ಉದಾಹರಣೆಗಳನ್ನು ನೀಡಿದ್ದಾರೆ. ಕೋಮುದ್ವೇಷ ಪೂರ್ವಗ್ರಹದ ಬೀಜಗಳು ತಲೆಮಾರಿನಿಂದ ತಲೆಮಾರಿಗೆ ವಿದ್ಯಾವಂತ ಹಿಂದೂಗಳಲ್ಲೂ ವರ್ಗಾಯಿಸಲ್ಪಟ್ಟು ಇಂದಿಗೂ ಪ್ರಯತ್ನ ಪೂರ್ವಕವಾಗಿ ತಪ್ಪುಕಲ್ಪನೆ ಮತ್ತು ವಾಸ್ತವದತ್ತ ನಿರ್ಲಕ್ಷವನ್ನು ಬೆಳೆಸುತ್ತಿವೆ. ಗೋರಕ್ಷಣೆಗೆ ವೈದಿಕ್ ಇಡೀ ಒಂದು ಅಧ್ಯಾಯ ಮೀಸಲಿಟ್ಟಿದ್ದಾರೆ. ಈ ಅಂಶವನ್ನು ಸ್ವಾತಂತ್ರಪೂರ್ವ ಭಾರತಕ್ಕೆ ಒಯ್ಯುತ್ತಾರೆ. ದೇಶದ ಸಾಂಸ್ಕೃತಿಕ ರಾಷ್ಟ್ರೀಯತೆಯಲ್ಲಿ ಸ್ವಾತಂತ್ರ ಹೋರಾಟದ ಕುರುಹುಗಳಿದ್ದವು ಎಂದು ಗುರುತಿಸುತ್ತಾರೆ. ಕೃತಿಯ ಪ್ರಧಾನ ಭಾಗ ಎಂದರೆ ಪ್ರಾಣಿ ಕೇಂದ್ರಿತ ಬುಡಕಟ್ಟು ಸಮಾಜದಲ್ಲಿ ಗೋವು ಸೇರಿದಂತೆ ಪ್ರಾಣಿಗಳ ಮೇಲಾಗುತ್ತಿದ್ದ ಕ್ರೂರ ಹಿಂಸೆಯ ಚಿತ್ರಣ ಇಂದಿನ ‘ಸಾತ್ವಿಕ’ ಹಿಂದೂಗಳನ್ನು ಕೆರಳಿಸುವಂತಿದೆ. ರಕ್ತಸಿಕ್ತ ಮೇಕೆಗಳು, ಎಳಗಂದಿ ದನದ ದಪ್ಪಹಾಲಿನ ಪದಾರ್ಥಗಳ ಗ್ರಾಫಿಕ್ ವರ್ಣನೆ ದಿಟ್ಟತನದ್ದಾಗಿದ್ದು, ಭಾರತೀಯ ಹಿಂದೂಗಳ ಜೀವನಶೈಲಿಯಲ್ಲಿ ಹಿಂಸೆ ಕಡ್ಡಾಯವಾಗಿತ್ತೆಂಬುದನ್ನು ಸಾರುತ್ತವೆ. ಲೇಖಕಿ ನಿರಾಶಾವಾದದೊಂದಿಗೆ ಕೊನೆಗೊಳಿಸುವುದಿಲ್ಲ. ಹಿಂಸೆಯ ಮುಖವನ್ನು ಅನಾವರಣ ಮಾಡಿದ ಬಳಿಕವೂ ತಮ್ಮ ಮಗ ಬಾಬುವಿಗೆ ‘‘ಈ ವಂಶ ಪಾರಂಪರಿಕವಾದ ಹಿಂಸೆಯನ್ನು ಒಪ್ಪಿಕೊಳ್ಳುವ, ತಿರಸ್ಕರಿಸುವ, ಅದರ ವಿರುದ್ಧ ಸೆಣಸುವ ಸ್ವಾತಂತ್ರ ಅವನಿಗಿದೆ’’ ಎಂಬ ಸಂದೇಶ ರವಾನಿಸಿದ್ದಾರೆ. ಹಿಂಸೆ ಅಧಿಕಾರಕ್ಕೆ ದಾರಿಯಾಗುವುದರ ಬಗ್ಗೆ ಚರ್ಚಿಸಿರುವ ಈ ಕೃತಿಯಲ್ಲಿ ಹೇಗೆ ಪಿತೃಪ್ರಧಾನ ಸಮಾಜ ನಿರ್ಮಾಣ ಲಿಂಗಭೇದವನ್ನು ಸೃಷ್ಟಿಸಿ, ಚಲಾಯಿಸುತ್ತದೆ ಮತ್ತು ಹಿಂಸೆ ಹೇಗೆ ಲಿಂಗಾಧಾರಿತವಾಗಿದೆ ಎಂಬ ಅಂಶಗಳೂ ಚರ್ಚಿತವಾಗಿವೆ. ಜನ ನಿರ್ಲಕ್ಷಿಸ ಬಯಸುವ ರಾಜಕಾರಣ ಮತ್ತು ಧರ್ಮಗಳ ನಡುವಿನ ಸಂಬಂಧದ ಪ್ರಸ್ತಾಪದೊಂದಿಗೆ ಲೇಖಕಿ ಮುಖ್ಯ ವಿಷಯಕ್ಕೆ ಹತ್ತಿರವಾಗಿದ್ದಾರೆ. ಒಂದು ಅಧಿಕಾರ ವ್ಯವಸ್ಥೆಯಾಗಿ ಧರ್ಮ ಪಿತೃಪ್ರಧಾನವಾಗಿದ್ದು, ವಿರುದ್ಧ ಲಿಂಗಿಯನ್ನು ತುಳಿಯುತ್ತಿರುವುದು ವಾಸ್ತವ.

ಒಟ್ಟಿನಲ್ಲಿ ಅಪರ್ಣಾ ವೈದಿಕ್ ಭಾರತವೊಂದು ಶಾಂತಿಯುತ ಮತ್ತು ಸರ್ವರನ್ನು ಒಳಗೊಳ್ಳುವ (ಹಿಂದೂ) ಸಂಸ್ಕೃತಿಯನ್ನು ಪಾರಂಪರಿಕವಾಗಿ ಹೊಂದಿದೆ ಎಂಬ ಮಿಥ್ಯೆಯ ಗುಳ್ಳೆಯನ್ನು ಒಡೆದು ಉತ್ತಮ ಕೆಲಸ ಮಾಡಿದ್ದಾರೆ. ವಿದ್ವತ್ಪೂರ್ಣ, ಸಂಕೀರ್ಣ ನಿರೂಪಣೆ ಇಲ್ಲದ ಈ ಕೃತಿ ಬಹುಮಂದಿ ಓದುಗರನ್ನು ತಲುಪುವ ಸಾಧ್ಯತೆಯೊಂದಿಗೆ, ಇತಿಹಾಸಕಾರರ ಗಂಭೀರ ಚರ್ಚೆಗಳಿಂದ ಹೊರಗುಳಿಯುವ ಅಪಾಯವೂ ಇದೆ. ನಮ್ಮ ಪ್ರಾಚೀನ ನಾಡಿನ ಪರಂಪರೆಯನ್ನು ತಮ್ಮ ರಾಜಕೀಯ ಸಿದ್ಧಾಂತಗಳಿಗೆ ತಕ್ಕಂತೆ ಕಟ್ಟುತ್ತಿರುವ ಕೆಲಸದಲ್ಲಿ ಹಸ್ತಕ್ಷೇಪ ಮಾಡುವ ಸತ್ವ ಹೊಂದಿರುವ ಈ ಕೃತಿಯ ಓದುಗರೆಲ್ಲರೂ‘ಬಾಬು’ಗಳೇ ಮತ್ತು ಅವರ ಆಯ್ಕೆ ವೈದಿಕ್ ಪರೋಕ್ಷವಾಗಿ ತೋರುವ ಹಾದಿಯೇ ಆದಲ್ಲಿ- ಭಾರತ ಶಾಂತಿಪ್ರಿಯ ಎಂಬ ಕಲ್ಪನೆ ನಿಜವಾದೀತು.

-ಸುಪರ್ಣಾ ಬ್ಯಾನರ್ಜಿ

ಕನ್ನಡಕ್ಕೆ: ಕಸ್ತೂರಿ

ಕೃಪೆ: thehindu

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News