ನಾಟಕ ರೂಪದಲ್ಲಿ ಮೊಕಾಶಿ ಕಾದಂಬರಿ

Update: 2020-10-04 19:30 GMT

ಡಾ.ಶಂಕರ ಮೊಕಾಶಿ ಪುಣೇಕರ ಅವರು ಕನ್ನಡ ಸಾಹಿತ್ಯದ ಮುಖ್ಯ ಕಾದಂಬರಿಕಾರರು ಮತ್ತು ಬಹುಮುಖಿ ವ್ಯಕ್ತಿತ್ವದ ಸಾಹಿತಿ. ಭಾರತೀಯ ಹಾಗೂ ಪಾಶ್ಚಾತ್ಯ ತತ್ವಶಾಸ್ತ್ರದಲ್ಲಿನ ಬಹುದೊಡ್ಡ ಸ್ಕಾಲರ್. ಅವರ ಮೂರು ಕಾದಂಬರಿಗಳು ಕನ್ನಡ ಸಾಹಿತ್ಯದಲ್ಲಿ ಗಮನಾರ್ಹವಾದುದು. ಇವುಗಳಲ್ಲಿ 'ನಟನಾರಾಯಣಿ' ತನ್ನ ನಾಟಕೀಯ ಗುಣಗಳಿಂದಲೇ ಗಮನ ಸೆಳೆದ ಕಾದಂಬರಿ.

ಇಲ್ಲಿ ಬರುವ ಪಾತ್ರಗಳ ಅಂತರಂಗ ಹಾಗೂ ಬಹಿರಂಗದ ಚಿತ್ರಣ, ಪತ್ತೇದಾರಿ ಕಥನ ತಂತ್ರ ಎಲ್ಲವೂ ಕನ್ನಡಕ್ಕೆ ಹೊಸತು. ಅನಾಥನಾದ ಅಡಿಗೆಯ ಹುಡುಗನೊಬ್ಬ ಆಕಸ್ಮಿಕವಾಗಿ ರಂಗನಟನಾಗಿ ಬೆಳೆದು, ಹಲವು ರೂಪಾಂತರಗಳಿಗೆ ಒಳಗಾಗುವ ಮತ್ತು ಅವನ ಬದುಕಿನಲ್ಲಿ ನಡೆದ ವಿಚಿತ್ರ ಒತ್ತಡಗಳನ್ನು ಕಾದಂಬರಿ ಚಿತ್ರಿಸುತ್ತದೆ. ಈ ಕಾದಂಬರಿಯನ್ನು ಆಧಾರವಾಗಿಟ್ಟುಕೊಂಡು ನಟರಾಜ್ ಹೊನ್ನವಳ್ಳಿ ಮತ್ತು ಡಾ. ಎಚ್. ವಿ. ವೇಣುಗೋಪಾಲ್ 'ಅಭಿನವ ಬೃಹನ್ನಳಾ ವಿಳಾಸ' ನಾಟಕವನ್ನು ರಚಿಸಿದ್ದಾರೆ. ಇಪತ್ತನೆಯ ಶತಮಾನದ ಪೂರ್ವಾರ್ಧದ ಕಾಲಮಾನದಲ್ಲಿ ನಡೆಯುವ ಕಥಾನಕವನ್ನು ಈ ನಾಟಕ ಒಳಗೊಂಡಿದೆ.

ನಾಣ ಎಂಬ ಪಾತ್ರದ ಸುತ್ತ ಹೆಣೆಯಲಾಗಿರುವ ಈ ಕೃತಿ, ನಾಣನ ವೈಯಕ್ತಿಕ ಜೀವನದ ಹಲವು ಮಜಲುಗಳನ್ನು ಚಿತ್ರಿಸುವಂತೆ ಆ ಕಾಲದ ಹಲವು ಮುಖ್ಯ ಸಾಮಾಜಿಕ, ಸಾಂಸ್ಕೃತಿಕ ರಾಜಕೀಯ ವಿದ್ಯಮಾನಗಳನ್ನು ನಮ್ಮ ಮುಂದಿಡುತ್ತದೆ. ಒಟ್ಟು ಹದಿನೇಳು ದೃಶ್ಯಗಳುಳ್ಳ ಈ ನಾಟಕವನ್ನು ನಟರಾಜ್ ಹೊನ್ನವಳ್ಳಿ ಅವರು ನೀನಾಸಂಗಾಗಿ ರಚಿಸಿದ್ದಾರೆ. 'ನಾಟಕದೊಳಗೊಂದು ನಾಟಕ' ಎನ್ನುವ ಸನ್ನಿವೇಶದೊಂದಿಗೆ ಬೆಳೆಯುವ ಈ ಕೃತಿ, ನಟನೊಬ್ಬನ ಒಳ ಹೊರಗಿನ ಸಂಘರ್ಷವನ್ನು ಪರಿಣಾಮಕಾರಿಯಾಗಿ ತೆರೆದಿಡುತ್ತದೆ. ನೀನಾಸಂ ಕಂಪೆನಿ ನಾಟಕವಲ್ಲ. ಅದೊಂದು ಪ್ರಯೋಗ ಶಾಲೆ. ಪ್ರಾಚೀನ ರಂಗಭೂಮಿಯ ಜೊತೆಗೆ ಆಧುನಿಕ ಪರಿಕಲ್ಪನೆಗಳನ್ನು ಸಮರ್ಥವಾಗಿ ಹೊಂದಾಣಿಸುತ್ತಾ, ಈ ಕಂಪೆನಿ ಬೆಳೆದು ಬಂದಿದೆ.

ಹಳೆಯ ನಾಟಕಗಳನ್ನು ಹೊಸ ಪರಿಕರಗಳ ಜೊತೆಗೆ ಪ್ರಯೋಗ ಮಾಡುತ್ತಾ, ಆ ಮೂಲಕ ಹೊಸ ಹೊಳಹುಗಳನ್ನು ನೀಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ, ನಟನಾರಾಯಣಿ ಕಾದಂಬರಿಯ ವಸ್ತು ಬಹಳ ಹಿಂದಿನದು. ಅದನ್ನು ಹೊಸ ತಂತ್ರಗಳ ಮೂಲಕ ಹೊಸದಾಗಿ ಹೇಳುವ ಪ್ರಯತ್ನ ಈ ನಾಟಕ ಕೃತಿಯಲ್ಲಿದೆ. ಮಿಸ್ರೆಡ್ ಬುಕ್ ಹೊರತಂದಿರುವ 90 ಪುಟಗಳ ಈ ಕೃತಿಯ ಮುಖಬೆಲೆ 120 ರೂಪಾಯಿ. ಆಸಕ್ತರು ದೂರವಾಣಿ 9606546903 ಅನ್ನು ಸಂಪರ್ಕಿಸಬಹುದು.

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News